ಬೆಂಗಳೂರು
ಅತಿವೇಗವಾಗಿ ಹೋಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಇಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಬಳ್ಳಾಪುರ ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಎಸ್ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹನುಮೇಶ್ (22) ಹಾಗೂ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಎಂಜಿ ಬೇಕರಿ ಮಾಲೀಕ ಪುನೀತ್ (23)ಎಂದು ಮೃತ ಪಟ್ಟವರನ್ನು ಗುರುತಿಸಲಾಗಿದೆ.
ಗಾಯಗೊಂಡಿರುವ ಎಸ್ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಯಶ್ವಂತ್ ಹಾಗೂ ನಂದೀಶ್ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ನಂದೀಶ್ ಹುಟ್ಟುಹಬ್ಬದ ಪ್ರಯುಕ್ತ ನಂದಿ ಕ್ರಾಸ್ಗೆ ನಾಲ್ವರು ಮೋಜು ಮಾಡಲು ಮೃತ ಪುನೀತ್ ಸ್ವಿಫ್ಟ್ ಕಾರಿನಲ್ಲಿ ಹೋಗಿದ್ದರು.
ನಂತರ ಪಾರ್ಟಿ ಮುಗಿಸಿ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸುತ್ತಿದ್ದಾಗ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ 7ರ ಬಿಬಿ ಕ್ರಾಸ್ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿದ್ದು ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್ಐ ಚೇತನ್ ಹಾಗೂ ಸಂಚಾರಿ ಠಾಣಾ ಪಿಎಸ್ಐ ಬಂದು ಮೃತದೇಹಗಳನ್ನ ಶವಾಗಾರಕ್ಕೆ ರವಾನಿಸಿದ್ದಾರೆ. ಜೊತೆಗೆ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








