ಮಧು ಕೊಲೆ ಪ್ರಕರಣ ಚುರುಕು ಗೊಳಿಸಲು ಆಗ್ರಹ

ದಾವಣಗೆರೆ:

      ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಬೇಕೆಂದು ಆಗ್ರಹಿಸಿ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

      ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ವಿದ್ಯಾರ್ಥಿಗಳು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ರಾಕೇಶ್, ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ್ ಕೊಲೆ ಪ್ರಕರಣವು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹದ್ದಾಗಿದೆ. ಮಧು ಸಾವಿನ ಬಗ್ಗೆ ಸಾಕಷ್ಟು ಅನುಮಾನವಿದ್ದರೂ ಪ್ರಕರಣದ ತನಿಖೆ ತೀವ್ರ ಗತಿಯಲ್ಲಿ ನಡೆಯದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಮಧು ಪತ್ತಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಬಂಧಿತ ಆರೋಪಿಯಿಂದ ಸಾಕಷ್ಟು ಮಾಹಿತಿ ಕಲೆ ಹಾಕಿರುವ ಪೊಲೀಸರು ಯಾವುದೇ ವಿಚಾರವನ್ನು ಇನ್ನೂ ಬಹಿರಂಗಪಡಿಸಿಲ್ಲ. ವಿದ್ಯಾರ್ಥಿನಿಯ ಮೃತದೇಹ, ಘಟನಾ ಸ್ಥಳದಲ್ಲಿದ್ದ ಚಿತ್ರಣವನ್ನು ಗಮನಿಸಿದರೆ ಅದು ಆತ್ಮಹತ್ಯೆಯಲ್ಲ.

       ಅದೊಂದು ವ್ಯವಸ್ಥಿತ ಹತ್ಯೆ ಎಂಬುದು ಗೋಚರಿಸುತ್ತದೆ. ಆದರೆ, ಪೊಲೀಸ್ ಇಲಾಖೆಯು ಆರಂಭದಿಂದ ಇಲ್ಲಿಯ ವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರತೆ ತೋರದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಧು ಪತ್ತಾರ್ ಹತ್ಯೆಯಾಗಿ 15 ದಿನಗಳೇ ಕಳೆದರೂ ಸರ್ಕಾರವು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಹಾಗೂ ವಿದ್ಯಾರ್ಥಿನಿಯ ಸಾವಿನ ಪ್ರಕರಣದ ಬಗ್ಗೆ ಗಂಭೀರವಾಗಿ ಸ್ಪಂದಿಸಬೇಕಾದ ಗೃಹ ಸಚಿವರು ಅದ್ಯಾವುದರ ಬಗ್ಗೆಯೂ ಆಸಕ್ತಿ ತೋರದೇ, ಗೃಹ ಸಚಿವರು ಧರ್ಮ ವಿಭಜನೆ ಮಾಡುವುದರಲ್ಲಿ ತೊಡಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಮುಖ್ಯಮಂತ್ರಿ ಸಹ ಮಧು ಪತ್ತಾರ್ ಪ್ರಕರಣದ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದ ಜನತೆಗೆ ನ್ಯಾಯದ ಭರವಸೆ ನೀಡಬೇಕಿದ್ದ ನಾಡಿನ ಸಿಎಂ ಆದವರೂ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣವೇ ಪೊಲೀಸ್ ಇಲಾಖೆಯು ಈ ಪ್ರಕಣರದ ತನಿಖೆಯನ್ನು ಚುರುಕುಗೊಳಿಸಿ, ಸತ್ಯಾಸತ್ಯತೆಯನ್ನು ಕಂಡು ಹಿಡಿದು, ಮೃತ ವಿದ್ಯಾರ್ಥಿನಿ ಮಧು ಹಾಗೂ ಅವರ ಕುಟುಂಬದ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಪ್ರದೀಪ್, ಕಿರಣ್, ಶರತ್, ಆಕಾಶ್, ಕಿಶೋರ, ವಿಕಾಸ್, ಲಕ್ಷ್ಮಿ, ರೋಜಾ, ಚೇತನ್, ಮಂಜುನಾಥ, ರಾಮು ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link