ನೀರಿನ ಬವಣೆ ಎದುರಾಗದಂತೆ ಕ್ರಮ ವಹಿಸಿ

ದಾವಣಗೆರೆ

      ಜಿಲ್ಲೆಯ ಯಾವುದೇ ಗ್ರಾಮ, ನಗರ, ಪಟ್ಟಣ ಸೇರಿದಂತೆ ಎಲ್ಲೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ಎದುರಾಗದಂತೆ, ಬರ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ (ವಾಸು) ಸೂಚನೆ ನೀಡಿದರು.

      ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಅದರ ನಿರ್ವಹಣೆ ಹಾಗೂ ಪರಿಹಾರೋಪಾಯ ಮಾರ್ಗಗಳ ಬಗ್ಗೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನ ಜಾನುವಾರುಗಳಿಗೆ ನೀರಿನ ಬವಣೆ ಎದುರಾಗದಂತೆ ಬರ ನಿರ್ವಹಣೆಗೆ ಬೇಕಾದ ಪರಿಹಾರೋಪಾಯ ಮಾರ್ಗಗಳನ್ನು ಸಿದ್ದಪಡಿಸಿಕೊಂಡು ಅಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರುಗಳ ಗಮನಕ್ಕೆ ತರಬೇಕೆಂದು ಸೂಚಿಸಿದರು.

      ಎಲ್ಲಿ ನೀರಿಗೆ ತತ್ವಾರ ಎದುರಾಗಿದೆಯೋ ಹಾಗೂ ನೀರಿನ ಅತಿ ಬೇಡಿಕೆ ಇರುವ ಕಡೆಗಳಲ್ಲಿ 1200 ಅಡಿ ಆಳದ ವರೆಗೆ ಬೇಕಾದರೂ, ಕೊಳವೆಬಾವಿ ಕೊರೆಸಿ ಜನ-ಜಾನುವರಿಗೆ ನೀರು ಒದಗಿಸಲು ಕ್ರಮಕೈಗೊಳ್ಳಬೇಕು. ಹಾಗೂ ಎಲ್ಲೆಲ್ಲಿ ಮೇವಿನ ಕೊರತೆ ಇದೆಯೋ ಅಂತಹ ಕಡೆಗಳಲ್ಲಿ ಕೂಡಲೇ ಅವಶ್ಯವಿರುವೆಡೆ ಜಾನುವಾರುಗಳಿಗೆ ಗೋಶಾಲೆ ತೆರೆಯಬೇಕೆಂದು ತಾಕೀತು ಮಾಡಿದರು.

      ಸಭೆಯಲ್ಲಿ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಎನ್.ಹೆಚ್,ರಾಜ್, ಜಿಲ್ಲೆಯಲ್ಲಿ ಒಟ್ಟು 108 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಇವುಗಳಲ್ಲಿ 67 ಗ್ರಾಮಗಳಿಗೆ 106 ಟ್ಯಾಂಕರ್‍ಗಳ ಮೂಲಕ ಹಾಗೂ ಉಳಿದ 41 ಗ್ರಾಮಗಳಿಗೆ 63 ಖಾಸಗಿ ಬೋರ್‍ವೆಲ್‍ಗಳ ಮುಖಾಂತರ ನೀರಿನ ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ ಜಗಳೂರು ತಾಲೂಕಿನಲ್ಲೇ ನೀರಿನ ಸಮಸ್ಯೆ ಹೆಚ್ಚಾಗಿದ್ದು, 87 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಅಲ್ಲದೇ ಹಲವಾರು ಗ್ರಾಮಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗದ ಕಾರಣ ಟ್ಯಾಂಕರ್ ಮೂಲಕವೇ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

     ಈ ವೇಳೆ ಜಗಳೂರು ತಾಲೂಕಿನ ತಹಶೀಲ್ದಾರ್, ಇಒ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಸಚಿವ ಶ್ರೀನಿವಾಸ್, ಇಷ್ಟೆಲ್ಲಾ ಸಮಸ್ಯೆ ಉದ್ಭವಿಸಿದ್ದು ಯಾಕೆ? ನೀವು ಯಾವುದೇ ರೀತಿಯ ಸಮರ್ಪಕ ಪರಿಹಾರೋಪಾಯ ಕ್ರಮಗಳನ್ನು ಕೈಗೊಂಡಿಲ್ಲ. ಈ ಕೂಡಲೇ ತಾಲೂಕಿನಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಇರುವ ಕಡೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ಎಚ್ಚರಿಸಿದರು.

      ಈ ಹಿಂದೆ ಕೆಡಿಪಿ ಸಭೆ ಮಾಡಿದಾಗಲೇ ಜಗಳೂರು ತಾಲೂಕಿನಲ್ಲಿನ ನೀರಿನ ಸಮಸ್ಯೆ ಕುರಿತು ಸಮರ್ಪಕ ಕಾಳಜಿ ವಹಿಸುವಂತೆ ಸೂಚನೆ ನೀಡಿದ್ದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಜನರ ಬೇಡಿಕೆಯಂತೆ ಜಗಳೂರು ಅರಣ್ಯ ಪ್ರದೇಶದಲ್ಲಿ ಒಂದು ಬೋರ್‍ವೆಲ್ ಕೊರೆಸಿ ಅಲ್ಲಿನ ಪ್ರಾಣಿಗಳಿಗೆ ನೀರು ಕುಡಿಯಲು ವ್ಯವಸ್ಥೆ ಮಾಡುವಂತೆ ಹೇಳಿ ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದ್ದರೂ ಈ ಕುರಿತಂತೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕೂಡಲೇ ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮದಲ್ಲಿ ಒಂದೊಂದು ಬೋರ್‍ವೆಲ್ ಕೊರೆಸಬೇಕು. ಹಾಗೂ ಅದರ ಸಂಪೂರ್ಣ ವಿವಿರ ಮುಂದಿನ ಸಭೆಯಲ್ಲಿ ನೀಡಬೇಕು ಎಂದರು.

      ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ಮಾತನಾಡಿ, 41 ವಾರ್ಡ್‍ಗಳಿಗೆ ವಾರಕೊಮ್ಮೆ 3 ತಾಸುಗಳ ಕಾಲ ನೀರು ಬಿಡಲಾಗುತ್ತಿದೆ. ನಗರದಲ್ಲಿ 162 ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಸದ್ಯಕ್ಕೆ ನೀರಿನ ಸಮಸ್ಯೆಯಂತು ಇಲ್ಲ. ಟಿವಿ ಸ್ಟೇಷನ್ ಕೆರೆಯಲ್ಲಿ 70 ದಿನಗಳಿಗೆ ಆಗುವಷ್ಟು ನೀರಿದೆ. ಈಗ ಕುಂದವಾಡ ಕೆರೆಗೆ ಸಹ ನೀರು ಹರಿಸಿ ಸ್ಟಾಕ್ ಮಾಡಿ ಇಟ್ಟುಕೊಂಡರೆ 2 ರಿಂದ 3 ತಿಂಗಳು ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಮಾಹಿತಿ ನೀಡಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಯಲ್ಲಿ ಮೊದಲು ಕುಡಿಯುವ ನೀರಿನ ಸಂಗ್ರಹಣಗಳು ಎಲ್ಲೆಲ್ಲಿ ಇವೆಯೋ ಅಲ್ಲಲ್ಲಿ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಲಾಗುವುದು ಎಂದರು.
ಹರಿಹರ ತಾಲೂಕಿನಲ್ಲಿ ನೀರಿನ ಸಮಸ್ಯೆಯಿಲ್ಲ. ಬಂದರೂ ತಾಲೂಕಿನಲ್ಲಿ 340 ಬೋರ್‍ವೆಲ್‍ಗಳಿವೆ. ಅದರಲ್ಲಿ 60 ಬೋರ್‍ವೆಲ್ ಫೇಲ್ ಆಗಿದ್ದು ಉಳಿದ ಬೋರವೆಲ್‍ಗಳಲ್ಲಿ ನೀರಿದೆ. ಚನ್ನಗಿರಿಯಲ್ಲಿ ಸಹ 23 ವಾರ್ಡ್‍ಗಳಿಗೆ ಶಾಂತಿ ಸಾಗರದಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ.

      ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ. ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ ಬಂದರೂ ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಜಗಳೂರಿನಲ್ಲಿ 18 ವಾರ್ಡ್‍ಗಳಿಗೆ ಶಾಂತಿ ಸಾಗರದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಹಾಗೂ ನಿತ್ಯ 6 ಟ್ಯಾಂಕರ್‍ಗಳಿಂದ ನೀರು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

       ಸಚಿವ ಶ್ರೀನಿವಾಸ್ ಮಾತನಾಡಿ, ಒಟ್ಟಾರೆ ಜಿಲ್ಲೆಯಲ್ಲಿ ಹಾಗೂ ಅದರಲ್ಲೂ ಜಗಳೂರು ತಾಲೂಕಿನಲ್ಲಿ ಜನರು ಯಾವುದೇ ಕಾರಣಕ್ಕೂ ಇಲ್ಲಿ ಕೆಲಸವಿಲ್ಲ ಎಂದು ಬೇರೆಡೆಗೆ ಗುಳೆ ಹೋಗದಂತೆ ಅವರಿಗೆ ಸೂಕ್ತ ಕೆಲಸ ಹಾಗೂ ಸರಿಯಾದ ಸಮಯಕ್ಕೆ ಕೂಲಿ ಹಣ ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಬೇಕು. ತಮ್ಮ ತಾಲೂಕಿಗೆ ಸಂಬಂಧಿಸಿದಂತೆ ತಿಂಗಳಿಗೆ ಎರಡು ಬಾರಿ ವಿವಿಧ ಅಧಿಕಾರಿಗಳೂಂದಿಗೆ ಸಭೆ ನಡೆಸಿ ಬರ ನಿರ್ವಹಣೆ ಕುರಿತು ಪರಿಹಾರಗಳನ್ನು ಕಂಡುಕೊಳ್ಳಬೇಕು. ಸದ್ಯ ಬರ ನಿರ್ವಹಣೆಗೆ ಹಣದ ಕೊರೆತೆಯಿಲ್ಲ.

        ಎಲ್ಲಾ ಅಧಿಕಾರಿಗಳು ಅವಶ್ಯವಿರುವ ಕಡೆ ಬಳಸಿ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಹಿಸುವಂತೆ ತಿಳಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಹೆಚ್. ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿ.ಪಂ. ಉಪಕಾರ್ಯದರ್ಶಿ ಎಲ್. ಭೀಮಾನಾಯ್ಕ, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ, ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮಣ್ಣನವರ್, ಕೃಷಿ ಜಂಟಿನಿರ್ದೇಶಕ ಶರಣಪ್ಪ ಮುದಗಲ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link