ನಾವು ಜೀವಿಸುತ್ತಿರುವ ಕಾಲಘಟ್ಟದಲ್ಲಿ ಭಾವೋದ್ವೇಗ ತಾಂಡವವಾಡುತ್ತಿದೆ : ಪ್ರೊ.ಕೆ.ದೊರೈರಾಜ್

ತುಮಕೂರು

      ಇಂದು ನಾವು ಜೀವಿಸುತ್ತಿರುವ ಕಾಲಘಟ್ಟದಲ್ಲಿ ಭಾವೋದ್ವೇಗ ತಾಂಡವವಾಡುತ್ತಿದೆ. ಉದ್ಯೋಗಗಳನ್ನು ಕಿತ್ತುಕೊಳ್ಳುವಂತಹ ಖಾಸಗೀಕರಣ ಬಂದಿದೆ. ಗುತ್ತಿಗೆ ಪದ್ದತಿ ಬಂದಿದೆ. ಇದು ಸರ್ಕಾರವೇ ತಂದಿರುವ ಅಧಿಕೃತ ಜೀತದ ಕೆಲಸವಾಗಿದೆ ಎಂದು ಜನಪರ ಚಿಂತಕ ಪ್ರೊ.ಕೆ.ದೊರೈರಾಜ್ ವಿಷಾದ ವ್ಯಕ್ತಪಡಿಸಿದರು.

    ನಗರದ ಟೌನ್‍ಹಾಲ್‍ನಲ್ಲಿ ಸಿಐಟಿಯು ವತಿಯಿಂದ ಮೇ1 ರಂದು ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ, ಗುತ್ತಿಗೆ, ಹಂಗಾಮಿ, ಫಿಕ್ಸ್‍ಡ್ ಟರ್ಮ್ ಉದ್ಯೋಗ ವಿರೋಧಿಸಿ, ಸಾರ್ವಜನಿಕ ಉದ್ದಿಮೆಗಳ ಉಳಿವಿಗಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ವಿಶ್ವಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಮಾಲಿಕತ್ವ ಇರುವ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ಹೆಚ್ಚಾಗಿ ಉತ್ಪಾದನೆಯಾಗುತ್ತಿದ್ದ ಸಂಪತ್ತನ್ನು ಕ್ಷೀಣಗೊಳಿಸಲಾಗುತ್ತಿದೆ ಎಂದರು.

      ಗುತ್ತಿಗೆ ನೌಕರರ ಶೋಷಣೆ, ನಿರುದ್ಯೋಗ, ಬಡತನ, ಹಸಿವು ಇರುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದು ಸಾಂಸ್ಕøತಿಕ ವಿಕೃತತೆ ಉಂಟಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಕೇವಲ ಆರ್ಥಿಕ ಶೋಷಣೆ ಮಾತ್ರವಲ್ಲದೆ, ಸಾಂಸ್ಕøತಿಕ ವಿಕೃತತೆಯೂ ನಡೆಯುತ್ತಿದ್ದು ಜನರನ್ನು ಘಾಸಿಗೊಳಿಸಿದೆ. ಉದ್ಯೋಗ, ಹಸಿವಿನ ಬಗ್ಗೆ ಹೋರಾಟ ಮಾಡುತ್ತೇವೆ. ಅತ್ಯಾಚಾರ ವಿರುದ್ದ ಹೋರಾಟ ಮಾಡುತ್ತೇವೆ. ಆದರೆ ಈಗ ಹೊಸದೊಂದು ಸವಾಲು ಎದುರಾಗಿದ್ದು ಜನರನ್ನು ಧರ್ಮ, ಭಾಷೆ, ಪ್ರಾದೇಶಿಕತೆ ಹೆಸರಿನಲ್ಲಿ ಭಾವೋದ್ವೇಗಗೊಳಿಸಿ ಓಟು ಪಡೆದು ಅಧಿಕಾರ ಹಿಡಿಯುವ ತಂತ್ರಗಾರಿಕೆ ಹೆಚ್ಚಾಗುತ್ತಿದೆ ಎಂದರು.

      ಬಂಡವಾಳಶಾಹಿಗಳಿಗೆ ಇಡೀ ವ್ಯವಸ್ಥೆಯನ್ನು ಒತ್ತೆ ಇಡುವ ಕೆಲಸ ನಡೆಯುತ್ತಿದ್ದು ಸರ್ವಾಧಿಕಾರದ ಕಡೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಬಗ್ಗೆ ಕಾರ್ಮಿಕರು ಮತ್ತು ಜನರು ಎಚ್ಚರದಿಂದ ಇರಬೇಕು. ಭಾವೋದ್ರೇಕವನ್ನು ಮೀರಿ ನಿಲ್ಲಿಸಬೇಕಾದರೆ ಬಂಡವಾಳಶಾಹಿ, ಕಾರ್ಪೋರೇಟ್ ಶಕ್ತಿಗಳು ಮತ್ತು ಕೋಮುವಾದಿಗಳನ್ನು ಹಿಮ್ಮೆಟ್ಟಿಸಬೇಕು. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ. ಎಲ್ಲಾ ಶ್ರಮಿಕರ ಐಕ್ಯತೆ ಮೂಲಕ ಇದು ಸಾಧ್ಯ. ಧರ್ಮ, ಜಾತಿ, ಮತವನ್ನು ಪ್ರಾದೇಶಿಕತೆ ಮತ್ತು ಭಾಷೆಯನ್ನು ಮೆಟ್ಟಿ ನಿಲ್ಲಬೇಕು. ಸಮಾಜದಲ್ಲಿ ದ್ವೇಷವನ್ನು ಉಂಟು ಮಾಡುವ ಶಕ್ತಿಗಳನ್ನು ಸೋಲಿಸಬೇಕು. ಇದನ್ನು ಸಾವು ಬದುಕಿನ ನಡುವಿನ ಹೋರಾಟ ಎಂದು ತಿಳಿಯಬೇಕು ಎಂದು ಕರೆ ನೀಡಿದರು.

      ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ ನಮ್ಮನ್ನಾಳುವ ಸರ್ಕಾರಗಳು ಜನರಿಗೆ ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಬೇಕು. ಇಂದು ಸಮಾಜದಲ್ಲಿ ಕೇವಲ ರೈತ ಹಾಗೂ ಸೈನಿಕರನ್ನು ಮಾತ್ರ ನೆನೆಯುತ್ತಾರೆ. ಅದೇ ರೀತಿ ಕಾರ್ಮಿಕರನ್ನು ಕೂಡ ನೆನೆಯುಂತಾಗಬೇಕು. ಸಮಾಜದಲ್ಲಿ ಸಂಘಟಿ ಹಾಗೂ ಅಸಂಘಟಿತ ಕಾರ್ಮಿಕರು ಸಾಕಷ್ಟು ಮಂದಿ ಇದ್ದಾರೆ. ಅವರು ಇಲ್ಲದೇ ಹೋದರೆ ಸಮಾಜದಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ. ಸಮಾಜದಲ್ಲಿ ಅವರನ್ನು ನೆನೆಯುಂತಾಗಬೇಕು. ಕಾರ್ಮಿಕರು ಸುಖೀ ಜೀವನ ನಡೆಸಲು 18 ಸಾವಿರ ರೂಗಳ ಕನಿಷ್ಠ ವೇತನ ಪಡೆಯಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು ಎಂದರು.

      ಜೀವ ವಿಮಾ ನೌಕರರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಕಾರ್ಮಿಕರಿಗೆ ಮೇ 1 ಮಹತ್ವದ ದಿನವಾಗಿದೆ. 1886ರಲ್ಲಿ ಹೋರಾಟದ ಫಲವಾಗಿ ಎಂಟು ಗಂಟೆಗಳ ದುಡಿಮೆ ಎಂಬ ಘೋಷವಾಕ್ಯ ಜಾರಿಯಾಯಿತು. ಆದರೆ ಇಂದು ಖಾಸಗಿ ಉದ್ಯಮಗಳಲ್ಲಿ 15 ಗಂಟೆಗೂ ಹೆಚ್ಚು ಕಾಲ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟದಿಂದಲೇ ಸಾಧ್ಯ. ಹಾಗಾಗಿ ಎಲ್ಲರೂ ಹೋರಾಟಕ್ಕೆ ಮುಂದಾಗಿ ಎಂದು ಕರೆ ನೀಡಿದರು.

      ಬಿಎಸ್‍ಎನ್‍ಎಲ್ ನೌಕರರ ಸಂಘದ ಮುಖಂಡ ನರೇಶ್‍ರೆಡ್ಡಿ, ಅಂಗನವಾಡಿ ನೌಕರರ ಸಂಘದ ಜಿ.ಕಮಲ, ಬೋಧಕೇತರ ನೌಕರರ ಸಂಘದ ಟಿ.ಜಿ.ಶಿವಲಿಂಗಯ್ಯ, ಸಿಐಟಿಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಇಂದಿನ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಹೋರಾಟ ಮಾಡುವ ಬಗ್ಗೆ ಮಾಹಿತಿ ನೀಡಿದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಉಪಮುಖ್ಯಮಂತ್ರಿಗಳ ವಿದ್ಯಾಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ. ಕಾರ್ಮಿಕ ಸಚಿವ ವೆಂಕಟರವಣಪ್ಪ ಕಾರ್ಮಿಕರ ಸಂಘದ ಪ್ರಮುಖರ ಜೊತೆ ಇದುವರೆಗೂ ಸಭೆ ನಡೆಸಿ ಕಾರ್ಮಿಕರ ಅಹವಾಲನ್ನು ಕೇಳುವ ಗೋಜಿಗೆ ಹೋಗಿಲ್ಲ. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಅಧಿಕಾರಿ, ಇನ್ಸ್‍ಪೆಕ್ಟರ್ ಹುದ್ದೆಗಳ ಖಾಲಿ ಇದ್ದರೂ ಗಮನಹರಿಸುತ್ತಿಲ್ಲ ಎಂದು ದೂರಿದರು. ಅಲ್ಲದೆ, ಕನಿಷ್ಠ ವೇತನ ನೀಡುವ ಮೂಲಕ ಉಪಮುಖ್ಯಮಂತ್ರಿಗಳ ವಿದ್ಯಾಸಂಸ್ಥೆಯೇ ಮಾದರಿಯಾಗಬೇಕು ಎಂದು ಮನವಿ ಮಾಡಿದರು.

       ಕಾರ್ಯಕ್ರಮದಲ್ಲಿ, ಯುವ ಮುಖಂಡ ಎಸ್.ರಾಘವೇಂದ್ರ, ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ, ಆಸ್ಪತ್ರೆ ನೌಕರರ ಸಂಘದ ರಂಗಮ್ಮ, ಸಿಐಟಿಯು ಮುಖಂಡ ಎ.ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು. ಷಣ್ಮುಖಪ್ಪ ಸ್ವಾಗತಿಸಿ, ಗುಲ್ಜಾರು ಭಾನು ವಂದಿಸಿದರು.


ಮನುಷ್ಯರ ಘನತೆಯ ಬದುಕಿಗಾಗಿ ಶತಮಾನದಿಂದ ಹಿಂದಿನಿಂದಲೂ ಕಾರ್ಮಿಕರು ಐಕ್ಯ ಹೋರಾಟ ನಡೆಸಿಕೊಂಡು ಬಂದ ಪರಿಣಾಮ ಇಂದು ಕಾರ್ಮಿಕರು ಉಸಿರಾಡುವ, ನ್ಯಾಯ ಪಡೆಯುವಂತಹ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಎಡಪಂಥೀಯ ಹೋರಾಟವೇ ಕಾರಣವಾಗಿದೆ. ಪ್ರತಿವರ್ಷದ ಮೇ 1ರಂದು ಕಾರ್ಮಿಕ ದಿನವನ್ನು ಅಚರಣೆ ಮಾಡುವಂತಹ ಕಾಲಘಟ್ಟದಲ್ಲಿ ನಾವಿಲ್ಲ. ಹೀಗಾಗಿ ನಮ್ಮ ಚಿಂತನೆಗಳನ್ನು ವಿಸ್ತಿರಿಸಿಕೊಳ್ಳುವಂತಹ, ನಮ್ಮ ಹೋರಾಟಕ್ಕೆ ಹೆಚ್ಚಿನ ಬಲವನ್ನು ಚೈತನ್ಯವನ್ನು ತುಂಬಿಕೊಳ್ಳುವಂತಹ ಕೆಲಸವನ್ನು ಮಾಡಬೇಕಾಗಿದೆ.
ಕೆ.ದೊರೈರಾಜ್, ಸಾಮಾಜಿಕ ಚಿಂತಕ


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link