ತಾಲ್ಲೂಕಿನ ಕೆರೆಗಳಿಗೆ ತುಂಗ ಭದ್ರಾ ನದಿ ನೀರು ಹರಿಸಲು ರೈತರ ಮನವಿ

ಹೊನ್ನಾಳಿ:

     ತುಂಗಭದ್ರಾ ನದಿಯ ನೀರನ್ನು ಸದ್ಬಳಕೆ ಮಾಡಿಕೊಂಡು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ ಕೆರೆಗಳನ್ನು ತುಂಬಿಸಲು ಸರಕಾರ ಮುಂದಾಗಬೇಕು ಎಂದು ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್ ಒತ್ತಾಯಿಸಿದರು.ಇಲ್ಲಿನ ಹಿರೇಕಲ್ಮಠದಲ್ಲಿ ಗುರುವಾರ ನಡೆದ ರೈತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

      ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದೆ. ಇದರ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗುತ್ತಿದೆ. ಜಮೀನುಗಳಲ್ಲಿನ ಕೊಳವೆ ಬಾವಿಗಳು ಬತ್ತುತ್ತಿರುವ ಕಾರಣಕ್ಕೆ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಆದ್ದರಿಂದ, ಸರಕಾರ ಶೀಘ್ರವೇ ಸಮರ್ಪಕ ಜಲ ನೀತಿ ಜಾರಿಗೊಳಿಸುವ ಮೂಲಕ ಕೆರೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

       2017ರ ಡಿಸೆಂಬರ್ ತಿಂಗಳಲ್ಲಿ ಹೊನ್ನಾಳಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾಲ್ಗೊಂಡು ಮಾತನಾಡುತ್ತ ತಾಲೂಕಿನ ಎಲ್ಲಾ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಇನ್ನೂ ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

      ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್ ಮಾತನಾಡಿ, ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆಯಾದರೂ ರೈತರಿಗೆ ತತ್ಸಂಬಂಧಿ ಯಾವುದೇ ಪರಿಹಾರದ ಹಣ ಸರಕಾರದಿಂದ ಬಿಡುಗಡೆಯಾಗಿಲ್ಲ. ಫಸಲ್ ಬೀಮಾ ಯೋಜನೆಯ ಸವಲತ್ತು ಕೂಡ ರೈತರಿಗೆ ಲಭಿಸಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಚುನಾವಣಾ ನೀತಿ ಸಂಹಿತೆ ಎಂಬ ಗುಮ್ಮನನ್ನು ತೋರಿಸುತ್ತಾರೆ ಎಂದು ಕಿಡಿಕಾರಿದರು. ಉದ್ಯೋಗ ಖಾತ್ರಿ ಯೋಜನೆ ಕುಂಟುತ್ತಾ ಸಾಗಿದೆ. ಈ ಕಾರಣಕ್ಕಾಗಿ ಗ್ರಾಮೀಣ ಭಾಗಗಳ ಜನತೆ ಜೀವನ ನಡೆಸುವುದೇ ದುರ್ಭರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ರಾಜ್ಯ ಸರಕಾರದ ರೈತರ ಸಾಲ ಮನ್ನಾ ಯೋಜನೆ ನಿರೀಕ್ಷಿತ ವೇಗದಲ್ಲಿ ಜಾರಿಯಾಗುತ್ತಿಲ್ಲ. ಸಹಕಾರ ಸಂಘಗಳಲ್ಲಿನ ರೈತರ ಹತ್ತಿಪ್ಪತ್ತು ಸಾವಿರದಷ್ಟು ಸಾಲ ಮಾತ್ರ ಮನ್ನಾ ಆಗಿದೆ. ರೈತರನ್ನು ಬಾಧಿಸುತ್ತಿರುವುದು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲ. ಈ ಸಾಲ ಮನ್ನಾ ಆಗುತ್ತಿಲ್ಲ. ಈ ಕಾರಣಕ್ಕಾಗಿ ರೈತರು ತೀವ್ರ ನೊಂದಿದ್ದಾರೆ. ಆದ್ದರಿಂದ, ಸರಕಾರ ಸಾಲ ಮನ್ನಾ ಯೋಜನೆಗೆ ವೇಗ ನೀಡಬೇಕು ಎಂದು ಒತ್ತಾಯಿಸಿದರು.

       ರೈತ ಮುಖಂಡರಾದ ವಾಸನದ ಓಂಕಾರಪ್ಪ, ವಸಂತಪ್ಪ, ಕಡರನಾಯಕನಹಳ್ಳಿ ಪ್ರಭುಗೌಡ, ನರಸಿಂಹಪ್ಪ, ಫಕ್ಕೀರಪ್ಪ, ಸೊರಟೂರು ಈರಣ್ಣ, ತುಗ್ಗಲಹಳ್ಳಿ ಚನ್ನಪ್ಪ, ಹಿರೇಗೋಣಿಗೆರೆ ಗಜೇಂದ್ರ, ಚೌಡಪ್ಪ, ಯಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap