ಗುಬ್ಬಿ
ಪ್ರಸಕ್ತ ಸಾಲಿನ ತಾಲ್ಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.78.02 ರಷ್ಟಿದ್ದು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಎರಡನೆ ಸ್ಥಾನ ಪಡೆದುಕೊಂಡಿದ್ದು ಉತ್ತಮ ಫಲಿತಾಂಶ ಬರಲು ಸಹಕರಿಸಿದ ತಾಲ್ಲೂಕಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಅಭಿನಂದಿಸಿದ್ದಾರೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ 25 ಸರ್ಕಾರಿ ಪ್ರೌಢಶಾಲೆಗಳು, 29 ಅನುಧಾನಿತ ಪ್ರೌಢಶಾಲೆಗಳು ಮತ್ತು 10 ಅನುದಾನ ರಹಿತ ಪ್ರೌಢಶಾಲೆಗಳಿಂದ ಈ ಭಾರಿ 1566 ಬಾಲಕೀಯರು, 1714 ಬಾಲಕರು ಸೇರಿದಂತೆ ಒಟ್ಟು 3280 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ತೆಗೆದುಕೊಂಡಿದ್ದು ಈ ಫೈಕಿ 1296 ಬಾಲಕೀಯರು, 1263 ಬಾಲಕರು ಸೇರಿದಂತೆ ಒಟ್ಟು 2559 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಬಾಲಕರು ಶೇ.73.68 ರಷ್ಟು, ಬಾಲಕೀಯರು ಶೇ.82.75 ರಷ್ಟು ಫಲಿತಾಂಶ ಪಡೆಯುವ ಈಭಾರಿಯ ಪರೀಕ್ಷೆಯಲ್ಲಿ ಬಾಲಕೀಯರೆ ಮುನ್ನಡೆ ಸಾಧಿಸಿದ್ದಾರೆ. ಒಟ್ಟಾರೆ ತಾಲ್ಲೂಕಿನ ಶೇ78.02 ರಷ್ಟು ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆಂದು ತಿಳಿಸಿದ ಅವರು ಚೇಳೂರಿನ ಜ್ಞಾನವರ್ಧಕ ವಿದ್ಯಾಮಂದಿರ ಪ್ರೌಢಶಾಲೆಯ ಜಿ.ಪಿ.ಸಚಿನ್ 619 ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಪಟ್ಟಣದ ಶುಭೋದಯ ಬಾಲಕೀಯರ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕ 617 ಅಂಕಗಳನ್ನು ಪಡೆಯುವ ಮೂಲಕ ಎರಡನೆ ಸ್ಥಾನ ಪಡೆದುಕೊಂಡಿದ್ದಾರೆ. ಅದೆ ಶಾಲೆಯ ಭರತ್ 613, ಹರ್ಷಿನಿ 613, ನಳಿನ 611, ಜ್ಞಾನವರ್ಧಕ ವಿದ್ಯಾಮಂದಿರದ ಜ್ಞಾನೇಶ್ 612, ಚೈತ್ರ 606 ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಹೆಸರು ತಂದಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನ ಕಲ್ಲರ್ಧಗೆರೆ ಸರ್ಕಾರಿ ಪ್ರೌಢಶಾಲೆ 5 ನೇ ಭಾರಿಗೆ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿದ್ದು ಪಟ್ಟಣದ ಶುಭೋದಯ ಬಾಲಕೀಯರ ಪ್ರೌಢಶಾಲೆ 6 ನೇ ಭಾರಿಗೆ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಶಿವಪುರ ಸರ್ಕಾರಿ ಪ್ರೌಢಶಾಲೆ, ಕೊಂಡ್ಲಿ ಸರ್ಕಾರಿ ಪ್ರೌಢಶಾಲೆ, ಲಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ನೇರಳೇಕೆರೆ ಸರ್ಕಾರಿ ಪ್ರೌಢಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ದಾಖಲೆ ನಿರ್ಮಿಸಿವೆ.
ಅನುಧಾನ ರಹಿತ ಪ್ರೌಢಶಾಲೆಗಳ ಫೈಕಿ ಪಟ್ಟಣದ ಶುಭೋದಯ ಬಾಲಕೀಯರ ಪ್ರೌಢಶಾಲೆ 6 ನೇಭಾರಿಗೆ ಶೇ.100 ರಷ್ಟು ಫಲಿತಾಂಶ ಪಡೆದಿದ್ದು ಚೇಳೂರಿನ ಜ್ಞಾನವರ್ಧಕ ವಿದ್ಯಾಮಂದಿರ ಪ್ರೌಢಶಾಲೆ, ಬಾಗೂರು ಗೇಟ್ನ ಗುರುಶ್ರೀ ಪ್ರೌಢಶಾಲೆ, ಕೆ.ಜಿ.ಟೆಂಪಲ್ನ ಬೃಂದಾವನ ಪ್ರೌಢಶಾಲೆ, ಸಿ.ನಂದಿಹಳ್ಳಿಯ ಗ್ಲೋಮ್ಸ್ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ತಿಳಿಸಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಹಲವು ಹಂತದ ಶೈಕ್ಷಣಿಕ ಕಾರ್ಯಕ್ರಮಗಳು ವಿಷಯಾವಾರು ಶಿಕ್ಷಕರಿಗೆ ನಡೆಸಿದ ವಿಶೇಷ ಕಾರ್ಯಾಗಾರಗಳು ಮತ್ತು ತರಭೇತಿಗಳು ಹಾಗೂ ಇಲಾಖೆಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.