ಮತದಾರರ ಸಂಪೂರ್ಣ ವಿಶ್ವಾಸವನ್ನು ಗಳಿಸಲು ಯಶಸ್ಸಿಯಾಗಿದ್ದು, ಅದು ನನ್ನ ಗೆಲುವಿಗೆ ಪ್ರೇರಣಾ ಶಕ್ತಿಯಾಗಲಿದೆ : ಬಿ.ಎನ್.ಚಂದ್ರಪ್ಪ.

ಚಳ್ಳಕೆರೆ

    ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ನನಗೆ ದೊರಕಿದ್ದು, ನನ್ನ ಪುಣ್ಯವೆಂದು ಭಾವಿಸುವೆ. ಕಳೆದ ಐದು ವರ್ಷಗಳ ನನ್ನ ಸೇವೆ ಮತದಾರರ ಮನಸ್ಸು ಮುಟ್ಟುಬಲ್ಲಿ ಯಶಸ್ಸಿಯಾಗಿದೆ. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿಯೂ ಸಹ ನನಗೆ ವಿರೋಧಿ ಅಲೆ ಉಂಟಾಗಲಿಲ್ಲ. ಜನ ನನ್ನ ಸೇವೆಯನ್ನು ಮೆಚ್ಚಿ ಗೌರವಿಸಿರುವುದೇ ನನ್ನ ಗೆಲುವಿಗೆ ನಾಂದಿಯಾಗಲಿದೆ ಎಂಬುವುದು ನನ್ನ ಭಾವನೆ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.

    ಅವರು, ಮಂಗಳವಾರ ಹಿರಿಯೂರಿನಿಂದ ಚಳ್ಳಕೆರೆ ಮೂಲಕ ಚಿತ್ರದುರ್ಗಕ್ಕೆ ಹೋಗುವ ಸಂದರ್ಭದಲ್ಲಿ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಚುನಾವಣೆ ಮುಗಿದ ನಂತರವೂ ನನಗೆ ಕ್ಷೇತ್ರದ ವಿವಿಧೆಡೆಗಳಿಂದ ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿದೆ. ಚುನಾವಣೆ ನಂತರ ನಾನು ಪ್ರತಿನಿತ್ಯವೂ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದೇನೆ. ಜನರ ಪ್ರೀತಿ, ವಿಶ್ವಾಸ ಎಲ್ಲದಕ್ಕಿಂತ ದೊಡ್ಡದು. ನಾನು ಈ ಬಾರಿ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಆತ್ಮವಿಶ್ವಾಸವಿದೆ ಎಂದರು.

   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿಯೂ ಸಹ ನಾನು ಸ್ವರ್ಧಿಸುವ ಅವಕಾಶ ನನ್ನ ಪಾಲಿಗೆ ಬಂದಿದ್ದು ನನ್ನ ಅದೃಷ್ಠ. ಕಾರಣ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಉತ್ತಮವಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನನ್ನ ಗೆಲುವಿಗೆ ಹೆಚ್ಚು ಶ್ರಮಪಟ್ಟಿದ್ಧಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಜೊತೆಗೂಡಿ ಕಾರ್ಯನಿರ್ವಹಿಸಿದ್ದು ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ನಾನು ನಿರಂತರ ಪ್ರವಾಸ ಕೈಗೊಂಡಿದ್ದು, ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಜಿಲ್ಲೆಯ ರೈತರ ಜೀವನಾಡಿ ಯಾದ ಭದ್ರಾ ಮೇಲ್ದಂಡೆ ಯೋಜನೆ ಕಾವiಗಾರಿಗೆ ಒತ್ತು ಕೊಟ್ಟು ಶ್ರಮಿಸಿದ್ದೇನೆ. ಶೀಘ್ರದಲ್ಲಿಯೇ ಜಿಲ್ಲೆಯ ಜನ ಈ ಯೋಜನೆಯ ಪ್ರಯೋಜನವನ್ನು ಪಡೆಯಲಿರುವರು.

    ಕಳೆದ ಐದು ವರ್ಷಗಳಿಂದ ನಾನು ಜನರಿಗೆ ಯಾವುದೇ ರೀತಿಯ ಸುಳ್ಳು ಭರವಸೆ ನೀಡದೇ ನೈಜಪರಿಸ್ಥಿತಿಯನು ತಿಳಿಸಿ ಕಾರ್ಯನಿರ್ವಹಿಸಿದ್ದೇನೆ. ಆದರೆ, ರಾಷ್ಟ್ರದ ಪ್ರಧಾನ ಮಂತ್ರಿಗಳು ಸುಳ್ಳು ಆಶ್ವಾಸನೆಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅವರು, ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಕಪ್ಪು ಹಣ ಹೊರ ತಂದು 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇನೆಂದು ಭರವಸೆ ನೀಡಿದ್ದರು.

       ಆ ಭರವಸೆ ಈಡೇರಿಸಲಿಲ್ಲ. 2 ಕೋಟಿ ಉದ್ಯೋಗ ನಿರ್ಮಿಸುವ ಯೋಜನೆ ಸಹ ಕಾರ್ಯಗತವಾಗಲಿಲ್ಲ. ಕೋಟ್ಯಾಂತರ ನಿರುದ್ಯೋಗಿ ಯುವಕರು ಮೋದಿಯವರ ಭರವಸೆಯ ಬಗ್ಗೆ ಆಕ್ರೋಶಭರಿತರಾಗಿದ್ದು, ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ಯುವ ನಾಯಕ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯುವ ಜನರಿಗೆ ಸ್ಪೂರ್ತಿದಾಯ ಭರವಸೆ ನೀಡಿದ್ದು, ಯುವ ಜನಾಂಗ ರಾಹುಲ್‍ರವರ ಭರವಸೆಯನ್ನು ಒಪ್ಪಿ ಕಾಂಗ್ರೆಸ್ ಬೆಂಬಲಿಸಿದ್ಧಾರೆಂದರು.

       ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಸೇರಿ ನನ್ನ ಪರವಾಗಿ ವ್ಯಾಪಕ ಪ್ರಚಾರ ನಡೆಸಿದ್ದು, ನನಗೆ ಇನ್ನೂ ಹೆಚ್ಚು ಮತಗಳು ಲಭಿಸಲಿವೆ. ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ನನಗೆ ಯಾವ ಸಮುದಾಯದ ಜನರು ವಿರೋಧ ವ್ಯಕ್ತ ಪಡಿಸದೆ ಗೌರವ ನೀಡಿ ಸ್ವಾಗತಿಸಿದ್ಧಾರೆ. ಮತದಾರರು ಒಲವನ್ನು ಮತ್ತು ಬಲವನ್ನು ಸಂಪೂರ್ಣವಾಗಿ ಪಡೆಯುವಲ್ಲಿ ನಾನು ಯಶಸ್ಸಿಯಾಗಿದ್ದು, ಇದು ನನ್ನ ಗೆಲುವಿಗೆ ಮೂಲ ಕಾರಣವೆಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಆರ್.ಪ್ರಸನ್ನಕುಮಾರ್, ನಗರಸಭಾ ಸದಸ್ಯ ವೈ.ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link