ತುಮಕೂರು:
ಜಿಲ್ಲೆಯ ಮಿನಿ ವಿಧಾನಸೌಧದ ಆವರಣದಲ್ಲಿಯೇ ಕಸದ ರಾಶಿಗಳು ರಾರಾಜಿಸುತ್ತಿತ್ತು. ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರು ಕಸ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬೇಸರ ವ್ಯಕ್ತ ಪಡಿಸಿದ್ದರು. ಈ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯು ಬೆಳಕು ಚೆಲ್ಲಿದ್ದು, ಇದೀಗ ಕಸದ ರಾಶಿಗಳು ಸ್ವಚ್ಛಗೊಂಡಿವೆ.
ಮೇ.13ರಂದು ಮಿನಿವಿಧಾನಸೌಧ ಕಚೇರಿ ಬಳಿ ಕಸದ ರಾಶಿ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿ ನೋಡುತ್ತಿದ್ದಂತೆಯೇ ಸಮಸ್ಯೆ ಬಗ್ಗೆ ಗಮನ ಹರಿಸಿದ ಜಿಲ್ಲಾಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಆರೋಗ್ಯ ನಿರೀಕ್ಷಕರೊಂದಿಗೆ ಮಾತುಕತೆ ನಡೆಸಿ ಕಸದ ಸಮಸ್ಯೆ ಪರಿಹರಿಸುವಂತೆ ಆದೇಶ ನೀಡಿದ್ದರು. ಜಿಲ್ಲಾಧಿಕಾರಿಗಳ ಆದೇಶ ಬರುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಪಾಲಿಕೆ ಸಿಬ್ಬಂದಿ ಕಸದ ರಾಶಿಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿಗಳ ಆವರಣದ ಹಿಂಭಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲೆಂದು ಹಾಕಿಸಲಾಗಿದ್ದ ಆಸನ ವ್ಯವಸ್ಥೆಗಳ ಪಕ್ಕದಲ್ಲಿಯೇ ಕಸದ ರಾಶಿಗಳು ತುಂಬಿಕೊಂಡಿದ್ದವು. ಪೇಪರ್, ಥರ್ಮಕೋಲದ ತುಂಡುಗಳು, ಮಧ್ಯದ ಬಾಟಲಿಗಳು ಸೇರಿದಂತೆ ಪಾನ್ ಗುಟ್ಕಾ ಪ್ಯಾಕೆಟ್ಗಳು ಬಿಸಾಡಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಇದರಿಂದ ಕೆಲಸದ ನಿಮಿತ್ತ ಕಚೇರಿಗೆ ಬರುವ ಸಾರ್ವಜನಿಕರು ಆಸನದ ವ್ಯವಸ್ಥೆಯಲ್ಲಿ ಕುಳಿತುಕೊಳ್ಳಲು ಬೇಸರಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟ ಮಾಡಿದ್ದರಿಂದ ಸಮಸ್ಯೆ ಪರಿಹಾರವಾಗಿದೆ. ಇದು ಪ್ರಜಾಪ್ರಗತಿ ಪತ್ರಿಕೆಯ ವರದಿ ಫಲಶೃತಿಯಾಗಿದೆ.
ನಮ್ಮ ಕೆಲಸಗಳ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತೇವೆ. ಅಧಿಕಾರಿಗಳು ಸಭೆಗಳಲ್ಲಿ ಇರುವಾಗ ಅವರಿಗಾಗಿ ಕಾಯಲೇಬೇಕು. ಆಗ ಕುಳಿತುಕೊಳ್ಳಲು ಎಂದು ಬೆಂಚ್ಗಳ ಬಳಿ ಬಂದರೆ ಪಕ್ಕದಲ್ಲಿಯೇ ಇದ್ದ ಕಸದ ರಾಶಿಗಳಿಂದ ಸೊಳ್ಳೆಗಳ ಕಾಟ, ದುರ್ವಾಸನೆ ಬೀರುತ್ತಿತ್ತು. ಇದರಿಂದ ಕಚೇರಿ ಹೊರಾಂಗಣದಲ್ಲಿ ನಿಂತುಕೊಳ್ಳುತ್ತಿದ್ದೆವು. ಸೋಮವಾರದಂದು ಪ್ರತ್ರಿಕೆಯಲ್ಲಿ ಈ ಬಗ್ಗೆ ವರದಿ ಬಂದ ಮೇಲೆ ಪಾಲಿಕೆ ಸಿಬ್ಬಂದಿ ಬಂದು ಸ್ವಚ್ಛ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ. ವರದಿ ಮೂಲಕ ಅಧಿಕಾರಿಗಳಿಗೆ ಸಮಸ್ಯೆಗಳನ್ನು ತಿಳಿಸಿ ಸಮಸ್ಯೆ ಪರಿಹಾರವಾಗುವಂತೆ ಮಾಡಿದ ಪ್ರಜಾಪ್ರಗತಿ ಪತ್ರಿಕೆಗೆ ಧನ್ಯವಾದಗಳು.
– ಪೂರ್ಣಿಮಾ, ಕಚೇರಿಗೆ ಭೇಟಿ ನೀಡಿದ ಮಹಿಳೆ
ಕಸದ ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ನೋಡಿದ ತಕ್ಷಣ ಆರೋಗ್ಯ ನೀರಿಕ್ಷಕರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿದ್ದೇವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಪೊಲೀಸರ ಗಸ್ತು ಬಗ್ಗೆ ಕೆಲ ದೂರುಗಳ ಬಂದಿದ್ದರಿಂದ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ. ಆವರಣದಲ್ಲಿ ನಿಲ್ಲಿಸಲಾದ ವಾಹನಗಳನ್ನು ವರ್ಷಕ್ಕೊಮ್ಮೆ ಸ್ಕ್ರ್ಯಾಪ್ ಮಾಡಲಾಗುತ್ತದೆ. ಈ ವರ್ಷವೂ ಮಾಡಬೇಕಿದೆ. ಆದಷ್ಟು ಬೇಗನೇ ಆ ಕೆಲಸ ಮಾಡುತ್ತೇವೆ.
– ಡಾ.ಕೆ.ರಾಕೇಶ್ಕುಮಾರ್, ಜಿಲ್ಲಾಧಿಕಾರಿಗಳು
ಕಳೆದ ಒಂದು ವಾರದ ಮುಂಚೆವರೆಗೂ ಜಿಲ್ಲಾಧಿಕಾರಿ ಆವರಣದಲ್ಲಿನ ಕಸ ಸ್ವಚ್ಛತೆಯ ಕಾರ್ಯ ಜಯಣ್ಣ ಎಂಬ ಆರೋಗ್ಯ ನಿರೀಕ್ಷಕರು ನೋಡಿಕೊಳ್ಳುತ್ತಿದ್ದರು. ಒಂದು ವಾರದ ಹಿಂದೆಯಷ್ಟೇ ಅದು ಬದಲಾವಣೆಯಾಗಿದ್ದು, ಸಮಸ್ಯೆಗೆ ಎಡೆಮಾಡಿಕೊಟ್ಟಂತಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಇನ್ನು ಮುಂದೆ ದಿನಂಪ್ರತಿ ಕಸವನ್ನು ತೆಗೆಸುವ ಕಾರ್ಯ ಮಾಡುತ್ತೇವೆ. ಈಗಾಗಲೇ ಕಸದ ವಾಹನಗಳಲ್ಲಿರುವವರಿಗೆ ಆದೇಶ ನೀಡಲಾಗಿದೆ.