ಚಳ್ಳಕೆರೆ
ಸರ್ಕಾರ ಸಾರ್ವಜನಿಕರ ಸದುಪಯೋಗಕ್ಕಾಗಿ ಅನೇಕ ಹುದ್ದೆಗಳನ್ನು ನಿರ್ಮಿಸಿ ಕಾರ್ಯರೂಪಕ್ಕೆ ತಂದಿದ್ದು, ಇದರಿಂದ ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಹೆಚ್ಚು ಮಹತ್ವವವನ್ನು ಪಡೆದುಕೊಂಡಿದ್ದು, ಆರೋಗ್ಯ ಇಲಾಖೆಯ ಉತ್ತಮ ಸೇವಾ ಕಾರ್ಯದಿಂದ ಮಾತ್ರ ಜನಮನ್ನಣೆ ಗಳಿಸಲು ಸಾಧ್ಯವೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಸವರಾಜು ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ಕಚೇರಿ ಸಭಾಂಗಣದಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿ ಸೇವೆ ಸಲ್ಲಿಸಿ ಚಿತ್ರದುರ್ಗಕ್ಕೆ ವರ್ಗಾವಣೆಯಾದ ಡಾ.ಬಸವರಾಜರವರ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಸಾಮಾನ್ಯವಾಗಿ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ಎಲ್ಲಾ ರೋಗಿಗಳಲ್ಲಿ ವೈದ್ಯರು ನೀಡುವ ಚಿಕಿತ್ಸೆಯ ಬಗ್ಗೆ ಹೆಚ್ಚು ಚಡಪಡಿಕೆ ಇದ್ದು, ಅವುಗಳನ್ನು ಸರಿದೂಗಿಸಲು ಗುಣಾತ್ಮಕ ಚಿಕಿತ್ಸೆ ನೀಡುವ ಅವಶ್ಯಕತೆ ಇದೆ. ವೈದ್ಯರು ನೀಡುವ ಚಿಕಿತ್ಸೆಯಿಂದ ಗುಣಮುಖನಾಗುವ ರೋಗಿ ಸದಾ ವೈದ್ಯರನ್ನು ದೇವರ ಸ್ಥಾನದಲ್ಲಿಟ್ಟು ಸ್ಮರಿಸುತ್ತಾನೆ.
ಇಂತಹ ವೈದ್ಯ ವೃತ್ತಿಯ ಪಾವಿತ್ರತೆಗೆ ಯಾವುದೇ ಹಂತದಲ್ಲೂ ಕಳಂಕ ಉಂಟಾಗದಂತೆ ಎಲ್ಲಾ ವೈದ್ಯರು ಎಚ್ಚರಿಕೆ ವಹಿಸಬೇಕಾಗಿದೆ . ಇಲ್ಲಿನ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳ ವೈದ್ಯರು ತೃಪ್ತಿಕವಾಗಿ ಕಾರ್ಯನಿರ್ವಹಿಸುತಿರುವುದು ನನಗೆ ಸಂತಸ ತಂದಿದೆ ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅರವಳಿಕೆ ತಜ್ಞ ಡಾ.ಬಸವರಾಜು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರಲ್ಲೂ ಉತ್ತಮ ಸಹೋದರತ್ವ ಭಾವನೆಗಳಿದ್ದು, ಎಲ್ಲರೂ ಸದಾಕಾಲ ಸ್ಪಂದಿಸುವ ಮನಸನ್ನು ಹೊಂದಿದ್ಧಾರೆ. ಯಾವುದೇ ಸಂದರ್ಭದಲ್ಲಿ ನಾನು ಬೇರೆ ವಿಭಾಗಗಳ ವೈದ್ಯರನ್ನು ಸಂಪರ್ಕಿಸಿದರೂ ಅವರು ಉತ್ತಮ ಸಹಕಾರ ನೀಡಿದ್ಧಾರೆ. ಇಲ್ಲಿನ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಸಹಕಾರ ನೀಡಿದ್ದು ನನಗೆ ಇಲ್ಲಿ ಕಾರ್ಯನಿರ್ವಹಿಸಲು ತೊಂದರೆ ಉಂಟಾಗಲಿಲ್ಲ. ನಿಮ್ಮೆಲ್ಲರ ಅಭಿಲಾಷೆಯಂತೆ ಉತ್ತಮ ವೈದ್ಯನೆಂಬ ಬಿರುದು ನನಗೆ ಬಂದಿದ್ದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ.ಜಿ.ತಿಪ್ಪೇಸ್ವಾಮಿ, ಡಾ.ಬಿ.ಆರ್.ಮಂಜಪ್ಪ, ವೆಂಕಟೇಶ್, ಬಸವರಾಜು, ಪ್ರಜ್ವಲ್ ಧನ್ಯ, ಅಮೀತ್ ಗುಪ್ತ, ಡಾ.ಸುಹೀನಾ, ಡಾ.ಜಯಲಕ್ಷ್ಮಿ, ಡಾ. ಸತೀಶ್ ಆದಿಮನಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಹಾಯಕ ಆಡಳಿತಾಧಿಕಾರಿ ಕದರಪ್ಪ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
