ಕ್ಷಮೆ ಕೇಳದಿದ್ದರೆ ಕಪ್ಪು ಬಾವುಟ ಪ್ರದರ್ಶನ

ದಾವಣಗೆರೆ:

       ವೀರಶೈವ-ಲಿಂಗಾಯತ ಸಮಾಜದ ಅವಹೇಳನ ಮಾಡಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪನವರು, ನಮ್ಮ ಸಮಾಜದ ಕ್ಷಮೆ ಕೇಳದಿದ್ದದರೆ, ಯಾವುದೇ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ಹಾಜರಾಗುವ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಎಚ್ಚರಿಸಿದ್ದಾರೆ.

         ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈ.ರಾಮಪ್ಪನವರು ವೀರಶೈವ-ಲಿಂಗಾಯತ ಸಮಾಜದ ಬಗ್ಗೆ ಅಹವೇಳನ ಮಾಡುವ ಮೂಲಕ ದೌರ್ಜನ್ಯ ಎಸಗಿರುವುದಲ್ಲದೇ, ಕ್ಷಮೆ ಕೇಳುವುದಿಲ್ಲ ಎಂಬುದಾಗಿ ಸವಾಲು ಸಹ ಹಾಕಿದ್ದಾರೆ. ಒಂದು ವೇಳೆ ಅವರು ಮಾಡಿರುವ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳದಿದ್ದರೆ, ರಾಮಪ್ಪ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಡೆಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು.

       ತರಳಬಾಳು ಜಗದ್ಗುರು ಕರೆದರೂ ಸಹ ಅವರ ಬಳಿಯೂ ಕ್ಷಮೆ ಕೇಳದೇ, ನಡೆದ ವಿಷಯವನ್ನು ಹೇಳಿ ಬರುತ್ತೇನೆ ಎಂಬುದಾಗಿ ಉದ್ಧಟತನ ಮೆರೆದಿದ್ದಾರೆ. ಮನುಷ್ಯನಿಗೆ ಅಹಂಕಾರ ಇರಬೇಕು. ಆದರೆ, ದುರಹಂಕಾರ ಇರಬಾರದು. ಎಲ್ಲರನ್ನು ಅಪ್ಪಿಕೊಂಡು ಹೋಗುವ ಶಾಂತಿಯುತ ವೀರಶೈವ-ಲಿಂಗಾಯತ ಸಮಾಜದ ಮೇಲೆ ರಾಮಪ್ಪ ಇಲ್ಲಸಲ್ಲದ ಆರೋಪ ಮಾಡಿರುವುದ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

       ಚುನಾವಣೆಯ ಸಂದರ್ಭದಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರು ಆಯಾ ಪಕ್ಷಗಳ ಪರವಾಗಿ ಮತ ಕೇಳುವುದು ಸರ್ವೇ ಸಮಾನ್ಯ. ಆದರೆ, ಲಿಂಗಾಯತ ಸಮುದಾಯಕ್ಕೆ ಸೇರಿದವರು ಒಂದು ಪಕ್ಷದ ಪರವಾಗಿ ಮತ ಯಾಚಿಸದರೆಂಬ ಕಾರಣಕ್ಕೆ ಆ ಇಡೀ ಸಮಾಜವನ್ನು ಹೀಯಾಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

      ರಾಮಪ್ಪ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗುವ ಸಂದರ್ಭದಲ್ಲಿ, 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರಿಗೆ ಬೇಕಾಗಿದ್ದ ವೀರಶೈವ-ಲಿಂಗಾಯತರು ಈಗ ಏಕೆ ಬೇಡ? ಎಂದು ಪ್ರಶ್ನಿಸಿದ ಅವರು, ರಾಮಪ್ಪನವರೇ ಇನ್ನೂ ಕಾಲ ಮಿಂಚಿಲ್ಲ. ನಮ್ಮ ಜಗದ್ಗುರು ಹಾಗೂ ಹಿರಿಯರ ಬಳಿ ಹೋಗಿ ಕ್ಷಮೆ ಕೇಳಿ, ಮಾಡಿರುವ ತಪ್ಪನ್ನು ತಿದ್ದಿಕೊಳ್ಳಿ ಎಂದು ಸಲಹೆ ನೀಡಿದರು.

         ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 12 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಅಹಿಂದ ವರ್ಗವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ. ಆದರೆ, ವೀರಶೈವ-ಲಿಂಗಾಯತರು ಹಿಂದುಳಿದವರು ಎಂಬುದನ್ನು ಅವರು ಮರೆಯ ಬಾರದು ಎಂದು ಸೂಚ್ಯವಾಗಿ ತಿಳಿಸಿದರು.

       ಸಮಾಜದ ಮುಖಂಡ ಎ.ಆರ್.ಉಜ್ಜಿನಪ್ಪ ಮಾತನಾಡಿ, ರಾಮಪ್ಪನವರು ನಾನು ಎಲ್ಲೂ ವೀರಶೈವ-ಲಿಂಗಾಯತ ಪದ ಬಳಸಿಲ್ಲ ಎನ್ನುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಈಶ್ವರ ಬಂದು ನಿಮ್ಮ ಕಾಲಿಗೆ, ಕೊರಳಿಗೆ, ಕೈಗೆ ಲಿಂಗಾ ಕಟ್ಟಿದ್ದಾನೆಯೇ? ಎಂಬುದಾಗಿ ಏಕ ವಚನದಲ್ಲಿ ಮಾತನಾಡಿದ್ದಾರೆ. ಹಾಗಾದರೆ, ಲಿಂಗಕಟ್ಟುವವರು ಯಾವ ಸಮಾಜದವರು ಎಂಬುದನ್ನು ರಾಮಪ್ಪ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

      ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಿ.ಶಿವಯೋಗಪ್ಪ, ಸುಭಾಷ್‍ಚಂದ್ರ ಭೋಸ್, ಅಣಬೇರು ಜೀವನಮೂರ್ತಿ, ಆರ್.ಟಿ.ಪ್ರಶಾಂತ್, ಶಂಭು ಉರೇಕೊಂಡಿ, ಮಹಾಂತೇಶ್ ವಿ. ಒಣರೊಟ್ಟಿ, ಅಗಸನಕಟ್ಟೆ ಶಿವಮೂರ್ತಿ, ಐಗೂರು ಚಿದಾನಂದ್, ಕಮಾರ್ ಮಳ್ಳೇಕಟ್ಟೆ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link