ತುರುವೇಕೆರೆ
ಹಿರಿಯ ರಂಗಕರ್ಮಿ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಮೂಲತಃ ತಾಲ್ಲೂಕಿನ ಕಣತೂರು ಗ್ರಾಮದವರು.ಮಾಸ್ಟರ್ ಹಿರಣ್ಣಯ್ಯರ ತಂದೆ ಕೆ. ಹಿರಣ್ಣಯ್ಯ ತಾಲ್ಲೂಕಿನ ಕಣತೂರು ಗ್ರಾಮದವರು. ಪಕ್ಕದ ನೊಣವಿನಕೆರೆ ಬೇಟೆರಾಯಸ್ವಾಮಿ ಮನೆ ದೇವರಾಗಿತ್ತು. ಇಂದಿಗೂ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಕಲಾವಿದರಾಗಿದ್ದ ಕೆ. ಹಿರಣ್ಣಯ್ಯ (ಕಣತೂರು) ಮೈಸೂರಿಗೆ ತೆರಳಿ ನೆಲೆಸಿದ್ದರು.
ಮಾಸ್ಟರ್ ಹಿರಣ್ಣಯ್ಯ ಹುಟ್ಟಿದ್ದು ಮೈಸೂರಿನಲ್ಲಿ. ಮೂಲ ಹೆಸರು ನರಸಿಂಹಮೂರ್ತಿ. ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದ ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದ ಶಾಂತಮ್ಮರನ್ನು ವಿವಾಹವಾಗಿದ್ದರು. ಅವರ ತಂದೆ ತಾಲ್ಲೂಕಿನ ಕಣತೂರು ಗ್ರಾಮದಲ್ಲಿ ಆಸ್ತಿ ಪಾಸ್ತಿ ಹೊಂದಿದ್ದು ಅಂದೆ ಕೆ.ಹಿರಣ್ಣಯ್ಯ ಮಾರಾಟ ಮಾಡಿದ್ದರು. ಅವರು ವಾಸಿಸುತ್ತಿದ್ದ ಅವರ ಮನೆ ಇನ್ನು ಸಹಾ ಕಣತೂರಿನಲ್ಲಿ ಇದೆ.
ಕೆ.ಹಿರಣ್ಣಯ್ಯ ಬಯಲು ರಂಗ ಮಂದಿರ : ಪಟ್ಟಣದಲ್ಲಿ ಕೆ.ಹಿರಣ್ಣಯ್ಯ ನೆನಪಿಗಾಗಿ ಕಣತೂರು ಹಿರಣ್ಣಯ್ಯ ಬಯಲು ರಂಗ ಮಂದಿರವನ್ನು 1990 ರಲ್ಲಿ ನಿರ್ಮಿಸಲಾಗಿದೆ. ಮಾಸ್ಟರ್ ಹಿರಣ್ಣಯ್ಯ ಕೂಡ ತುರುವೇಕೆರೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದರು. ಕೆ.ರಾಮಕೃಷ್ಣಯ್ಯನವರು ಶಾಸಕರಾಗಿದ್ದ ಸಂದರ್ಭದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಅಡಿಪಾಯ ಪ್ರಾರಂಭಿಸಿದ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ನಡುಬೀದಿ ನಾರಾಯಣ ಹಾಗೂ ಲಂಚಾವತಾರ ನಾಟಕಗಳನ್ನು ಸಹಾಯಾರ್ಥ ಪ್ರದರ್ಶಿಸಿ ಹಣ ಒದಗಿಸಿ ಕೊಟ್ಟಿದ್ದರು.
1990ರಲ್ಲಿ ಶಾಸಕ ಎಸ್.ರುದ್ರಪ್ಪನವರ ಅವಧಿಯಲ್ಲಿ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಉದ್ಘಾಟನೆಗೊಂಡಿತು. ತುರುವೇಕೆರೆ ಪ್ರಸಾದ್ ಅವರ ತಂದೆ ಶಿಕ್ಷಕ ದಿವಂಗತ ಟಿ.ಎಲ್.ನಾಗರಾಜು ಮಾಸ್ಟರ್ ಹಿರಣ್ಣಯ್ಯರ ಪರಮಾಪ್ತ ಸ್ನೇಹಿತರಲ್ಲಿ ಒಬ್ಬರು. ಹೆಚ್ಚು ಕಾಲ ಒಡನಾಡಿಯಾಗಿದ್ದವರು. ಕೆ.ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕ ಕಂಪನಿ ಸ್ಥಾಪಿಸಿ ಪಶ್ಚಾತ್ತಾಪ, ಲಂಚಾವತಾರ, ಸದಾರಮೆ, ಭ್ರಷ್ಟಚಾರ, ಕಪಿಮುಷ್ಟಿ ಸುಮಾರು ನಾಟಕಗಳ ನಿರ್ಮಿಸಿ ರಾಜಕೀಯದ ಭ್ರಷ್ಟಾಚಾರವನ್ನು ತಮ್ಮ ವಿಡಂಭನೆಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು.
ರಂಗ ಕಲೆಯ ಮೂಲಕ ಎಂತಹ ಸಂದರ್ಭದಲ್ಲಿಯೂ ರಾಜಕೀಯ ಧುರೀಣರ ಎದುರಿಗೆ ಹೆದರದೆ ಬೆದರದೆ ರಾಜಕೀಯ ರಂಗದಲ್ಲಿ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಧೈರ್ಯವಾಗಿ ಮಾತನಾಡುತ್ತಿದ್ದವರೆಂದರೆ ಮಾಸ್ಟರ್ ಹಿರಣ್ಣಯ್ಯ ಒಬ್ಬರೆ. ತನ್ನಲ್ಲಿದ್ದ ಲೋಪದೋಷಗಳನ್ನು ರಂಗಕಲೆಯ ಮೂಲಕ ತಿದ್ದುವಂತಹ ಕೆಲಸ ಮಾಡಿದ್ದರಿಂದ ಪ್ರಶಸ್ತಿಗಳು ಇವರ ಹಿಂದೆ ಬಂದವು. ತಾಲ್ಲೂಕಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ್ದು ತಾಲ್ಲೂಕಿನ ಹೆಮ್ಮೆಯ ವಿಷಯ. ಇತ್ತೀಚೆಗೆ ಅನಾರೋಗ್ಯದ ನಿಮಿತ್ತ ತಾಲ್ಲೂಕಿನ ಒಡನಾಟ ಕಡಿಮೆಯಾಗಿತ್ತು. ಇಂದು ಅವರು ನಮ್ಮನ್ನಗಲಿರುವುದು ತಾಲ್ಲೂಕಿಗೆ ತುಂಬಲಾರದ ನಷ್ಟವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
