ಬಸವ ತತ್ವ ಒಪ್ಪದ ಸಂಪ್ರದಾಯವಾದಿಗಳು: ಬಸವಪ್ರಭುಶ್ರೀ

ದಾವಣಗೆರೆ:

        ಇಡೀ ಜಗತ್ತೇ ಬಸವ ತತ್ವದತ್ತ ಆಕರ್ಷಿತರಾಗಿದ್ದಾರೆ. ಆದರೆ, ದೇಶದಲ್ಲಿರುವ ಕೆಲ ಮೂಲಭೂತವಾದಿಗಳು ಹಾಗೂ ಸಂಪ್ರದಾಯವಾದಿಗಳು ಬಸವತತ್ವಗಳನ್ನು ಒಪ್ಪಿಕೊಳ್ಳದಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ ಎಂದು ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

       ಇಲ್ಲಿನ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಮೇ 7ರವರೆಗೆ ಹಮ್ಮಿಕೊಂಡಿರುವ ಬಸವಪ್ರಭಾತ್ ಫೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ತಳ ಸಮುದಾಯಗಳನ್ನು ಅಪ್ಪಿಕೊಳ್ಳುವ ಮೂಲಕ ಲಿಂಗ, ವರ್ಣ, ಜಾತಿ ಭೇದವನ್ನು ತೊಡೆದು ಹಾಕುವ ಮೂಲಕ ಅಸಮಾನತೆಯನ್ನು ಬೇರು ಸಮೇತ ಕಿತ್ತೊಗೆದು ಸಮ ಸಮಾಜ ನಿರ್ಮಾಣಕ್ಕೆ ವಿಶ್ವಗುರು ಬಸವಣ್ಣನವರು ಶ್ರಮಿಸಿದ್ದರು. ಆದ್ದರಿಂದ ಬಸವೇಶ್ವರರ ವಿಚಾರಧಾರೆಯನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ.

       ಆದರೆ, ನಮ್ಮಲ್ಲಿನ ಮೂಲಭೂತ ಹಾಗೂ ಸಂಪ್ರದಾಯವಾದಿಗಳು ಮಾತ್ರ ಬಸವಣ್ಣನವರನ್ನು ಒಪ್ಪದಿರಿವುದು ನಿಜಕ್ಕೂ ದುರಂತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.12ನೇ ಶತಮಾನದಲ್ಲಿಯೇ ಜಾತಿಯತೆಯ ಕತ್ತಲೆಯನ್ನು ತೊಲಗಿಸಲು ಬಸವಣ್ಣನವರು ಸಂಕಲ್ಪ ಮಾಡಿದ್ದರು.ಬಸವಜಯಂತಿ ಸಂದರ್ಭದಲ್ಲಿ ಮಾತ್ರ ವಿಶ್ವಗುರು ಬಸವಣ್ಣನವರನ್ನು ನೆನಪು ಮಾಡಿಕೊಳ್ಳುತ್ತೇವೆ. ಬಸವಣ್ಣನವರು ಜನ್ಮ ತಾಳುವುದಕ್ಕೂ ಮುನ್ನ ನಾವೆಲ್ಲರೂ ಅಸ್ಪೃಶ್ಯರಾಗಿದ್ದೇವು. ನಂತರ ಬಸವಣ್ಣನವರು. ಎಲ್ಲರಿಗೂ ಲಿಂಗದಿಕ್ಷೆ ನೀಡಿ ಶ್ರೇಷ್ಟರನ್ನಾಗಿಸಿದರು. ಈ ಬಗ್ಗೆ ಇತಿಹಾಸದಲ್ಲಿಯೂ ಉಲ್ಲೇಖವಿದೆ ಎಂದರು.

        ಬಸವಣ್ಣನವರ ವಿಚಾರಧಾರೆಯನ್ನು ಮೈಗೂಡಿಸಿಕೊಂಡು, ಬಸವಾದಿ ಪ್ರಮಥರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆದಾಗ ಅಸಮಾನತೆ ತೊಲಗಲಿದೆ. ಮೇಲುಕೀಳು ಎಂಬ ಭಾವನೆ ಇರುವುದಿಲ್ಲ, ಸರ್ವರಿಗೂ ಸ್ವತಂತ್ರ, ಸಮಾನತೆ, ಸಾಮಾಜಿಕ ನ್ಯಾಯ, ಬಸವತತ್ವದ ಅನುಷ್ಟಾನದಿಂದ ಮಾತ್ರ ಸಾಧ್ಯವಾಗುತ್ತದೆ. ಅಂತಹ ತತ್ವಗಳನ್ನು ನಾವೆಲ್ಲರು ಪಾಲನೆ ಮಾಡಬೇಕು ಎಂದರು.

      ಬಸವತತ್ವಗಳನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯವನ್ನು ದಾವಣಗೆರೆಯ ವಿರಕ್ತ ಮಠ ಕಳೆದ 106 ವರ್ಷಗಳಿಂದಲೂ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಂದಿನ ಮಠಾಧೀಶರಾಗಿದ್ದ ಶ್ರೀಜಯದೇವ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ಶ್ರೀಮಠದಿಂದ ಪ್ರಾರಂಭಗೊಂಡಿದ್ದವು. ಅಂದಿನ ಮೃತ್ಯುಂಜಯ ಸ್ವಾಮೀಜಿಯವರು ಸ್ವತಂತ್ರ ಹೋರಾಟಗಾರರಾದ ಹರ್ಡೇಕರ್ ಮಂಜಪ್ಪ ಅವರೊಂದಿಗೆ ಚರ್ಚಿಸಿ ಶ್ರಾವಣ ಮಾಸದಲ್ಲಿ ಭಜನಾ ಸಂಘದೊಂದಿಗೆ ಪ್ರತಿ ಸೋಮವಾರ ಶ್ರೀಮಠದಲ್ಲಿ ಭಜನೆ ಪ್ರಾರಂಭಿಸಿದರು.

       ನಂತರ ಶ್ರಾವಣ ಉಪನ್ಯಾಸ ಕಾರ್ಯಕ್ರಮ ಹಾಗೂ ಬಸವ ಜಯಂತಿ ಕಾರ್ಯಕ್ರಮಗಳನ್ನು ಮೊದಲಿಗೆ ಪ್ರಾರಂಭಿಸಿದರು. ಅಂದಿನಿಂದಲೂ ಇಂದಿನವರೆಗೂ ಬಸವಪ್ರಭಾತ್ ಫೇರಿ ಹಾಗೂ ಬಸವಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿವೆ ಎಂದು ಅವರು ವಿವರಿಸಿದರು.

        ವಿರಕ್ತ ಮಠದಿಂದ ಆರಂಭವಾದ ಬಸವಪ್ರಭಾತ್ ಫೇರಿಯೂ ಸ್ವಾಗೇರಪೇಟೆ, ಒಕ್ಕಲಿಗರ ಪೇಟೆ, ಕಾಯಿಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಪ್ರಭಾತ್ ಫೇರಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಕಣಕುಪ್ಪಿ ಮುರುಗೇಶ್, ಸಾಲಿಗ್ರಾಮ ಗಣೇಶ್ ಶೆಣೈ, ಅಂದನೂರು ಮುಪ್ಪಣ್ಣ, ಎನ್.ಜೆ.ಶಿವಕುಮಾರ್, ರಾಜಶೇಖರ್, ಹಾಸಬಾವಿ ಕರಬಸಪ್ಪ, ಎಸ್.ಜಿ.ಸಂಗಪ್ಪ, ಜಯರುದ್ರೇಶ್ ನಂದಿ, ಲಂಬಿ ಮುರುಗೇಶ್, ಮಹಾದೇವಮ್ಮ, ಶಶಿಕಲಾ, ಲತಾ, ಸಹನಾ ರವಿ, ಗುರುಬಸಪ್ಪ ಬೂಸ್ನೂರ್, ಕುಂಟೋಜಿ ಚನ್ನಪ್ಪ, ಶರಣಬಸವ, ರವಿಕುಮಾರ್, ಕುಮಾರಸ್ವಾಮಿ, ಕುದುರಿ ಉಮೇಶ್, ಕೀರ್ತಿಕುಮಾರ್, ಖಾದರ್ ಬಾಷಾ, ಸಮೀರ್ ಖಾನ್, ಮುಪ್ಪಯ್ಯ ಮೈಸೂರುಮಠ, ಅಕ್ಕಿ ಚನ್ನಪ್ಪ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link