ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ನೀಗಿಸಲು ಸೂಕ್ತ ಕ್ರಮ : ವಿಶ್ವನಾಥ್

ಕುಣಿಗಲ್

      ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಎಲ್ಲಾ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳುವ ಮೂಲಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ವಿ.ಆರ್.ವಿಶ್ವನಾಥ್ ತಿಳಿಸಿದರು.

      ತಾಲ್ಲೂಕು ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ತಾಲ್ಲೂಕಿನಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನ ನಿಭಾಯಿಸಲು ಉತ್ತಮ ಕಾರ್ಯಪಡೆಯನ್ನ ರಚಿಸಲಾಗಿದ್ದು, ತಾಲ್ಲೂಕಿನ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ 19 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈಗಾಗಲೇ 13 ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತಿದೆ. 6 ಖಾಸಗಿ ಬೋರ್‍ವೆಲ್‍ನಿಂದ ನೀರು ಸರಬರಾಜು ಪಡೆಯುತ್ತಿದ್ದು, ದಿನನಿತ್ಯ 45 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲು ಹಗಲಿರುಳು ಶ್ರಮಿಸುತ್ತಿದ್ದು, ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪಂಚಾಯ್ತಿಯ ಪಿಡಿಓಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲ್ಲೂಕಿನಾದ್ಯಂತ 51 ಹೊಸ ಬೋರ್‍ವೆಲ್‍ಗಳನ್ನ ಕೊರೆಸಿ ಇದರಲ್ಲಿ 47 ಬೋರ್‍ವೆಲ್‍ಗಳು ಯಶಸ್ವಿಯಾಗಿದ್ದು, ಇವುಗಳಿಂದ ನೀರುಗಳನ್ನ ಸರಬರಾಜು ಮಾಡಲಾಗುತ್ತಿದೆ.

      ಈಗಾಗಲೇ ಪಶುಪಾಲನಾ ಇಲಾಖೆಯ ವರದಿಯಂತೆ ಜಾನುವಾರುಗಳಿಗೆ 25 ವಾರಗಳಿಗೆ ಆಗುವಷ್ಟು ಮೇವು ಇದ್ದು, ಇನ್ನು 6 ತಿಂಗಳು ಯಾವುದೆ ಮೇವಿನ ಕೊರತೆ ಇರುವುದಿಲ್ಲ ಎಂದು ತಿಳಿಸುತ್ತಾ, ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯಾವುದೆ ಸಮಸ್ಯೆಗಳು ಇರುವುದಿಲ್ಲ ಎಂದು ಈಗಾಗಲೇ ಮುಖ್ಯಾಧಿಕಾರಿಗಳು ವರದಿ ಸಲ್ಲಿಸಿದ್ದು, ಅಗತ್ಯ ಇರುವ ಕಡೆ ಪುರಸಭೆಯ ಟ್ಯಾಂಕರ್‍ನಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದರು.

      ಅಮೃತೂರಿನಲ್ಲಿ 2 ನೂತನ ಬೋರ್‍ವೆಲ್‍ಗಳನ್ನ ಕೊರೆಸಿದ್ದು, ಖಾಸಗಿ ವ್ಯಕ್ತಿಗಳಿಂದ ನೀರು ಸರಬರಾಜು ಮಾಡುತ್ತಿದ್ದು, 8 ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.ನೀರಿನ ಸಮಸ್ಯೆ ಉಂಟಾಗದಂತೆ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯ್ತಿ ಹಗಲಿರುಳು ಕಾರ್ಯಪಡೆಯನ್ನ ನೇಮಿಸಲಾಗಿದೆ ಎಂದು ತಿಳಿಸಿದರು.

      ಕಂದಾಯ ಇಲಾಖೆಯಿಂದ ರೈತರ ಜಮೀನುಗಳ ಯಾವುದೇ ಸಮಸ್ಯೆ ತಿದ್ದುಪಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಯಾವುದೇ ಅಕ್ರಮ ನಡೆಯದಂತೆ ಗಮನ ಹರಿಸಿದ್ದು, ರೈತರು ನೇರವಾಗಿ ತಮ್ಮನ್ನು ಸಂಪರ್ಕಿಸಬೇಕೆಂದು ವಿನಂತಿಸಿದರು. ಈಗಾಗಲೇ ಬರಪರಿಹಾರ ಕಾಮಗಾರಿ ಕೈಗೊಳ್ಳಲು 30 ಲಕ್ಷ ರೂಪಾಯಿ ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದು, ಇದರಲ್ಲಿ 25 ಲಕ್ಷ ರೂಪಾಯಿ ವೆಚ್ಚದ 21 ಕಾಮಗಾರಿಯನ್ನ ಕೈಗೊಂಡಿದ್ದು, ಇವುಗಳನ್ನ ಗುಣಮಟ್ಟದಿಂದ ಮಾಡುವಂತೆ ತಾಕೀತು ಮಾಡಲಾಗಿದೆ ಎಂದರು.

   ಎಡೆಯೂರಿನ ನಾಡಕಚೇರಿಯಲ್ಲಿ ಆಧಾರ್ ಕೇಂದ್ರ ಆರಂಭಗೊಂಡಿದ್ದು, ಇದರ ಸದುಪಯೋಗವನ್ನ ರೈತರು, ಸಾರ್ವಜನಿಕರು ಮಾಡಿಕೊಳ್ಳಬೇಕಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link