ತುಮಕೂರು:
ತುಮಕೂರು ನಗರದಲ್ಲಿ ನಾಯಿಕೊಡೆಗಳಂತೆ ಹಬ್ಬಿರುವ ಅನಧಿಕೃತ ಪ್ರವಾಸಿ ಕಛೇರಿಗಳಿಗೆ ಕಡಿವಾಣ ಹಾಕಬೇಕೆಂದು ಶ್ರೀ ಲಕ್ಷ್ಮೀರಂಗನಾಥ ಟೂರ್ಸ್ & ಟ್ರಾವೆಲ್ಸ್ (ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ)ನ ವ್ಯವಸ್ಥಾಪಕ ನಿರ್ದೇಶಕರಾದ ಎ. ಮಹಾಲಿಂಗಯ್ಯ ನವರು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಜೆ. ತಿಪ್ಪೇಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತುಮಕೂರು ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆಯದೆ ತುಮಕೂರು ನಗರಾಧ್ಯಂತ ಅನಧಿಕೃತವಾಗಿ ಟೂರ್ಸ್ ಪ್ಯಾಕೇಜ್‍ಗಳನ್ನು ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಸರ್ಕಾರದ ಮಾನ್ಯತೆ ಪಡೆದು ಪ್ರತಿವರ್ಷ ಸರ್ಕಾರಿ ನವೀಕರಣಗೊಂಡು ಕಾನೂನು ಬದ್ಧವಾಗಿ ಟೂರ್ಸ್ & ಟ್ರಾವೆಲ್ಸ್ ನಡೆಸುವವರಿಗೆ ಇಂಥವರಿಂದ ನಷ್ಟ ಉಂಟಾಗುತ್ತಿದೆ.
ಪ್ರವಾಸಿಗರಿಗೆ ಸರಿಯಾದ ಸೌಲಭ್ಯಗಳನ್ನು ನೀಡದೆ, ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಗಳಂತೆ ನಡೆಯದೆ ನೊಂದಾಯಿತ ಟೂರ್ಸ್ & ಟ್ರಾವೆಲ್ಸ್ ನವರ ಕಾರ್ಯಕ್ಷಮತೆಗೆ ಮಸಿ ಬಳಿಯುವಂತಾಗುತ್ತಿದೆ ಎಂದು ಮನವಿಯಲ್ಲಿ ಎ. ಮಹಾಲಿಂಗಯ್ಯ ಆರೋಪಿಸಿದ್ದಾರೆ.
ತುಮಕೂರು ಮಹಾನಗರ ಪಾಲಿಕೆಯಿಂದಾಗಲೀ, ಕಾರ್ಮಿಕ ಇಲಾಖೆಯಿಂದಾಗಲೀ ಮತ್ತು ಪ್ರವಾಸೋದ್ಯಮ ಇಲಾಖೆಯಿಂದಾಗಲಿ ಯಾರಿಂದಲೂ ಯಾವುದೇ ರೀತಿಯ ಪರವಾನಗಿಯನ್ನು ಪಡೆಯದೆ ಅಕ್ರಮವಾಗಿ ಟೂರ್ಸ್ & ಟ್ರಾವೆಲ್ಸ್ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು, ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಸದೇ ಇಲಾಖೆ ಮಾರ್ಗಸೂಚಿಗಳನ್ನು ಅನುಸರಿಸದೆ ಇರುವ ಅನಿಧಿಕೃತ ಟೂರ್ಸ್ & ಟ್ರಾವೆಲ್ಸ್ ಗಳನ್ನು ಮುಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.