ದಾವಣಗೆರೆ:
ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಆರು ತಾಲೂಕುಗಳ ಪೈಕಿ ಎರಡು ತಾಲೂಕುಗಳಲ್ಲಿ ಭೀಕರ ಜಲ ಕ್ಷಾಮ ಎದುರಾಗಿದ್ದು, ಕುಡಿಯುವ ನೀರಿಗೂ ಜನ-ಜಾನುವಾರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಎದುರಾಗುವುದನ್ನು ಮೊದಲೇ ಗುರುತಿಸಿದ್ದ ಗ್ರಾಮೀಣ ಕುಡಿಯುವ ನೀರು ಸಬರಾಜು ಮತ್ತು ನೈರ್ಮಲ್ಯ ವಿಭಾಗವು, ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದ 5.8 ಕೋಟಿ ರೂ., ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿದ 7.5 ಕೋಟಿ ಅನುದಾನ ಸೇರಿ 13.3 ಕೋಟಿ ರೂ.
ಅನುದಾನದಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಈ ವರೆಗೂ 468 ಕೊಳವೆ ಬಾವಿಯನ್ನು ಕೊರೆಸಿದ್ದು, ಈ ಪೈಕಿ 20 ಕೊಳವೆ ಬಾವಿಗಳು ವಿಫಲವಾಗಿವೆ. ಇನ್ನುಳಿದ ಕೊಳವೆ ಬಾವಿಗಳು ಸಫಲವಾಗಿದ್ದರೂ, ಅಂತರ್ಜಲ ಕುಸಿದಿರುವ ಕಾರಣಕ್ಕೆ ಅರ್ಧ ಇಂಚಿನಿಂದ ಒಂದು ಇಂಚು ನೀರು ಬಂದಿದೆ.
ಇದೇ ನೀರಿನ್ನು ಕುಡಿಯಲು ಸರಬರಾಜು ಮಾಡುತ್ತಿರುವುದರಿಂದ ಎಷ್ಟೋ ಹಳ್ಳಿಗಳ ಕುಡಿಯುವ ನೀರಿನ ಬವಣೆ ನೀಗಿದೆ. ಇಲ್ಲದಿದ್ದರೆ, ಇಡೀ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತಿತ್ತು.ಪ್ರಸ್ತುತ ಶಾಶ್ವತ ಬರಗಾಲದ ಹಣೆಪಟ್ಟಿ ಹೊತ್ತಿರುವ ಜಗಳೂರು ತಾಲೂಕಿನಲ್ಲಿ ಭೀಕರ ಜಲ ಕ್ಷಾಮ ಎದುರಾಗಿದ್ದು, ಈ ತಾಲೂಕು ಒಂದರಲ್ಲಿಯೇ 48 ಹಳ್ಳಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದ್ದರೆ, ದಾವಣಗೆರೆ ತಾಲೂಕಿನ 15 ಗ್ರಾಮಗಳಲ್ಲಿ ಕುಡಿಯುವ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಇನ್ನುಳಿದ ಚನ್ನಗಿರಿ, ಹರಿಹರ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಅಕಾಸ್ಮಾತ್ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೂ ಅಲ್ಲಿ, ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಪಿಡಿಒಗಳು ಸಮಸ್ಯೆ ಬಗೆಹರಿಸಿ, ನೀರು ಸರಬರಾಜು ಮಾಡುತ್ತಿದ್ದಾರೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಸಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚ್.ಎನ್.ರಾಜ್.
ಜಿಲ್ಲೆಯಲ್ಲಿ ಈ ವರೆಗೂ ಗ್ರಾಮೀಣ ಕುಡಿಯುವ ನೀರು ಸಬರಾಜು ಮತ್ತು ನೈರ್ಮಲ್ಯ ವಿಭಾಗವು ನೀರಿನ ಸಮಸ್ಯೆಗಳಿರುವ ಒಟ್ಟು 63 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಿದ್ದು, ಈ ಗ್ರಾಮಗಳಲ್ಲಿ 92 ಟ್ಯಾಂಕರ್‍ಗಳ ಮೂಲಕ ನಿತ್ಯವೂ 374 ಟ್ರಿಪ್‍ಗಳಂತೆ ನೀರು ಪೂರೈಸಲಾಗುತ್ತಿದೆ. ಅಲ್ಲದೇ, 38 ಗ್ರಾಮಗಳಿಗೆ 55 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಆದರೂ ಸಹ ಕೆಲ ಹಳ್ಳಿಗಳಲ್ಲಿ ಜನತೆ ನೀರಿಗಾಗಿ ಕೊಡ ಹಿಡಿದು ಸುಮಾರು ಕಿ.ಮೀ. ದೂರದ ವರೆಗೆ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದು ಸರ್ವೇ ಸಾಮಾನ್ಯ. ಆದರೆ, ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಮಳೆ ಬಂದರೆ, ಅಡಿಕೆ, ತೆಂಗು ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತರು ಬೋರ್‍ವೆಲ್ ನೀರು ಬಳಕೆ ಮಾಡುವುದು ಕಡಿಮೆಯಾಗಿ ಅಂತರ್ಜಲ ಮೇಲೆರಲಿದೆ. ಅಲ್ಲದೇ, ಮಳೆ ನೀರು ಭೂಮಿಯಲ್ಲಿ ಇಂಗುವುದರಿಂದ ಅಂತರ್ಜಲವು ವೃದ್ಧಿಯಾಗಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಸಬರಾಜು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು.
ಒಟ್ಟಿನಲ್ಲಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಿರುವುದರಿಂದ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಈ ಸಮಸ್ಯಾತ್ಮಕ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಮಾತ್ರ ನೀರು ಸರಬರಾಜು ಮಾಡಲು ತಾತ್ಕಾಲಿಕ ಪ್ರಯತ್ನ ಪಡುವ ಬದಲು ಶಾಶ್ವತ ಪರಿಹಾರ ಒದಗಿಸಲು ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.