ಚಳ್ಳಕೆರೆ
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮದ ಆಂಧ್ರ ಪ್ರದೇಶದ ಗಡಿಭಾಗಕ್ಕೆ ಕೇವಲ 10 ಕಿ.ಮೀ ದೂರವಿದ್ದು, ಕಳೆದ ಕೆಲವು ವರ್ಷಗಳ ಮಳೆ ವೈಪಲ್ಯದ ಹಿನ್ನೆಲೆಯಲ್ಲಿ ಇಲ್ಲಿನ ರೈತ ಸಮುದಾಯ ಬರ ಬವಣೆಯಲ್ಲಿ ಬಳುತ್ತಿದ್ದು, ಇಲ್ಲಿನ ಜಾನುವಾರುಗಳಿಗೂ ಸಹ ಈಗ ಸಂಕಷ್ಟ ಎದುರಾಗಿದೆ.
ಈ ಭಾಗದ ರೈತ, ಕೃಷಿ ಸಲಹೆಗಾರ ಪಾಂಡುರಂಗಪ್ಪ, ತಮ್ಮ ಗ್ರಾಮದ ದೇವರ ಹೆಸರಿನಲ್ಲಿ ಬಿಟ್ಟಿರುವ 40 ಎತ್ತುಗಳಿಗೆ ಈಗ ನೀರು ಹಾಗೂ ಮೇವಿನ ಅಭಾವ ಉಂಟಾಗಿ, ದೇವರ ಎಲ್ಲಾ ಎತ್ತುಗಳು ಎರಡು ಹೊತ್ತು ಮೇವು ಸಿಗದೆ ನಿತ್ರಾಣಗೊಂಡಿದ್ದು, ಸಾಯುವ ಸ್ಥಿತಿ ತಲುಪಿವೆ. ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ದೇವರ ಎತ್ತುಗಳನ್ನು ಸಂರಕ್ಷಿಸಲು ಆಗುತ್ತಿಲ್ಲ.
ಕಾರಣ ಈ ಎತ್ತುಗಳಿಗೆ ಮೇವು ಪೂರೈಸುವಂತೆ ಗ್ರಾಮದ ಹಲವಾರು ರೈತರು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಇದುವರೆಗೂ ಯಾವುದೇ ರೀತಿಯ ಭರವಸೆ ನೀಡಿಲ್ಲ. ಪ್ರತಿನಿತ್ಯ ಜಿಲ್ಲಾಡಳಿತ ಈ ಮೂಕ ಪ್ರಾಣಿಗಳ ಸಂರಕ್ಷಣೆಗೆ ದಾವಿಸುತ್ತದೆಯೇ ಎಂಬ ಕಾತುರದಿಂದ ಎಲ್ಲಾ ರೈತರು ಕಾಯುತ್ತಿದ್ದಾರೆ.
ಗ್ರಾಮದ ಕಾಡುಗೊಲ್ಲ ಸಮುದಾಯದವರು ತಮ್ಮ ಪದ್ದತಿಯಂತೆ ಗ್ರಾಮದ ಕಾಡುಗೊಲ್ಲ ಸಮುದಾಯದ ದೇವರಾದ ಜುಂಜಪ್ಪ ದೇವರ ಹೆಸರಿನಲ್ಲಿ 40 ಜಾನುವಾರುಗಳು ಅಲ್ಲಿಯೇ ಇರುವ ರೊಪ್ಪದಲ್ಲಿ ವಾಸಿಸುತ್ತಿದ್ದು, ಪ್ರತಿನಿತ್ಯ ಇವುಗಳಿಗೆ ಮೇವು ಪೂರೈಸುವುದೇ ಕಷ್ಟಕರವಾಗಿದೆ. ದೇವಸ್ಥಾನದ ಪೂಜಾರಿ ಈರಣ್ಣ ಈ ಬಗ್ಗೆ ಮಾಹಿತಿ ನೀಡಿ, ಕಾಡುಗೊಲ್ಲ ಸಮುದಾಯದ ಮುಖಂಡರೊಬ್ಬರು ದೇವರಿಗೆ ಹರಿಕೆಯ ರೀತಿಯಲ್ಲಿ ಕಳೆದ 15 ವರ್ಷಗಳ ಹಿಂದೆ ಎರಡು ಹಸುಗಳನ್ನು ನೀಡಿದ್ದು, ಅವುಗಳು ವಂಶಾಭಿವೃದ್ಧಿಯಾಗಿ ಈಗ 40ಕ್ಕೆ ತಲುಪಿವೆ. ಸುತ್ತಮುತ್ತಲ ಯಾವ ಗ್ರಾಮದಲ್ಲೂ ಸಹ ಈ ದೇವರ ಎತ್ತುಗಳಿಗೆ ಮೇವು ಸಿಗುತ್ತಿಲ್ಲ.
ದಾನ ನೀಡಿದವರೂ ಸಹ ಮೇವು ಪೂರೈಸಲು ಅವರಿಗೂ ಸಹ ಸಾಧ್ಯವಾಗುತ್ತಿಲ್ಲ. 40 ಜಾನುವಾರುಗಳನ್ನು ರಕ್ಷಿಸಲು ಕಾಡುಗೊಲ್ಲ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೇವು ಒದಗಿಸುವಂತೆ ಮನವಿ ಮಾಡಿದ್ದೇವು ಆದರೆ ಇದುವರೆಗೂ ಜಿಲ್ಲಾಡಳಿತ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ದೇವರ ಎತ್ತುಗಳ ಸಂರಕ್ಷಣೆ ಮಾಡುವುದು ಸವಾಲಾಗಿದೆ ಎಂದಿದ್ಧಾರೆ.
ಇತ್ತೀಚೆಗೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಸೇದೇವರಹಟ್ಟಿ, ಕುರುಡಿಹಳ್ಳಿ ಲಂಬಾಣಿಹಟ್ಟಿಯಲ್ಲಿನ ದೇವರ ಎತ್ತುಗಳಿಗೆ ಬೆಂಗಳೂರಿನ ಇನ್ಪೋಸಿಸ್ ಫೌಂಡೇಷನ್, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಮೂಲಕ ಮೇವು ಪೂರೈಸಿದ್ದು, ನಮ್ಮ ದೇವರ ಎತ್ತುಗಳಿಗೂ ಸಹ ಸ್ವಾಮೀಜಿ ಇನ್ಪೋಸಿಸ್ ಫೌಂಡೇಷನ್ ಮೂಲಕ ಉಚಿತವಾಗಿ ಮೇವು ಸರಬರಾಜು ಮಾಡಿ ಜಾನುವಾರುಗಳ ಸಂರಕ್ಷಣೆಗೆ ಮುಂದಾಗಬೇಕೆಂದು ಪೂಜಾರಿ ಈರಣ್ಣ ಮನವಿ ಮಾಡಿದ್ದಾರೆ.
ಕಳೆದ ಸುಮಾರು ಹತ್ತು ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ. ಅದ್ದರಿಂದ ಜಾನುವಾರುಗಳಿಗೆ ಅವಶ್ಯವಿರುವ ಮೇವನ್ನು ನೀಡಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅದ್ದರಿಂದ ಸರ್ಕಾರವೇ ನಮಗೆ ಉಚಿತವಾಗಿ ಮೇವು ವಿತರಣೆ ಮಾಡುವ ಮೂಲಕ ಜಾನುವಾರುಗಳನ್ನು ಸಂರಕ್ಷಿಸಬೇಕಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮಗಳು ಇದುವರೆಗೂ ಆಗದ ಹಿನ್ನೆಲೆಯಲ್ಲಿ ಜಾನುವಾರುಗಳ ಬದುಕು ಅತ್ಯಂತ ಘನಘೋರವಾಗಿದೆ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಾಮರ್ಶಿಸಿ ಉಚಿತ ಮೇವನ್ನು ಸರಬರಾಜು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
