ಬೆಂಗಳೂರು
ಸಾವು ಹೇಗೆ ಬರಲಿದೆ ಎನ್ನುವುದರ ಕೂತೂಹಲದಿಂದ ಪ್ರಯೋಗ ಮಾಡಲು ಹೋಗಿ 11 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿದೆ.
ಮಲ್ಲಸಂದ್ರದ ಗೋಬಿಮಂಚೂರಿ ವ್ಯಾಪಾರಿ ರಂಗೇಗೌಡ ಹಾಗೂ ಶಾರದ ದಂಪತಿಯ ಪುತ್ರಿ ಪೂಜಾ ಎಂದು ಮೃತ ಬಾಲಕಿಯನ್ನು ಗುರುತಿಸಲಾಗಿದೆ. ಪೂಜಾ ಊಟ ಮಾಡಲು ಹೋಗುವುದಾಗಿ ಮನೆಯಲ್ಲಿ ಹೇಳಿ ಸೋಮವಾರ ರಾತ್ರಿ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಲ್ಲಸಂದ್ರದ ಮನೆಯ ಸ್ವಲ್ಪದೂರದಲ್ಲಿಯೇ ತಳ್ಳುವ ಗಾಡಿಯಲ್ಲಿ ರಂಗೇಗೌಡ ಅವರು ಗೋಬಿಮಂಚೂರಿ ವ್ಯಾಪಾರ ಮಾಡುತ್ತಿದ್ದು, ಸಂಜೆ 6ರ ವೇಳೆ ವ್ಯಾಪಾರ ಮಾಡಲು ಹೋಗಿದ್ದು, ಅವರೊಂದಿಗೆ ಪತ್ನಿ ಶಾರದ, ಮಗಳಾದ ಪೂಜಾ ಹಾಗೂ ಆಕೆಯ ತಮ್ಮ ಹೋಗಿದ್ದರು. ಸ್ವಲ್ಪ ಸಮಯದ ನಂತರ, ಪೂಜಾ, ಊಟಕ್ಕೆ ಮನೆಗೆ ಹೋಗಿ ಅಲ್ಲೇ ಇರುವುದಾಗಿ ತಂದೆ – ತಾಯಿಗೆ ಹೇಳಿ ಮೊಸರು ತೆಗೆದುಕೊಂಡು ಹೋಗಿದ್ದಾಳೆ.
ವ್ಯಾಪಾರ ಮುಗಿಸಿಕೊಂಡು ರಂಗೇಗೌಡ ದಂಪತಿ ರಾತ್ರಿ 9.30ರ ವೇಳೆ ಮನೆಗೆ ಬರುವಷ್ಟರಲ್ಲಿ ಪೂಜಾ ಮೃತಪಟ್ಟಿದ್ದಳು. ಆಕೆ ಕತ್ತಿನ ಸುತ್ತ ಗಾಯವಾಗಿದ್ದು, ಸಾವು ಹೇಗೆ ಸಂಭವಿಸುತ್ತದೆ ಎನ್ನುವುದರ ಪ್ರಯೋಗ ಮಾಡಲು ಹೋಗಿ ನೇಣಿಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.
ಪೂಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯ ವರದಿ ಬಂದ ನಂತರ, ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ. ಮೃತ ಪೂಜಾ ಮಲ್ಲಸಂದ್ರದ ಬಿಎನ್ಆರ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಳು. ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
