ಚಿತ್ರದುರ್ಗ
ರಾಷ್ಟ್ರೀಯತೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆ ಅಸ್ಮಿತೆಯನ್ನು ಕಳೆದುಕೊಳ್ಳಬಾರದು. ಜನಪ್ರತಿನಿಧಿಗಳು ಜನಾಭಿಪ್ರಾಯ ಹಾಗೂ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡು ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡುವಂತಹ ವಿದೇಯಕ ಮಂಡಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಆಗ್ರಹಿಸಿದ್ದಾರೆ.
ನಗರದ ರೋಟರಿಬಾಲಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ 105ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆ ಕಲಿಸಿದ ಮೇಲೆ ಇಂಗ್ಲೀಷ್ ಭಾಷೆ ಕಲಿತರೆ ಅಭ್ಯಂತರವಿಲ್ಲ. ಇದು ಅನೇಕ ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಕರಳುಬಳ್ಳಿಯ ಭಾಷೆಯಲ್ಲಿಯೇ ಶಿಕ್ಷಣ ನೀಡಿದರೆ ನಂತರ ಉಳಿದ ಭಾಷೆಯನ್ನು ಕಲಿಯಲು ಸುಲಭವಾಗುತ್ತದೆ. ಈಗ ಅನೇಕರಿಗೆ ಕನ್ನಡ ಬರೆಯಲು ಹಾಗೂ ಓದಲು ಬಾರದಂತಹ ಪರಿಸ್ಥತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕೆಂಬ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಪೋಷಕರಿಗೆ ನೀಡಿದೆ. ಪೋಷಕರು ಏಕೆ ಮಕ್ಕಳ ಮೇಲೆ ಹೇರಬೇಕು. ಇದರ ಬದಲಿಗೆ ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ಆಯ್ಕೆ ಸ್ವತಂತ್ರ ನೀಡಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ತೀರ್ಪುನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಿದರು.
ಇಂಗ್ಲೀಷ್ ಅಕ್ಷರ ಕಲಿಕೆ ಮಳಿಗೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾಲದಲ್ಲಿ ಕನಿಷ್ಠ 1ನೇ ತರಗತಿಯಿಂದ 7ನೇ ತರಗತಿವರೆಗೆ ಕಡ್ಡಾಯವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕಾಗಿದೆಕನ್ನಡ ಭಾಷೆ ಸಂಕಷ್ಟಕ್ಕೆ ಸಿಲುಕಿಲ್ಲ ಬದಲಿಗೆ ಸವಾಲುಗಳು ಅದರ ಮುಂದಿದೆ. ಹಿಂದಿ ರಾಷ್ಟ್ರಭಾಷೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಹಿಂದಿ ಮತ್ತು ಇಂಗ್ಲೀಷ್ ಸಂಪರ್ಕ ಭಾಷೆ. ಆದರೆ ಕನ್ನಡ ಭಾಷೆ ರಾಷ್ಟ್ರಭಾಷೆಯಾಗಿದೆ. ಕನ್ನಡ ಲಿಪಿ ಸುಲಭವಾಗಿ ಓದಬಹುದೇ ಹೊರತು ಬೇರೆ ಭಾಷೆ ಲಿಪಿ ಓದಲು ಆಗುವುದಿಲ್ಲ. ಮುಖ್ಯವಾಗಿ ಕನ್ನಡ ಭಾಷಿಕರು ಅನ್ಯಧರ್ಮಿಯರು, ಅನ್ಯಭಾಷಿಕರನ್ನು ಕೀಳಿರಿಮೆಯಿಂದ ಕಾಣುವುದಿಲ್ಲ ಹಾಗೂ ಸಂಘರ್ಷಕ್ಕೆ ಎಂದಿಗೂ ಎಡೆ ಮಾಡಿಕೊಟ್ಟಿಲ್ಲ ಎಂದರು.
ಒಕ್ಕೂಟದ ವ್ಯವಸ್ಥೆಯಲ್ಲಿ 22 ಭಾಷೆಗಳಿಗೆ ಕಾನೂನುಬದ್ದವಾಗಿ ಸ್ಥಾನಮಾನ ನೀಡಲಾಗಿದೆ. ಯಾವುದೇ ಭಾಷೆಗೆ ತಾರತಮ್ಯ ಮಾಡಿಲ್ಲ. ಎಲ್ಲಾ ಭಾಷೆಗಳಿಗೂ ಸ್ಥಾನ ಮಾನ ನೀಡಲಾಗಿದೆ. ಇಂಗ್ಲೀಷ್ ಭಾಷೆ ಹೆಚ್ಚು ಬಳಕೆ ಮಾಡುವುದರಿಂದ ಅದೊಂದು ಕೊಂಡಿಯಾಗಿದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಆಯಾ ದೇಶದ ಮಾತೃಭಾಷೆಯಲ್ಲಿ ನೀಡಲಾಗುತ್ತಿದೆ. ಚೀನಾ, ಜಪಾನ್, ದಕ್ಷಿಣ ಮತ್ತು ಉತ್ತರ ಕೋರಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯಬೇಕಾಗಿದೆ. ಕನಿಷ್ಠ ಕರ್ನಾಟಕ ರಾಜ್ಯದಲ್ಲಿ 1ರಿಂದ 7ನೇ ತರಗತಿ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ನೀಡುವಂತೆ ಆಗ್ರಹಿಸಿದರು.
ರಾಷ್ಟ್ರೀಯತೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆ ಅಸ್ಮಿತೆಯನ್ನು ಕಳೆದುಕೊಳ್ಳಬಾರದು. ಜನಪ್ರತಿನಿಧಿಗಳು ಜನಾಭಿಪ್ರಾಯ ಹಾಗೂ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡು ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡುವಂತಹ ವಿದೇಯಕ ಮಂಡಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭಾಷೆ, ನೆಲ ಜಲ ಹಾಗೂ ಇನ್ನಿತರ ವಿಷಯಗಳಲ್ಲಿ ಹೋರಾಟ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಕನ್ನಡ, ಭಾರತ ಮಾತಾ ಕಿ ಜೈ ಎನ್ನುವುದಕ್ಕಷ್ಟೆ ಸೀಮಿತವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಸಿ.ಶೋಭಾ ಮಾತನಾಡಿ, ಪುಸ್ತಕ ಓದುವುದರಿಂದ ಸಂಸ್ಕಾರ ಸಿಗಲಿದೆ. ಉತ್ತಮ ಆಲೋಚನೆ, ಉತ್ತಮ ಆರೋಗ್ಯಕ್ಕೂ ಸಾಹಿತ್ಯ ಸಹಕಾರಿ. ಮಕ್ಕಳು ಓದುವುದರಿಂದ ದೂರ ಹೋಗುತ್ತಿದ್ದಾರೆ. ಪೋಷಕರು ಮೊದಲು ಓದುವ ಪರಿಪಾಠ ಬೆಳೆಸಿಕೊಂಡರೆ ಮಾತ್ರ ಮಕ್ಕಳು ಸಹ ಅದೇ ದಾರಿಯಲ್ಲಿ ಸಾಗುತ್ತಾರೆ. ತಾವು ಪುಸ್ತಕ ಓದುವುದರಿಂದ ಇದುವರೆಗೆ ಆಸ್ಪತ್ರೆಗೆ ಹೋಗಿಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಭಾಷೆ ಉಳಿದರೆ ಸಂಸ್ಕೃತಿ ಉಳಿಯಲಿದೆ. ಇಲ್ಲದಿದ್ದರೆ ಸಂಸ್ಕೃತಿ ಅವನತಿ ಹೊಂದಲಿದೆ. ಭಾಷೆ ಉಳಿವಿಗಾಗಿ ಅನೇಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಕಸಾಪ ದಾಸೇಗೌಡ ಹಾಗೂ ಇತರರು ಭಾಗವಹಿಸಿದ್ದರು.