ತುಮಕೂರು : ಮಿನಿ ವಿಧಾನಸೌಧದ ಬಳಿಯೇ ಕಸದ ರಾಶಿ!!!

ತುಮಕೂರು: 

      ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳು ಬಂದರೂ ಜಿಲ್ಲಾಡಳಿತಕ್ಕೆ ಮನವಿ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಆದರೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಅನೇಕ ಸಮಸ್ಯೆಗಳು ಕಂಡು ಬರುತ್ತಿದ್ದು ಜನರಿಂದ ಬೇಸರ ವ್ಯಕ್ತವಾಗುತ್ತಿದೆ.

      ತುಮಕೂರು ಜಿಲ್ಲಾಧಿಕಾರಿ ಕಚೇರಿಯು ಮುಂಭಾಗದಲ್ಲಿ ನೋಡಲು ಅಂದ ಚೆಂದವಾಗಿ ಕಂಡು ಬರುತ್ತದೆ. ಇಲ್ಲಿ ದಿನನಿತ್ಯ ಸ್ವಚ್ಛತಾ ಕಾರ್ಯ ಮಾಡುತ್ತಿರಬಹುದು. ಹಾಗಾಗಿ ನೋಡಲು ಚೆಂದವಾಗಿ ಕಂಡು ಬರುತ್ತದೆ. ಆದರೆ ಕಚೇರಿಯ ಹಿಂಭಾಗದ ಕಡೆ ಕಣ್ಣಾಯಿಸಿದರೆ ಅಲ್ಲಿ ಕಂಡು ಬರುವುದು ಬರೀ ಕಸದ ರಾಶಿಗಳು, ಕೆಟ್ಟು ನಿಂತ ಸರ್ಕಾರಿ ವಾಹನಗಳು, ಮದ್ಯದ ಬಾಟಲಿಗಳು, ಗುಟ್ಕಾ ತಂಬಾಕು ಪ್ಯಾಕೆಟ್‍ಗಳು ಹಾಗೂ ಪೇಪರ್ ಗ್ಲಾಸ್‍ಗಳ ರಾಶಿಗಳು. ಇವುಗಳನ್ನು ಸ್ವಚ್ಛ ಮಾಡುವ ಗೋಜಿಗೆ ಹೋಗುತ್ತಿಲ್ಲ ಎಂಬಂತೆ ಗೋಚರವಾಗುತ್ತಿದೆ.

      ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ದಿನನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಹಿಂಭಾಗದಲ್ಲಿಯೇ ಸಾರ್ವಜನಿಕ ಶೌಚಾಲಯವಿದೆ. ಕಾಂಪೌಂಡ್ ಪಕ್ಕದಲ್ಲಿಯೇ ಕಬ್ಬಿನಹಾಲು ಮಾರುವವರು ಇದ್ದಾರೆ. ಬೇಸಿಗೆಯ ಕಾಲದಲ್ಲಿ ಹೊಟ್ಟೆ ತಂಪಾಗಿಸಿಕೊಳ್ಳಲು ಕಬ್ಬಿನಹಾಲು ಕುಡಿಯುತ್ತಾರೆ. ಆದರೆ ಕುಡಿದ ಪೇಪರ್ ಗ್ಲಾಸ್‍ಗಳನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಸೆಯುತ್ತಿರುವುದು ಕಸದ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ರಾರಾಜಿಸುತ್ತಿರುವ ಕಸದ ರಾಶಿಗಳು :

      ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಬಲಭಾಗದಲ್ಲಿ ಇರುವ ವಿವಿಧ ಇಲಾಖೆಗಳ ಕಚೇರಿಗಳು ಮುಂಭಾಗದಲ್ಲಿ ಕಸದ ರಾಶಿಗಳು ರಾರಾಜಿಸುತ್ತಿವೆ. ಪ್ರಿಂಟರ್ ಸಂಬಂಧಿತ ವಸ್ತುಗಳು, ಪ್ರಿಂಟಿಂಗ್ ಪೇಪರ್‍ಗಳು ಸೇರಿದಂತೆ ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್‍ಗಳು ತುಂಬಿಕೊಂಡು ರಾಶಿಗಳಾಗಿ ಮಾರ್ಪಾಟಾಗಿವೆ. ಅಲ್ಲಿಂದ ಕಚೇರಿಯ ಹಿಂಭಾಗದಲ್ಲಿ ದೊಡ್ಡದಾದ ಕಸದ ರಾಶಿ ಕಣ್ಣಿಗೆ ದರ್ಶನ ನೀಡುತ್ತದೆ. ಅಲ್ಲಿ ಪೇಪರ್ ಗ್ಲಾಸ್‍ಗಳು, ಪುಡಿಪುಡಿಯಾದ ಗಾಜಿನ ಗ್ಲಾಸ್‍ಗಳು, ಪ್ಲಾಸ್ಟಿಕ್ ಕವರ್‍ಗಳು ಸೇರಿಕೊಂಡ ಕಸದ ರಾಶಿ ತುಂಬಿಕೊಂಡಿದೆ. ಜೋರಾದ ಗಾಳಿ ಬೀಸಿದಲ್ಲಿ ಅಲ್ಲಿನ ಕಸ ಇಡೀ ಜಿಲ್ಲಾಧಿಕಾರಿ ಆವರಣವನ್ನೇ ಆವರಿಸಿಕೊಳ್ಳುತ್ತದೆ.

ಬಳಕೆಯಾಗದ ಜನರೇಟರ್:

      ಅಪರ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಿಂದ ಕೆಳಭಾಗಕ್ಕೆ ಇಳಿದರೆ ಮೆಟ್ಟಿಲುಗಳ ಪಕ್ಕದಲ್ಲೇ ಒಂದು ಸಣ್ಣ ರೂಂನಲ್ಲಿ ಜನರೇಟರ್ ಅನ್ನು ಅಳವಡಿಸಲಾಗಿದೆ. ಇದು ಆರಂಭದಲ್ಲಿ ಉತ್ತಮವಾಗಿ ಕೆಲಸ ಮಾಡಿತಾದರೂ ಬರುಬರುತ್ತಾ ಅದರ ಅವಶ್ಯಕತೆ ಇಲ್ಲದಂತಾಯಿತೇನೋ ಅದನ್ನು ಬಳಕೆ ಮಾಡದೆ ಮೂಲೆಗುಂಪಾಗಿಸಿದ್ದಾರೆ. ಈ ಜನರೇಟರ್ ಇರುವ ಜಾಗದಲ್ಲಿ ಇಲಿ ಹೆಗ್ಗಣಗಳು ಓಡಾಡುತ್ತಾ ಇರುವ ವೈರುಗಳು ತುಂಡಾಗಿವೆ. ಜನರೇಟರ್ ಪೂರ್ತಿ ಧೂಳಿನಿಂದ ಆವೃತವಾಗಿದ್ದು, ಬಳಕೆ ಮಾಡಲು ಕೂಡ ಆಗದ ಸ್ಥಿತಿಯಲ್ಲಿ ನಿಂತಿದೆ. ಅದರ ಮುಂಭಾಗದಲ್ಲಿಯೇ ರಾತ್ರಿ ವೇಳೆ ಮೂತ್ರವಿಸರ್ಜನೆ ಮಾಡುತ್ತಿದ್ದು, ಅತ್ತ ಸುಳಿದವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಟ್ಟು ನಿಂತ ಸರ್ಕಾರಿ ವಾಹನಗಳು:

     ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸುಮಾರು ನಾಲ್ಕೈದು ಸರ್ಕಾರಿ ವಾಹನಗಳು ನಿಂತಲ್ಲೇ ನಿಂತಿವೆ. ಈ ವಾಹನಗಳನ್ನು ಬಳಕೆ ಮಾಡಲಾಗುತ್ತಿಲ್ಲ. ಅದಕ್ಕೆ ಕಾರಣ ಏನು ಎಂಬುದು ಕೂಡ ತಿಳಿಯುತ್ತಿಲ್ಲ. ಈ ವಾಹನಗಳು ಹಳೆ ಮಾದರಿಯ ವಾಹನಗಳಾಗಿದ್ದು, ಈಗಿನ ಅಧಿಕಾರಿಗಳು ನವೀನ ಮಾದರಿಯ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಳೆಯ ವಾಹನಗಳನ್ನು ಬಳಸದೆ ಒಂದೇ ಕಡೆ ನಿಲ್ಲಿಸಿದ್ದು. ಅದರಲ್ಲಿ ಧೂಳು ತುಂಬಿಕೊಂಡು ರಿಪೇರಿ ಕೂಡ ಮಾಡಿಸಲು ಆಗದ ಸ್ಥಿತಿಗೆ ತಲುಪಿವೆ. ಕೆಲ ವಾಹನಗಳ ಟೈರ್ ತುಂಡಾಗಿದ್ದರೆ, ಇನ್ನು ಕೆಲವು ವಾಹನಗಳ ಟೈರ್‍ಗಳು ಭೂಮಿಯೊಳಗೆ ಇಳಿದಿವೆ.

ಕುಡುಕರ ತಾಣವಾದ ಕಚೇರಿ ಆವರಣ :

      ಮದ್ಯಪಾನಾಸಕ್ತರಿಗೆ ಮದ್ಯ ಸೇವನೆ ಮಾಡಲು ಇಂತಹದ್ದೇ ಸ್ಥಳ ಬೇಕು ಎಂದೇನಿಲ್ಲ. ಅವರು ಓಡಾಡಿದ್ದೇ ರಾಜ್ಯ ಎಂಬಂತೆ ಎಲ್ಲ್ಲೆಂದರಲ್ಲಿ ಮದ್ಯ ಸೇವನೆ ಮಾಡಿ ಅಲ್ಲಿಯೇ ಬಾಟಲಿಗಳನ್ನು ಬಿಸಾಡಿ ಹೋಗುತ್ತಾರೆ. ಇದಕ್ಕೆ ಉದಾಹರಣೆಯಾಗಿ ಇದೀಗ ಜಿಲ್ಲಾಧಿಕಾರಿ ಕಚೇರಿ ಆವರಣ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಜಿಲ್ಲಾಧಿಕಾರಿ ಕಚೇರಿಯ ಸುತ್ತಲೂ ಒಂದಲ್ಲಾ ಒಂದು ಕಡೆ ಮದ್ಯದ ಖಾಲಿ ಬಾಟಲಿಗಳು ಕಂಡುಬರುವುದು ಸರ್ವೇ ಸಾಮಾನ್ಯವಾಗಿದೆ. ಹಲವು ಕಡೆ, ಹಲವಾರು ಮಂದಿ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು. ಮದ್ಯ ನಿಷೇಧ ಮಾಡಬೇಕು ಎಂದೆಲ್ಲಾ ಒತ್ತಾಯ ಮಾಡುವ ವೇಳೆಯಲ್ಲಿ ಅಧಿಕಾರಿಗಳಿಗೆ ಸವಾಲೆಸೆದಂತೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮದ್ಯ ಸೇವನೆ ಮಾಡುತ್ತಿರುವುದಕ್ಕೆ ಹಲವು ಉದಾಹರಣೆಗಳು ಇವೆ.

ನೈಟ್ ಬೀಟ್ ಪೊಲೀಸರಿದ್ದರೂ ಪ್ರಯೋಜನವಾಗುತ್ತಿಲ್ಲ:

      ಜಿಲ್ಲಾ ಪೊಲೀಸ್ ಇಲಾಖೆಯಿಂದ್ ನೈಟ್ ಬೀಟ್ ಪೊಲೀಸ್ ವ್ಯವಸ್ಥೆ ಮಾಡಲಾಗಿದ್ದರೂ ದಿನನಿತ್ಯ ರಾತ್ರಿ ಕುಡುಕರ ಹಾವಳಿ ಹೆಚ್ಚಾಗುತ್ತಿದ್ದು, ಕಚೇರಿಯ ಆವರಣದಲ್ಲಿಯೇ ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದ ಗಸ್ತು ಪೊಲೀಸರು ರಾತ್ರಿ ವೇಳೆ ಕೆಲಸ ಮಾಡುತ್ತಾರೆಯೋ ಇಲ್ಲವೋ ಎಂಬ ಅನುಮಾನ ಮೂಡುವುದು ಸಹಜವಾಗಿದೆ. ಇತ್ತೀಚೆಗೆ ಕಳ್ಳಕಾಕರ ಕಾಟ ಹೆಚ್ಚಾಗುತ್ತಿದೆ. ಕೇವಲ ಪ್ರಮುಖ ರಸ್ತೆಗಳಲ್ಲಿ ಕಂಡು ಬರುವ ಗಸ್ತು ಪೊಲೀಸರು ಜಿಲ್ಲಾ ಆಡಳಿತ ಕಚೇರಿಯ ಬಳಿ ಕಾಣುತ್ತಿಲ್ಲ ಎಂಬುದಾಗಿ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ನೀತಿ ಸಂಹಿತೆ ಹಿನ್ನೆಲೆ ಹೆಚ್ಚಿರುವ ಬಂದೋಬಸ್ತ್:

      ಮೇ.23ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದುರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಮಾನ್ಯವಾಗಿ ಬಂದೋಬಸ್ತ್ ಹೆಚ್ಚಾಗಿಯೇ ಇರುತ್ತದೆ. ಆದರೂ ಯಾರೊಬ್ಬರ ಗಮನಕ್ಕೇ ಬಾರದಂತೆ ಕಚೇರಿ ಆವರಣದೊಳಗೆ ರಾತ್ರಿವೇಳೆಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಅಲ್ಲದೆ ಅನೈತಿಕ ಚಟುವಟಿಕೆಗಳಿಗೆ ಜಿಲ್ಲಾಧಿಕಾರಿ ಕಚೇರಿಯ ಆವರಣವನ್ನೇ ಉಚಿತವಾಗಿ ಬಳಸಿಕೊಳ್ಳಬಹುದು ಎಂಬಂತೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

 ದುರ್ವಾಸನೆ ಬೀರುವ ಶೌಚದ ಚೇಂಬರ್‍ಗಳು:

      ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಕಟ್ಟದ ಹಿಂಬದಿಯಲ್ಲಿ ನಿರ್ಮಿಸಲಾದ ಚೇಂಬರ್‍ಗಳು ಒಡೆದುಹೋಗಿದ್ದು, ಶೌಚಾಲಯದಿಂದ ಹರಿಯುವ ಮಲಮೂತ್ರಗಳು ಚೇಂಬರ್‍ಗಳಿಂದ ಉಕ್ಕಿ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಶಾಚಾಲಯದ ನಿರ್ವಹಣೆ ಮಾಡುವವರು ಅದರ ಬಗ್ಗೆ ಗಮನವೇ ಹರಿಸುತ್ತಿಲ್ಲ. ಶೌಚಕ್ಕೆಂದು ಅಲ್ಲಿಗೆ ತೆರಳುವ ಸಾರ್ವಜನಿಕರಿಗೆ ರೋಗಗಳು ಉಚಿತವಾಗಿ ಲಭ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Image result for tumkur dc rakesh kumar
      ಚುನಾವಣಾ ನೀತಿ ಸಂಹಿತೆ ಇರುವುದರಿಂದ ಕಚೇರಿಯ ಬಳೆ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿದೆ. ದಿನದ 24 ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ಅಲ್ಲಿ ಇರುತ್ತಾರೆ. ಆದರೂ ಮದ್ಯಪಾನಾಸಕ್ತರು ಮದ್ಯ ಸೇವೆನೆಗೆ ಜಿಲ್ಲಾಡಳಿತ ಕಚೇರಿ ಆವರಣವನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ. ಕಸದ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡುತ್ತೇವೆ.

–  ಡಾ.ಕೆ.ರಾಕೇಶ್‍ಕುಮಾರ್, ಜಿಲ್ಲಾಧಿಕಾರಿ

      ಸಮಸ್ಯೆಗಳನ್ನು ಹೊತ್ತುಕೊಂಡು ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತೇವೆ. ಅಧಿಕಾರಿಗಳನ್ನು ಭೇಟಿ ಮಾಡಲು ಆಗದೇ ಇದ್ದಾಗ ವಿಶ್ರಾಂತಿ ಪಡೆಯಲೆಂದು ಮರದ ಕೆಳಗಡೆ ಕೂರಲು ಬಂದರೆ ಇಲ್ಲಿ ಬರೀ ಮದ್ಯದ ಬಾಟಲಿಗಳು, ಪಾನ್, ಗುಟ್ಕಾ ಮಸಾಲ ಪಾಕೆಟ್‍ಗಳು, ಸಿಗರೇಟ್ ತುಂಡುಗಳು ಕಂಡು ಬರುತ್ತಿವೆ. ನೆಮ್ಮದಿಯಿಂದ ಹತ್ತು ನಿಮಿಷ ಕುಳಿತುಕೊಳ್ಳಲು ಕೂಡ ಆಗದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

– ಪಾಂಡುರಂಗಯ್ಯ, ಕಚೇರಿಗೆ ಭೇಟಿ ನೀಡಿದ ವ್ಯಕ್ತಿ

(ವರದಿ : ರಾಕೇಶ್.ವಿ.)

 

Recent Articles

spot_img

Related Stories

Share via
Copy link