ಹುಳಿಯಾರು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ತೆಗೆಯಲಾಗಿದ್ದ ರಾಗಿ ಖರೀದಿ ಕೇಂದ್ರದಲ್ಲಿ ಮಾರ್ಚ್ ತಿಂಗಳಿನಲ್ಲಿ ರಾಗಿ ಮಾರಾಟ ಮಾಡಿದ್ದ ರೈತರಿಗೆ 2 ತಿಂಗಳಾದರೂ ಲಕ್ಷಾಂತರ ರೂಪಾಯಿ ಬಾಕಿ ಹಣ ಪಾವತಿ ಮಾಡಿಲ್ಲ. ಕೂಡಲೇ ಪಾವತಿಸುವಂತೆ ರೈತರು ಆಗ್ರಹಿಸಿದ್ದಾರೆ.
ಬಾಕಿ ಹಣದ ಬಗ್ಗೆ ರಾಗಿ ಖರೀದಿ ಕೇಂದ್ರದಲ್ಲಿ ವಿಚಾರಿಸಲು ಹೋದರೆ ಖರೀದಿ ಕೇಂದ್ರಕ್ಕೆ ಬೀಗ ಹಾಕಿದೆ. ಎಪಿಎಂಸಿಯವರು ನಮಗೂ ಇದಕ್ಕೂ ಸಂಬಂಧವಿಲ್ಲ, ನಾವು ಖರೀದಿ ಕೇಂದ್ರಕ್ಕೆ ಕೇವಲ ಜಾಗ ಕೊಟ್ಟಿದ್ದೇವೆ ಹೊರತು ನೀವು ಬಾಕಿ ಹಣವನ್ನು ಆಹಾರ ನಿಗಮದ ಅಧಿಕಾರಿಗಳನ್ನು ವಿಚಾರಿಸಬೇಕು ಎನ್ನುತ್ತಾರೆ.
ಅಧಿಕಾರಿಗಳಿಗೆ ಕರೆ ಮಾಡಿದರೆ ಹಣ ಈಗ ಬರುತ್ತದೆ. ಆಗ ಬರುತ್ತದೆ ಈಗ ಬರುತ್ತದೆ ಎಂದು ಸಬೂಬು ಹೇಳುತ್ತಲೇ ಮುಂದೆ ಹಾಕುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ರಾಗಿ ಖರೀದಿ ಕೇಂದ್ರಗಳ ಮೇಲೆ ರೈತರಿಗೆ ನಂಬಿಕೆ ಹೊರಟು ಹೋಗುತ್ತದೆ ಎಂದು ರೈತ ಎಚ್.ವಿ.ಧನಂಜಯ ದೂರಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟವರು ತುರ್ತಾಗಿ ಗಮನ ಹರಿಸಬೇಕು, ಇಲ್ಲದಿದ್ದಲ್ಲಿ ಎಪಿಎಂಸಿ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








