ವೈದ್ಯರ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ: ಪ್ರತಿಭಟನೆ

ದಾವಣಗೆರೆ:

     ಕಾಲಿಗೆ ಆಗಿದ್ದ ಸಣ್ಣ ಗಾಯಕ್ಕೆ ಚಿಕಿತ್ಸೆ ಪಡೆಯಲು ಹೋಗಿದ್ದ ವೃದ್ಧರೊಬ್ಬರು, ವೈದ್ಯರು ನೀಡಿದ ಚುಚ್ಚುಮದ್ದುವಿನಿಂದಾಗಿ ಮೃತಪಟ್ಟಿದ್ದಾರೆಂದು ಆರೋಪಿಸಿ, ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಶವಗಾರದ ಎದುರು ಮೃತನ ಸಂಬಂಧಿಕರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

       ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಗರಿ ಗಜಾಪುರ ಗ್ರಾಮದ ರೈತ ರುದ್ರಪ್ಪ (63) ಎಂಬುವರೇ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಂಡಿರುವ ದುರ್ದೈವಿಯಾಗಿದ್ದಾರೆ. ರುದ್ರಪ್ಪ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ತರಚಿದ ಗಾಯವಾಗಿತ್ತು. ರುದ್ರಪ್ಪ ತಮ್ಮ ಪತ್ನಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದ್ದರಿಂದ ನೋಡಲು ಹಾಗೂ ತಮ್ಮ ಕಾಲಿನ ಗಾಯಕ್ಕೂ ಚಿಕಿತ್ಸೆ ಪಡೆಯಲು ದಾವಣಗೆರೆಯಲ್ಲಿನ ತಮ್ಮ ಮಗಳು ಸರಳಾ ಅವರ ಮನೆಗೆ ಬಂದಿದ್ದರು.

      ಹೀಗಾಗಿ ಸರಳಾ ತಂದೆಯ ಕಾಲಿನ ಗಾಯವನ್ನು ತೋರಿಸಲು, ದಾವಣಗೆರೆಯ ಕೆಟಿಜೆ ನಗರದಲ್ಲಿರುವ ರಶ್ಮಿ ಕ್ಲಿನಿಕ್‍ಗೆ ಕರೆದೊಯ್ದಿದ್ದರು. ಗಾಯಾಳು ರುದ್ರಪ್ಪನಿಗೆ ಕ್ಲಿನಿಕ್‍ನ ವೈದ್ಯ ಡಾ.ವಿಶ್ವನಾಥ್ ಅವರು ಚುಚ್ಚುಮದ್ದು ನೀಡಿದ ತಕ್ಷಣವೇ ರುದ್ರಪ್ಪನ ಬಾಯಿಯಿಂದ ನೊರೆ ಬಂದು, ತೀವ್ರ ಅಸ್ವಸ್ಥರಾಗಿದ್ದಾರೆ. ಇದರಿಂದ ಆತಂಕಗೊಂಡ ಸರಳಾ ತಕ್ಷಣವೇ ತನ್ನ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ರುದ್ರಪ್ಪನವರ ಪ್ರಾಣಪಕ್ಷಿ ಮಗಳ ಕಣ್ಣೆದುರೇ ಹಾರಿಹೋಗಿದೆ.

       ಮಾರ್ಗ ಮಧ್ಯೆಯೇ ಇಹಲೋಕ ತ್ಯಜಿಸಿದ ರುದ್ರಪ್ಪನವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿರುವ ಶವಾಗಾರಕ್ಕೆ ಸಾಗಿಸಲಾಯಿತು. ಶವಾಗಾರದ ಎದುರು ರುದ್ರಪ್ಪನ ಪುತ್ರಿ ಸರಳಾ ಹಾಗೂ ಕುಟುಂಬ ವರ್ಗದ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.

     ತಕ್ಷಣವೇ ಸುದ್ದಿ ತಿಳಿದ ಮೃತ ರುದ್ರಪ್ಪನ ಸಂಬಂಧಿಕರು, ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಶವಗಾರದ ಎದುರು ಜಮಾಯಿಸಿ, ರುದ್ರಪ್ಪನ ಸಾವಿಗೆ ರಶ್ಮಿ ಕ್ಲಿನಿಕ್‍ನ ವೈದ್ಯ ಡಾ.ವಿಶ್ವನಾಥ್ ಅವರೇ ಕಾರಣವಾಗಿದ್ದಾರೆಂದು ಆರೋಪಿಸಿ, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

     ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು, ರೋಗಿಯ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ಡಾ.ವಿಶ್ವನಾಥ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ರಶ್ಮಿ ಕ್ಲಿನಿಕ್‍ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

     ಘಟನೆ ಹಿನ್ನೆಲೆಯಲ್ಲಿ ಮೃತನ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಡಾ.ವಿಶ್ವನಾಥ ಕ್ಲಿನಿಕ್‍ನಿಂದ ಕಾಲು ನಾಪತ್ತೆಯಾಗಿದ್ದು, ಕ್ಲಿನಿಕ್‍ಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರತಿಭಟನಾಕಾರರಿಗೆ ಸಮಾಧಾನಪಡಿಸಲು ಯತ್ನಿಸಿದರು ಯಾವುದೇ ಪ್ರಯೋಜನವಾಗಲಿಲ್ಲ.ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link