ಮಂಗಳೂರು
ಕರಾವಳಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದಾಗಿ ಮನುಷ್ಯರಷ್ಟೆ ಅಲ್ಲದೇ ಮೂಕ ಜೀವಗಳೂ ಬಲಿಯಾಗುತ್ತಿವೆ.ಈ ಹಿನ್ನೆಲೆಯಲ್ಲಿ ಕುಕ್ಕುಟ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.ಏರುತ್ತಿರುವ ತಾಪಮಾನದಿಂದ ಕೋಳಿಗಳು ಸಾವನ್ನಪ್ಪುತ್ತಿವೆ. ಪ್ರತಿ ಸಾವಿರ ಕೋಳಿಗಳಿಗೆ ಸುಮಾರು 20 ರಿಂದ 30 ಕೋಳಿಗಳು ಸಾವನ್ನಪ್ಪುತ್ತಿವೆ ಎಂದು ಅಂದಾಜಿಸಲಾಗಿದೆ.
ಬಿಸಿಲಿನ ಪರಿಣಾಮದಿಂದಾಗಿ ಕೋಳಿ ಸಾಕಾಣಿಕೆದಾರರು ನಷ್ಟ ಅನುಭವಿಸುವಂತಾಗಿದ್ದು, ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಕೂಡ ಏರಿಕೆಯಾಗುತ್ತಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳಲ್ಲಿ ತಾಪಮಾನ 36 ರಿಂದ 37 ಡಿಗ್ರಿ ದಾಖಲಾಗಿದೆ.ವಾತಾವರಣದಲ್ಲಿ ಆದ್ರತೆ ಇರುವುದರಿಂದ ಒತ್ತಡ ತಾಳಲಾರದೆ ಕೋಳಿಗಳು ಸಾಯುತ್ತಿವೆ ಎಂದು ಕೋಳಿ ಸಾಕಣೆದಾರರರು ತಮ್ಮ ಅಳಲು ತೋಡಿಕೊಂಡಿದ್ದಾರೆ .
ಕೆಲವೊಮ್ಮೆ ಮೋಡ ಕವಿದ ವಾತಾವರಣ ಇದ್ದು, ಮಳೆ ಬರುತ್ತದೆ ಎಂಬ ಸ್ಥಿತಿ ಇದ್ದಾಗಲೂ ಕೋಳಿ ಮರಣ ಪ್ರಮಾಣ ಹೆಚ್ಚು. ಸಾಯುವ ಪ್ರಮಾಣ ಮಧ್ಯಾಹ್ನ 2ರಿಂದ ಸಂಜೆ 5ರ ಅವಧಿಯಲ್ಲಿ ಹೆಚ್ಚು. ಇತರ ಜಿಲ್ಲೆಗಳಲ್ಲಿ 40 ಡಿಗ್ರಿ ತಾಪಮಾನ ಇದ್ದಾಗಲೂ ನೀರು ಸಿಂಪಡಿಸಿದರೆ ಬದುಕುತ್ತವೆ.ಆದರೆ ಕರಾವಳಿಯಲ್ಲಿ ಸಾಧ್ಯತೆ ಕಡಿಮೆ ಎನ್ನುತ್ತಾರೆ ಕೋಳಿ ಸಾಕಣೆದಾರರು.