ದಾವಣಗೆರೆ:
ಜಗಜ್ಯೋತಿ ಶ್ರೀಬಸವೇಶ್ವರ ಜಯಂತಿಯ ಪ್ರಯುಕ್ತ ಇಲ್ಲಿನ ದೊಡ್ಡಪೇಟೆ ಹಾಗೂ ಕಾಯಿಪೇಟೆಯ ಶ್ರೀಬಸವೇಶ್ವರ ದೇವಸ್ಥಾನ ಸೇವಾ ಸಂಘಗಳ ವತಿಯಿಂದ ಮಂಗಳವಾರ ಸಂಜೆ ಪ್ರತ್ಯೇಕವಾಗಿ ಶ್ರೀಬಸವೇಶ್ವರ ಬೆಳ್ಳಿ ಮೂರ್ತಿಯ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು.
ಮೆರವಣಿಗೆಗೂ ಮುನ್ನ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಅಥಣಿ ವೀರಣ್ಣನವರು ದೊಡ್ಡಪೇಟೆ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಭಕ್ತರು ಎತ್ತುಗಳನ್ನು ಅಲಂಕಾರ ಮಾಡಿಕೊಂಡು ಬಂದು, ಪೂಜೆ ಮಾಡಿಸುತ್ತಿದ್ದ ದೃಶ್ಯ ದೊಡ್ಡಪೇಟೆ ಹಾಗೂ ಕಾಯಿಪೇಟೆ ಬಸವೇಶ್ವರ ದೇವಸ್ಥಾನಗಳ ಎದುರು ಸಾಮಾನ್ಯವಾಗಿತ್ತು.
ಬೆಳಿಗ್ಗೆಯಿಂದ ರಾತ್ರಿಯ ವರೆಗೂ ಭಕ್ತರು ಈ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿ, ಜಗಜ್ಯೋತಿ ಬಸವೇಶ್ವರರ ದರುಶನ ಪಡೆದು ಪುನೀತರಾದರು.ಮಂಗಳವಾರ ಸಂಜೆ ದೊಡ್ಡಪೇಟೆಯ ಶ್ರೀಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಶ್ರೀಬಸವೇಶ್ವರರ ಬೆಳ್ಳಿ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ದೊಡ್ಡಪೇಟೆ ದೇವಸ್ಥಾನದ ಆವರಣದಿಂದ ಹೊರಟ ಮೆರವಣಿಗೆಯು ಶಾಂತಿ ಟಾಕೀಸ್ ರಸ್ತೆ, ಮೈಸೂರ್ ಬ್ಯಾಂಕ್ ರಸ್ತೆ, ಗಡಿಯಾರ ಕಂಬ, ವಸಂತ ಟಾಕೀಸ್ ರಸ್ತೆ, ಕಾಯಿ ಪೇಟೆ, ವಿಜಯಲಕ್ಷ್ಮೀ ರಸ್ತೆ, ದೊಡ್ಡ ಪೇಟೆ ಸೇರಿದಂತೆ ಪ್ರಮುಖ ಬಿದಿಗಳಲ್ಲಿ ಸಂಚರಿಸಿ. ಮರಳಿ ದೇವಸ್ಥಾನಕ್ಕೆ ತಲುಪಿ ಮುಕ್ತಾಯವಾಯಿತು.
ಮೆರವಣಿಗೆಯಲ್ಲಿ ಸಂಘದ ಸಂಚಾಲಕ ಬೇತೂರು ರಾಜೇಶ್, ಕಾರ್ಯದರ್ಶಿ ದೇವರಮನೆ ಜಯರಾಜ್, ಉಪಾಧ್ಯಕ್ಷ ಪಲ್ಲಾಗಟ್ಟೆ ಶಿವಾನಂದಪ್ಪ, ಹೊಳೆಹೊನ್ನೂರು ಈಶಣ್ಣ, ಬೇತೂರು ಜಗದೀಶ್, ಬೇತೂರು ಕಿರಣ್, ದೇವರಮನೆ ವಿಜಯಕುಮಾರ್, ಹಳದಂಡಿ ರಾಜಶೇಖರಯ್ಯ, ಸೋಮನಹಳ್ಳಿ ನಿಜಗುಣ ಶಿವಯೋಗಿ, ಮಾಕನಳ್ಳಿ ಬಸವರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾಯಿಪೇಟೆ ಮೆರವಣಿಗೆ:
ಅದೇರೀತಿ ಕಾಯಿಪೇಟೆಯ ಶ್ರೀಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದಲೂ ಶ್ರೀಬಸವೇಶ್ವರರ ಬೆಳ್ಳಿ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಕಾಯಿಪೇಟೆ ಬಸವೇಶ್ವರ ದೇವಸ್ಥಾನ ಆವರಣದಿಂದ ಆರಂಭವಾದ ಬಸವೇಶ್ವರ ಬೆಳ್ಳಿಮೂರ್ತಿಯ ಮೆರವಣಿಗೆಯು ಗಡಿಯಾರ ಕಂಬ, ಮಂಡಿಪೇಟೆ, ಎಂ.ಜಿ.ರಸ್ತೆ, ಚೌಕಿಪೇಟೆ, ವಿಜಲಕ್ಷ್ಮೀ ರಸ್ತೆ, ಒಕ್ಕಲಿಗರ ಪೇಟೆ, ಕಾಯಿಪೇಟೆ, ಹೊಂಡದ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಿ ಮುಕ್ತಾಯವಾಯಿತು.
ನಂದಿ ಧ್ವಜ ಕುಣಿತ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ರಂಗು ನೀಡಿದವು. ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ಪದಾಧಿಕಾರಿಗಳು, ಭಕ್ತ ವೃಂದದವರು ಇದ್ದರು.