ದಾವಣಗೆರೆ:
ಶುಶ್ರೂಷಕರ ಸೇವೆಯು ನೊಂದ ಜೀವಗಳ ಪಾಲಿಗೆ ಸಂಜೀವಿನಿಯಾಗಿದೆ ಎಂದು ಜಿಲ್ಲಾ ಶುಶ್ರೂಷಕರ ಸಂಘದ ಅಧ್ಯಕ್ಷ ಗೋವಿಂದರಾಜ್ ಪ್ರತಿಪಾದಿಸಿದರು.ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಫ್ಲಾರೆನ್ಸ್ನೈಟಿಂಗೆಲ್ ಅವರ ಜನ್ಮ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಮತ್ತು ಸಂಬಂಧಗಳು ಕುಸಿಯುತ್ತಿದ್ದು, ಶುಶ್ರೂಷ ಸೇವೆಯ ಮಹತ್ವವನ್ನು ಪಠ್ಯಗಳಲ್ಲಿ ಅಳವಡಿಸುವ ಮೂಲಕ ಮಕ್ಕಳಿಗೆ ತಿಳಿಹೇಳಬೇಕಾದ ಅವಶ್ಯಕತೆ ಇದೆ ಎಂದರು.
ಮನುಷ್ಯ-ಮನುಷ್ಯರ ಮಧ್ಯೆ ಸಂಬಂಧಗಳು ಹದಗೆಡುತ್ತಿರುವ ಇಂದಿನ ವಿಷಮ ಸ್ಥಿತಿಯಲ್ಲಿ ಶುಶ್ರೂಷ ಸೇವೆಯ ಅತ್ಯಂತ ಮಹತ್ವ ಪಡೆದುಕೊಂಡಿದೆ ಹಾಗೂ ಅನಿವಾರ್ಯ ಸಹ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರೌಢ ಅಥವಾ ಪದವಿ ಪಠ್ಯಕ್ರಮದಲ್ಲಿ ಶುಶ್ರೂಷ ಸೇವೆಯ ಮಹತ್ವದ ಬಗ್ಗೆ ತಿಳುವಳಿಕೆ ನೀಡಿದರೆ ವೃದ್ಧಾಶ್ರಮ, ಅನಾಥಾಶ್ರಮಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಎಂದರಲ್ಲದೇ, ಬಾಲ್ಯದಲ್ಲಿಯೇ ಮಕ್ಕಳಿಗೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ತಿಳುವಳಿಕೆ ನೀಡುವ ನೈತಿಕ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.
ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ.ಎಚ್.ವಿಶ್ವನಾಥ್ ಮಾತನಾಡಿ, ಫ್ಲಾರೆನ್ಸ್ ನೈಟಿಂಗೆಲ್ ಅವರ ತ್ಯಾಗಮಯ ಜೀವನ ಜಗತ್ತಿಗೆ ಮಾದರಿಯಾಗುವಂತದ್ದಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಮೂಲಕ ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಶುಶ್ರೂಷಕರ ಸೇವೆ ನೀಡಿ, ನಂತರ ಶಾಲೆಯೊಂದನ್ನು ತೆರೆದು ಶುಶ್ರೂಷೆ ಮಾಡಲು ಇಚ್ಛಿಸುವ ಜನರಿಗೆ ತರಬೇತಿ ನೀಡಿದ್ದರು ಎಂದು ಸ್ಮರಿಸಿದರು.
ಪ್ರತಿಯೊಬ್ಬ ಶುಶ್ರೂಷಕರು ತಮ್ಮ ವೃತ್ತಿಯನ್ನು ಸೇವೆ ಎಂಬುದಾಗಿ ಭಾವಿಸಿ, ಜನರ ನೋವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆಗ ನೈಟಿಂಗೇಲ್ ಅವರ ಹುಟ್ಟುಹಬ್ಬ ಮಾಡಿದಕ್ಕೂ ಸಾರ್ಥಕತೆ ಸಿಗಲಿದೆ ಎಂದರು.ಈ ಸಂದರ್ಭದಲ್ಲಿ ಹಲವಾರು ಶುಶ್ರೂಕರಿಗೆ ಫ್ಲಾರೆನ್ಸ್ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶುಶ್ರೂಕರ ಮಕ್ಕಳಾದ ತನುಶ್ರೀ, ಭಾರ್ಗವಿ,ರುಚಿತಾ,ತೇಜಸ್, ಅಕ್ಷಯ್,ಪೂಜಿತ, ಕಿರಣ್ ಅವರುಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಹಿರಿಯ ಶುಶ್ರೂಷಕಿ ಶ್ರೀದೇವಿ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಪ್ರಾರ್ಥಿಸಿದರು. ಶಿವಲೀಲಾ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶಾಂತ ನಿರೂಪಿಸಿದರು. ಎಚ್.ಗೀತಾ ವಂದಿಸಿದರು.