ಚಿತ್ರದುರ್ಗ:
ಬೆಳಗಟ್ಟ ಗ್ರಾ.ಪಂ.ಗೆ ಸೇರಿದ ವಿವಿಧ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಹಾಹಾಕಾರವನ್ನು ನೀಗಿಸುವಂತೆ ನೂರಾರು ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹಾಯ್ಕಲ್, ಕೋಟೆಹಟ್ಟಿ, ಚಿನ್ನೂರು ತಿಪ್ಪಯ್ಯನಹಟ್ಟಿ, ಹಾಯ್ಕಲ್ ಗೊಲ್ಲರಹಟ್ಟಿ, ಹಳೆಚೂರಿ ಪಾಪಯ್ಯನಹಟ್ಟಿ, ಹೊಸಚೂರಿ ಪಾಪಯ್ಯನಹಟ್ಟಿಯ ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮೂರ್ನಾಲ್ಕು ತಿಂಗಳುಗಳಿಂದ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು.ಬಿಲ್ ಆಗಿಲ್ಲ ಎಂದು ಏಕಾಏಕಿ ಟ್ಯಾಂಕರ್ ನೀರು ನಿಲ್ಲಿಸಿರುವುದರಿಂದ ಐದಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಭೀಕರ ಕ್ಷಾಮ ತಲೆದೋರಿದೆ. ಕೊಳವೆಬಾವಿಗಳಲ್ಲಿಯೂ ನೀರಿ ಬತ್ತಿ ಹೋಗಿರುವುದರಿಂದ ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಉಲ್ಬಣಿಸಿ ಬಿರುಬೇಸಿಗೆಯ ದಾಹದಿಂದ ತತ್ತರಿಸು ವಂತಾಗಿದೆ.
ಮೂಕಪ್ರಾಣಿ ಜಾನುವಾರುಗಳು ಪರಿತಪಿಸುತ್ತಿವೆ. ಗ್ರಾ.ಪಂ.ವತಿಯಿಂದ ಇದುವರೆವಿಗೂ ನೀರು ಸರಬರಾಜು ಮಾಡಲಾಗುತ್ತಿತ್ತು. ಬಿಲ್ ಪಾವತಿಯಾಗಿಲ್ಲವೆಂದು ಟ್ಯಾಂಕರ್ ಮಾಲೀಕರಗಳು ನೀರು ನಿಲ್ಲಿಸಿರುವುದರಿಂದ ಹತ್ತಾರು ಕಿ.ಮೀ.ದೂರ ಹೋಗಿ ನೀರು ಹೊತ್ತು ತರುವಂತಾಗಿದೆ. ಕೂಡಲೆ ಟ್ಯಾಂಕರ್‍ಗಳ ಮೂಲಕ ನೀರು ನೀಡುವಂತೆ ಪ್ರತಿಭಟನಾನಿರತ ಮಹಿಳೆಯರು ಅಪರ ಜಿಲ್ಲಾಧಿಕಾರಿಯನ್ನು ಕೋರಿದರು.
ಮಹಿಳೆ ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲಾ ದಿನವಿಡಿ ನೀರಿಗಾಗಿಯೇ ಪರದಾಡುವಂತಾಗಿದೆ. ಅನೇಕ ಬಾರಿ ಗ್ರಾ.ಪಂ.ಗೆ ಮನವಿ ಮಾಡಿದ್ದರೂ ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ತಕ್ಷಣವೆ ನೀರು ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.ಗ್ರಾ.ಪಂ.ಸದಸ್ಯ ಸೂರಯ್ಯ, ರವಿಚಂದ್ರ, ಬೋರಯ್ಯ, ಹರೀಶ್, ಸುರೇಂದ್ರ, ರಾಧಮ್ಮ, ಬೋರಮ್ಮ, ಪಾಪಮ್ಮ, ಮೀನಾಕ್ಷಮ್ಮ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ