ಮಧುಗಿರಿ
ತೀರ್ವ ಬರಗಾಲದಿಂದ ತಾಲ್ಲೂಕು ತತ್ತರಿಸಿದೆ ಜನತೆಗೆ ಕುಡಿಯುವ ನೀರು ಮತ್ತು ಗೋವುಗಳಿಗೆ ಗುಣಮಟ್ಟದ ಮೇವನ್ನು ವಿತರಿಸುವಲ್ಲಿ ತಾಲ್ಲೂಕು ಆಡಳಿತ ಹಾಗೂ ಹಾಲಿ ಶಾಸಕರು ವಿಫಲರಾಗಿದ್ದಾರೆ ಎಂದು ಮಾಜಿ ಜಿ.ಪಂ ಉಪಾಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಆರೋಪಿಸಿದ್ದಾರೆ.
ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಉಚ್ಚ ನ್ಯಾಯಾಲಯ ಬರಗಾಲ ಇರುವ ಕಡೆ ಗೋಶಾಲೆಗಳನ್ನು ಪ್ರಾರಂಭಿಸಲು ಆದೇಶ ಹೊರಡಿಸಿದೆ ಆದರೆ ಸ್ಥಳೀಯ ಆಡಳಿತ ಆರ್ಹ ರೈತರಿಗೆ ಸಮಪರ್ಕವಾಗಿ ಮೇವು ವಿತರಿಸುತ್ತಿಲ್ಲ.
ಕ್ಷೇತ್ರದ ಶಾಸಕರ ನಿರ್ಲಕ್ಷ್ಯದಿಂದ ಜನತೆಗೆ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ತೆರೆದು 60 ದಿನಗಳು ಕಳೆದಿದೆ 10 ದಿನವಾದರೂ ಸರಿಯಾಗಿ ಜಾನುವಾರುಗಳಿಗೆ ಮೇವು ಸಮರ್ಪಕವಾಗಿ ಅಧಿಕಾರಿಗಳು ವಿತರಿಸುತ್ತಿಲ್ಲ.ತಾಲ್ಲೂಕಿನಲ್ಲಿ ಒಣ ಮೇವನ್ನೂ ವಿತರಿಸಲು ಅಧಿಕಾರಿಗಳು ಟೆಂಡರ್ ಕರೆದು ಕಳಪೆ ಮಟ್ಟದ ಹಸಿ ಮೇವನ್ನು ವಿತರಿಸುತ್ತಿದ್ದಾರೆ. ರೈತರಿಂದ ಕೆ.ಜಿಗೆ 2ರೂನಂತೆ ಹಣ ವಸೂಲಿ ಮಾಡಿ ಉತ್ತಮ ಗುಣಮಟ್ಟದ ಮೇವುವನ್ನು ನೀಡುತ್ತಿಲ್ಲ. ಕಳೆದ ಸರ್ಕಾರಗಳು ರೈತರಿಗೆ ಉಚಿತ ಮೇವಿನ ಜೊತೆಯಲ್ಲಿ ಗೋಶಾಲೆ ಆರಂಭಿಸಿದ್ದರು ಆದರೆ ಇಂದಿನ ಸರ್ಕಾರದ ಬಳಿ ಮೇವು ವಿತರಿಸಲು ಹಣವಿಲ್ಲವೆ ಮೇವಿನ ಹಣದಲ್ಲಿಯೇ ಸರಕಾರ ನಡೆಸಬೇಕಾ ಎಂದು ಪ್ರಶ್ನಿಸಿದರು.
ಕೊಡಿಗೇನಹಳ್ಳಿಯಲ್ಲಿ ಗೋಶಾಲೆ ಪ್ರಾರಂಭಿಸಿ ಈಗ ನಿಲ್ಲಿಸಿದ್ದಾರೆ. ಕೂಡಲೆ ಶಾಸಕರು ಎಚ್ಚೆತ್ತುಕೊಂಡು ಪ್ರತಿ ಹೋಬಳಿ ಎರೆಡೆರೆಡು ಕಡೆ ಗೋಶಾಲೆಗಳನ್ನು ಪ್ರಾರಂಭಿಸಿ, ಗೋಶಾಲೆಗಳಿಗೆ ಬರುವ ರೈತರಿಗೆ ಉಚಿತ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸಹಕಾರಿ ಮಹಾಮಂಡಲಾಧ್ಯಕ್ಷ ಎನ್.ಗಂಗಣ್ಣ ಮಾತನಾಡಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಅವಧಿಯಲ್ಲಿ ಬರ ಪರಸ್ಥಿತಿಯನ್ನು ಕ್ರಮಬದ್ದವಾಗಿ ಎದುರಿಸಿ, ಜನತೆಗೆ ಕುಡಿಯುವ ನೀರು ಹಾಗೂ ಗೋವುಗಳಿಗೆ ಉತ್ತಮ ಗುಣಮಟ್ಟದ ಮೇವನ್ನು ಸಮರ್ಪಕವಾಗಿ ವಿತರಿಸಿ ಜಿಲ್ಲೆಯಾದ್ಯಂತ ಗೋಶಾಲೆಗಳಲ್ಲಿ ರೈತರಿಗೆ ಉಚಿತ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ರೈತಪರ ಕಾಳಜಿ ವಹಿಸಿ ರಾಜ್ಯಕ್ಕೆ ಮಾದರಿಯಾಗಿದ್ದರು ಎಂದರು.
ತುಮುಲ್ ಮಾಜಿ ಅಧ್ಯಕ್ಷ ನಾಗೇಶ್ ಬಾಬು ಮಾತನಾಡಿ ತಾಲ್ಲೂಕಿನ ರೈತರಿಗೆ ಒಣ ಮೇವು ವಿತರಿಸುವ ಜವಾಬ್ದಾರಿ ಆಂಧ್ರ ಮೂಲದ ಗುತ್ತಿಗೆದಾರನಿಗೆ ನೀಡಲಾಗಿದೆ ಆದರೆ ಇಲ್ಲಿನ ಕೆಲ ಅಧಿಕಾರಿಗಳು ಸರಬರಾಜುದಾರನೊಂದಿಗೆ ಶಾಮೀಲಾಗಿ ಹಾಗೂ 75 ಕೆ.ಜಿ. ಮೇವು ವಿತರಣೆ ಮಾಡಬೇಕಾಗಿದ್ದು ಅದರಲ್ಲಿ ಸುಮಾರು 50 ಕೆ.ಜಿಯಷ್ಟು ಕಡಿಮೆ ತೂಕದ ಹಸಿ ಮೇವನ್ನು ವಿತರಣೆ ಮಾಡಲಾಗುತ್ತಿದೆ ಲಾರಿಗಳಲ್ಲಿ ಬರುವ ಮೇವಿನ ತೂಕದಲ್ಲಿ ಬಾರಿ ವ್ಯತ್ಯಾಸಗಳು ಕಂಡುಬರುತ್ತಿವೆ ಈಗಲಾದರೂ ಸಂಭಂಧಪಟ್ಟವರು ಎಚ್ಚೆತ್ತುಕೊಂಡು ಉಚಿತವಾಗಿ ಮೇವು ವಿತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
