ದಾವಣಗೆರೆ
ನನಗೆ ಸರ್ವ ಮಠಗಳು ಹಾಗೂ ಮಠಾಧೀಶರ ಬಗ್ಗೆ ಅಪಾರ ಗೌರವವಿದೆ. ಸಂಸ್ಕಾರದಂತೆ ಎಲ್ಲಾ ಮಠಾಧೀಶರ ಕಾಲಿಗೂ ಬಿದ್ದು, ಆಶೀರ್ವಾದ ಪಡೆದು ಬರುತ್ತೇನೆ. ಆದರೆ, ಮಾಡದ ತಪ್ಪಿಗೆ ಹೋಗಿ ಕ್ಷಮೆ ಕೇಳುವುದಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ರೀತಿಯಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಿಲ್ಲ. ಯಾವುದೇ ಜಾತಿ, ಸಮುದಾಯದ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ. ವಾಸ್ತವ ಹೀಗಿದ್ದಾಗ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಗೌರವ, ಸಂಸ್ಕಾರದಂತೆ ಮಠಾಧೀಶರ ಕಾಲಿಗೂ ಬೀಳುತ್ತೇನೆ. ಮಠಾಧೀಶರೇ ಕೇಳಿದರೆ ಘಟನೆಯ ಬಗೆಗಿನ ವಾಸ್ತವಾಂಶವನ್ನು ವಿವರಿಸುತ್ತೇನೆ ಎಂದು ಹೇಳಿದರು.
ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ ಬಸವಣ್ಣ ಜಾತ್ಯತೀತ, ಸಮಾನತೆಯ ಸಮಾಜ ಕಟ್ಟಲು ಎಲ್ಲರಿಗೂ ಲಿಂಗ ಕಟ್ಟಿದರು. ಲಿಂಗವಂತ ಧರ್ಮವನ್ನು ಜಗತ್ತಿಗೆ ನೀಡಿದ್ದಾರೆ. ಹೀಗಾಗಿ ಬಸವಣ್ಣನವರನ್ನು ಅನುಸರಿಸುವವರೆಲ್ಲರೂ ಲಿಂಗ ಧಾರಣೆ ಮಾಡುತ್ತಾರೆ. ಆದ್ದರಿಂದ ತಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡುವರು ಬಸವಣ್ಣನವರ ವಚನಗಳನ್ನು ಓದಿ, ಅವುಗಳ ಸಾರವನ್ನು ಅರಿತು, ಮೈಮೇಲೆ ಎಚ್ಚರ ಇಟ್ಟುಕೊಂಡು ಮಾತನಾಡಲಿ ಎಂದರು.
ತಮ್ಮ ವಿರುದ್ಧ ಪ್ರತಿಭಟನೆ ವೇಳೆ ಕೆಲವರು ಜಾತಿ ನಿಂದನೆ ಮಾಡಿ, ಅವಾಚ್ಯ ಪದಗಳಿಂದ, ಕೇವಲವಾಗಿ ತಮ್ಮ ಬಗ್ಗೆ ಮಾತನಾಡಿದ್ದ ವೀಡಿಯೋಗಳು, ಸಾಕ್ಷ್ಯಗಳು ತಮ್ಮಲ್ಲಿವೆ. ಈಗಾಗಲೇ 12 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದೇನೆ. ದಾವಣಗೆರೆಯಲ್ಲಿ ಪ್ರತಿಭಟನೆ ವೇಳೆ ತಮ್ಮ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ನಿಂದಿಸಿದ ಇನ್ನೂ ಅನೇಕರಿದ್ದು, ಆ ಎಲ್ಲರ ವಿರುದ್ಧವೂ ದೂರು ನೀಡುತ್ತೇನೆ ಎಂದು ಹೇಳಿದರು.
ದಾವಣಗೆರೆ ತಾಲೂಕಿನ ಕಡ್ಲೇಬಾಳು ಬಳಿ ಸರ್ಕಾರದಿಂದ 16 ಎಕರೆ ಜಮೀನು ಖರೀದಿಸಿ ಮಾರಾಟ ಮಾಡಿಕೊಂಡ, ತನ್ನದೇ ಶಿಕ್ಷಣ ಸಂಸ್ಥೆಗೆ ಶಾಸಕರ ಅನುದಾನ ದುರ್ಬಳಕೆ ಮಾಡಿಕೊಂಡಿದ್ದ ಮಾಯಕೊಂಡ ಕ್ಷೇತ್ರದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ.
ಹಿಂದೆ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ತಪ್ಪಿದಾಗ ಶಿರಮಗೊಂಡನಹಳ್ಳಿಯ ಎಸ್.ಎ.ರವೀಂದ್ರನಾಥ ನಿವಾಸದ ಎದುರು ಬಸವರಾಜ ನಾಯ್ಕ ಹಾಗೂ ಅವರ ಬೆಂಬಲಿಗರು ಬಿ.ಎಸ್.ಯಡಿಯೂರಪ್ಪ, ಜಿ.ಎಂ.ಸಿದ್ದೇಶ್ವರ ಬಗ್ಗೆ ಯಾವ ರೀತಿ ಪದ ಬಳಸಿ ಮಾತನಾಡಿದ್ದರು. ಆಗ ಆ ಸಮುದಾಯದ ಮೇಲೆ ಎಷ್ಟು ಆಘಾತವಾಗಿರಬಹುದು ಎಂಬುದನ್ನು ಅರಿಯಲಿ ಎಂದರು.
ಕಾಂಗ್ರೆಸ್ ಪಕ್ಷ ಅಹಿಂದ ವರ್ಗವನ್ನು ಲೀಸ್ ಪಡೆದಿಲ್ಲ ಎಂಬುದಾಗಿ ಹೇಳಿರುವ ಅಣಬೇರು ಶಿವಮೂರ್ತಿಗೆ ಲೀಸ್ ಪದದ ಅರ್ಥವೇ ಗೊತ್ತಿಲ್ಲ. ಏಕೆಂದರೆ, ಆತ ನಡೆಸುವ ಶಾಲೆಗಳ ಕಟ್ಟಡಗಳನ್ನು ಲೀಜ್ ಪಡೆದಿದ್ದಾರೋ, ಇಲ್ಲವೋ ಗೊತ್ತಿಲ್ಲ ಎಂದರು.ಸಮುದಾಯಗಳು ಸಾಮರಸ್ಯದಿಂದ ಜೀವನ ನಡೆಸಬೇಕೆಂದು ಹೇಳಿರುವ ಹೆಚ್.ಕೆ.ಬಸವರಾಜ ಅವರನ್ನು ಇತ್ತೀಚೆಗೆ ನಗರದಲ್ಲಿ ನಡೆದ ಛಲವಾದಿ ಸಮಾವೇಶದಿಂದಲೇ ದೂರವಿಟ್ಟಿದ್ದು ಏಕೆ? ಎಂದು ಪ್ರಶ್ನಿಸಿದ ಅವರು, ಯಾವ ಸಮಾಜದಬಗ್ಗೆ ಪ್ರೀತಿ, ವಿಶ್ವಾಸವಿದೆಯೆಂಬುದನ್ನು ಬಸವರಾಜ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಬಸವರಾಜ ನಾಯ್ಕ, ಕೆ.ಎಚ್.ಬಸವರಾಜ ಮಾಯಕೊಂಡ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಇವರಿಬ್ಬರು, ಒಂದು ಸಮುದಾಯವನ್ನು ಓಲೈಸುವ ದೃಷ್ಟಿಯಿಂದ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಇನ್ನೂ ಶಾಂತಿ ಬಯಸುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದು ಸರಿಯಲ್ಲ ಎಂಬುದಾಗಿ ಹೇಳಿರುವ ದೇವರಮನಿ ಶಿವಕುಮಾರ, ದೇವರ ಮನೆಯಲ್ಲಿ ಕುಳಿತು ಬಸವಣ್ಣ, ವಚನಗಳನ್ನು, 12ನೇ ಶತಮಾನದ ಬಸವಾದಿ ಶರಣರ ಆದರ್ಶ, ತತ್ವಗಳ ಕುರಿತ ವಚನ ಓದಿ, ಮಾತನಾಡುವುದನ್ನು ಕಲಿಯಲಿ.
ಈಗ ನಾನು ತಪ್ಪು ಮಾಡದಿದ್ದರು ಕಪ್ಪು ಬಾವು ಪ್ರದರ್ಶಿಸುವುದಾಗಿ ಹೇಳಿರುವ ದೇವರಮನಿ ಶಿವಕುಮಾರ್, ಹಿಂದೆ ಅ.ಭಾ.ವೀ.ಮ. ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರನ್ನು ಕೆಲವರು ಬೇರೆ ಶಬ್ಧಗಳಿಂದ ನಿಂದಿಸಿದಾಗ, ಏಕೆ ಕಪ್ಪು ಬಟ್ಟೆ ಪ್ರದರ್ಶಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ನನ್ನದೇ ಸಂಸ್ಥೆಗೆ ಕಲ್ಲು ಹೊಡೆದು ಸೆಲಿ ತೆಗೆದುಕೊಳ್ಳುವ ಮನಸ್ಥಿತಿ ನನ್ನದಲ್ಲ. ಇಂತಹ ಕೀಳು ಮಟ್ಟದ ಯೋಚನೆ, ಚಿಂತನೆ ನನ್ನ ಮನದಲ್ಲಿಲ್ಲ. ಕಲ್ಲು ನನ್ನ ಸಂಸ್ಕತಿಯಲ್ಲ. ಪುಸ್ತಕ ನನ್ನ ಸಂಸ್ಕತಿ. ಕಲ್ಲು ಒಡೆಸಿ, ಸೆಲ್ಫಿ ತೆಗೆಸಿರುವ ಅನುಭವ ದೇವರಮನಿ ಶಿವಕುಮಾರ್ಗೆ ಚೆನ್ನಾಗಿರಬೇಕೆಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಗುರುಗಳ ಬಳಿ ಹೋಗಿ ಪಾದಕ್ಕೆ ಬಿದ್ದು, ಕ್ಷಮೆ ಕೇಳಲಿ ಎಂದು ಸಲಹೆ ನೀಡಿದ್ದಾರೆ. ನನ್ನ ಬಗ್ಗೆ ಬೀದಿಗಿಳಿದು ಕೇವಲವಾಗಿ ಮಾತನಾಡಿ, ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದಾಗ ಯಶವಂತರಾವ್ ಏನು ಮಾಡುತ್ತಿದ್ದರು? ಜಾತಿ ವಿಷ ಬೀಜ ಬಿತ್ತಿದ್ದು ಯಾರೆಂಬುದನ್ನು ಅವರು ಮೊದಲು ಅರಿಯಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡ ಹೇಮರಾಜ, ವೀರಶೈವ ಲಿಂಗಾಯತ ಸಮಾಜದ ನಾಗಮೂರ್ತೆಯ್ಯ, ವೀರೇಶ, ಸುಧಾಕರಯ್ಯ, ನಾಯಕ ಸಮಾಜದ ಹೂವಿನಮಡು ಚನ್ನಬಸಪ್ಪ, ನಾಗರಾಜ, ಮೂರ್ತಿ, ಗಾಳಿಹಳ್ಳಿ ಕೃಷ್ಣಮೂರ್ತಿ, ಶ್ರೀನಿವಾಸ, ರೈತ ಸಂಘದ ಹನುಮೇಶ, ಚನ್ನಬಸಪ್ಪ, ಚಿರಡೋಣಿ ಮಂಜುನಾಥ್, ಎ.ಬಿ.ನಾಗರಾಜ, ಜೆಡಿಎಸ್ನ ಶ್ರೀನಿವಾಸ, ರವಿಕುಮಾರ ಆನಗೋಡು, ತಿಮ್ಮೇಶ್, ಬಿದರಕೆರೆ ವೀರೇಶ, ತಿರುಮಲೇಶ, ಎಸ್.ಹನುಮಂತಪ್ಪ ಮತ್ತಿತರರು ಹಾಜರಿದ್ದರು.