ಸಮಕಾಲೀನ ಸಮಸ್ಯೆಗಳಿಗೆ ಬಸವ ತತ್ವದಲ್ಲಿ ಉತ್ತರ

ದಾವಣಗೆರೆ:

      ಹಿಂಸೆ, ಅಶಾಂತಿ, ರಕ್ತಪಾತ ಸೇರಿದಂತೆ ಇತರೆ ಸಮಕಾಲೀನ ಸಮಸ್ಯೆಗಳಿಗೆ ಬಸವ ತತ್ವದಲ್ಲಿ ಉತ್ತರವಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.

      ನಗರದ ವಿರಕ್ತ ಮಠದಲ್ಲಿ ಮಂಗಳವಾರ ವೀರಶೈವ ತರುಣ ಸಂಘದ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀಬಸವೇಶ್ವರರ ಪುತ್ಥಳಿಯದ ಮೆರವಣಿಗೆ, ಪ್ರಭಾತ ಫೇರಿ, ತೊಟ್ಟಿಲೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನಂತರ ನಡೆದ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

       ಹಿಂಸೆ, ಅಶಾಂತಿ, ರಕ್ತಪಾತ, ಅಮಾನವೀಯ ಚಟುವಟಿಕೆಗಳಿಂದಾಗಿ ಇಂದು ಜಗತ್ತಿನಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ದೇಶ-ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಮುಗ್ಧರ ಹತ್ಯೆಯಾಗುತ್ತಿವೆ. ಮನುಷ್ಯರನ್ನು ಕೊಲ್ಲುವವರು ಯಾವ ಧರ್ಮಕ್ಕೂ ಸೇರಿದವರಲ್ಲ. ಅವರದು ಕೊಲ್ಲುವ ಧರ್ಮವಾಗಿದ್ದು, ಇಂತಹ ಹಲವು ಸಮಕಾಲೀನ ಸಮಸ್ಯೆಗಳಿಗೆ ಬಸವತತ್ವದಲ್ಲಿ ಉತ್ತರವಿದೆ. ಬಸವತತ್ವ ಎಂಬ ಇಂಜೆಕ್ಷನ್‍ನಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದೆ ಎಂದರು.

       ಇತ್ತೀಚಿನ ದಿನಮಾನಗಳಲ್ಲಿ ಮಾನವ ದಾನವ ಆಗಿದ್ದಾನೆ. ಮನುಷ್ಯನ ಸ್ವಾರ್ಥದಿಂದಾಗಿ ಆತನಲ್ಲಿ ದುರಾಲೋಚನೆಗಳೇ ತುಂಬಿವೆ. ಬಸವಣ್ಣ ಹೇಳಿದ ಸಪ್ತಸೂತ್ರಗಳು ನಮಗೆ ನಿತ್ಯ ಮಂತ್ರಗಳಾಗಬೇಕು. ನಮ್ಮೊಳಗೆ ಅರಿವು ಜಾಗೃತವಾಗಿ ಬಸವಪ್ರಜ್ಞೆ ಮೂಡಬೇಕು. ಆಗ ಸಮಾಜದಲ್ಲಿ ಶಾಂತಿ ನೆಲೆಯೂರಲಿದೆ ಎಂದು ಹೇಳಿದರು.

      ಬಸವಣ್ಣ ಬರೀ ಒಬ್ಬ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿಯೇ ಆಗಿದ್ದಾರೆ. ಆತ ಜ್ಞಾನ, ಭಕ್ತಿ, ಕ್ರಾಂತಿಯ ಭಂಡಾರವಾಗಿದ್ದಾನೆ. ಆತನ ನಾಮಸ್ಮರಣೆಯಿಂದ ಬದುಕಿನ ದುಃಖಗಳು ದೂರವಾಗುವುದರ ಜೊತೆಗೆ, ಚೈತನ್ಯ ಸ್ವರೂಪಿಗಳಾಗಲು ಸಾಧ್ಯವಾಗಲಿದೆ ಎಂದರು.

        ಜ್ಞಾನವೆಂಬ ಬಂಗಾರವನ್ನು ಪಡೆಯಲು ಬಸವಾದಿ ಶರಣ-ಶರಣೆಯರು, ಮಹಾತ್ಮರ ಪ್ರವಚನಗಳಿಂದ, ಪುಸ್ತಕಗಳಿಂದ ಅರಿಯಬೇಕು. ಇಂತಹ ಸಾಧಕರು, ಶರಣರು, ಮಹಾತ್ಮರ ಜೀವನ ಸಂದೇಶ, ಆದರ್ಶಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಂಡಾಗ ಮಾತ್ರವೇ ನಮ್ಮ ಬಾಳು ಸಹ ಬಂಗಾರವಾಗಲಿದೆ ಎಂದು ನುಡಿದರು.

      ಪ್ರತಿ ಬಸವ ಜಯಂತಿಯಂದು ವಿರಕ್ತ ಮಠ, ವೀರಶೈವ ತರುಣ ಸಂಘದಿಂದ ಬಸವ ಜಯಂತಿ, ತೊಟ್ಟಿಲು ಕಾರ್ಯಕ್ರಮ ಆಚರಿಸಲಾಗುತ್ತದೆ. 1917ರಲ್ಲಿ ವಿರಕ್ತ ಮಠದ ಶ್ರೀಮೃತ್ಯುಂಜಯ ಅಪ್ಪಗಳು, ಹರ್ಡೇಕರ್ ಮಂಜಪ್ಪನವರಿಂದ ವಿಶ್ವದಲ್ಲೇ ಮೊದಲ ಬಾರಿಗೆ ಬಸವ ಪ್ರಭಾತ ಪೇರಿ, ಬಸವ ಜಯಂತಿ ಆಚರಿಸಲಾಯಿತು. ಡಾ.ಕಣಕುಪ್ಪಿ ಕೊಟ್ರಬಸಪ್ಪ, ಕಣಕುಪ್ಪಿ ಗುರುಪಾದಪ್ಪ ಬಸವ ಪ್ರಭಾತ ಪೇರಿ ಮುಂದುವರಿಸಿಕೊಂಡು ಬಂದಿದ್ದು, ಇದಕ್ಕೆ 102 ವರ್ಷಗಳ ಇತಿಹಾಸವಿದೆ ಎಂದರು.

       ಪ್ರತಿ ಬಸವ ಜಯಂತಿಯಂದು ತೊಟ್ಟಿಲು ಕಾರ್ಯಕ್ರಮ ನಡೆಯಲಿದ್ದು, ತಾಯಂದಿರುವ ತಮ್ಮ ಹೆಸರಿಡದ ಮಕ್ಕಳಿಗೆ ಇಲ್ಲಿಗೆ ತಂದು ತೊಟ್ಟಿಲಿಗೆ ಹಾಕಿ, ಭಸ್ಮಧಾರಣೆ ಮಾಡಿಸಿಕೊಂಡು ಅಕ್ಕ ಮಹಾದೇವಿ, ಬಸವಣ್ಣ, ಚನ್ನಬಸವಣ್ಣ ಎಂಬ ಶರಣ-ಶರಣೆಯರ ಹೆಸರುಗಳನ್ನು ನಾಮಕರಣ ಮಾಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಇದೂ ಶತಮಾನದಿಂದಲೂ ನಡೆದುಕೊಂಡು ಬಂದ ಪದ್ಧತಿಯೂ ಆಗಿದೆ. ಪ್ರತಿದಿನ ಬಸವ ಸ್ಮರಣೆ ಮಾಡುವುದರಿಂದ ನಿಮ್ಮಲ್ಲಿನ ಸಮಸ್ಯೆ, ಒತ್ತಡ, ದುಃಖ, ನೋವು ನಿವಾರಣೆ ಆಗಲಿದೆ ಎಂದರು.

       ಮನುಷ್ಯನಲ್ಲಿರುವ ದುರಾಲೋಚನೆ, ದುರಾಸೆ, ಮೋಸತನ, ಸುಳ್ಳುತನ ದೂರವಾಗಬೇಕಾದರೆ, ಬಸವಣ್ಣನವರ ಕಲಬೇಡ, ಕೊಲಬೇಡ ವಚನಗಳ ಸಾರವನ್ನು ಬದುಕಿನ ಸೂತ್ರವನ್ನಾಗಿ ಮಾಡಿಕೊಂಡು ಪ್ರತಿದಿನವೂ ಪಠಿಸುತ್ತಾ ಬಂದರೆ ಮಾನವ ಶರಣಾಗುತ್ತನೆ. ಮಾನವ ಜನ್ಮ ಬರುವುದು, ಸುಲಭವಲ್ಲ, ಅದನ್ನು ಹಾಳು ಮಾಡಿಕೊಳ್ಳಬೇಡಿ. ದುಶ್ಚಟ, ದುರ್ಗುಣ, ಕೆಟ್ಟ ಚಟಗಳಿಂದ ಕುಡಿದು, ತಿಂದು ಹಾಳು ಮಾಡಿಕೊಳ್ಳಬೇಡಿ. ಬಸವ ತತ್ವ,ಕಾಯಕ, ದಾಸೋಹ, ಸಮಾನತೆ ಶಿವಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

       ಕಾರ್ಯಕ್ರಮದಲ್ಲಿ ಶಿಕಾರಿಪುರದ ಶ್ರೀಚನ್ನಬಸವ ಸ್ವಾಮೀಜಿ, ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಕೆಎಸ್‍ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ, ಟಿ.ಎಂ.ವೀರೇಂದ್ರ, ಶಿವಸಿಂಪಿ ಸಮಾಜದ ಗುರುಬಸಪ್ಪ, ಹೇಮಣ್ಣ, ಮಲ್ಲಿಕಾರ್ಜುನ ಜವಳಿ, ಎನ್.ಜೆ.ಶಿವಕುಮಾರ, ಬಾಳೆಕಾಯಿ ಮುರುಗೇಶಪ್ಪ, ಶಿವನಗೌಡ ಪಾಟೀಲ, ವೀರಣ್ಣ, ಮಹಿಳಾ ಬಸವ ಕೇಂದ್ರದ ಮಹದೇವಮ್ಮ, ಎಂ.ಬಸವರಾಜ, ಕುದರಿ ಉಮೇಶ, ಧಮಯಂತಿ ಗೌಡ್ರು ಇತರರು ಇದ್ದರು.

        ಈ ತೊಟ್ಟಿಲು ಕಾರ್ಯಕ್ರಮದಲ್ಲಿ ಸುಮಾರು 15ಕ್ಕೂ ಹೆಚ್ಚು ಮಕ್ಕಳಿಗೆ ಬಸವಣ್ಣ, ಅಕ್ಕ ಮಹಾದೇವಿ ಸೇರಿದಂತೆ ವಿವಿಧ ಶರಣ-ಶರಣೆಯರ ಹೆಸರು ನಾಮಕರಣ ಮಾಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap