ನವದೆಹಲಿ
ಭಾರತೀಯ ರಕ್ಷಣಾ ಪಡೆಗಳ ಆಧುನೀಕರಣಕ್ಕಾಗಿ 114 ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿಯ ಬಗ್ಗೆ ಆಲೋಚಿಸುತ್ತಿರುವ ಭಾರತಕ್ಕೆ ಲಾಕ್‌ಹೀಡ್ ಮಾರ್ಟಿನ್ ಕಂಪನಿ ಭರ್ಜರಿ ಕೊಡುಗೆ ನೀಡಿದೆ.
ಭಾರತ ಯುದ್ಧ ವಿಮಾನ ಪೂರೈಕೆಯ ಗುತ್ತಿಗೆಯನ್ನೇ ತನಗೇ ನೀಡಿದ್ದಲ್ಲಿ, ಎಫ್-21 ಸರಣಿ ಯುದ್ಧ ವಿಮಾನಗಳನ್ನು ಭಾರತಕ್ಕೆ ಬಿಟ್ಟು ಬೇರಾವ ದೇಶಕ್ಕೂ ಮಾರಾಟ ಮಾಡುವುದಿಲ್ಲ ಮತ್ತು ಟಾಟಾ ಕಂಪನಿ ಜತೆಗೂಡಿ ಭಾರತದಲ್ಲೇ ವಿಮಾನದ ಅತ್ಯಾಧುನಿಕ ಉತ್ಪಾದನಾ ಘಟಕ ತೆರೆಯುತ್ತೇವೆ. ಭಾರತದ ರಕ್ಷಣಾ ಉತ್ಪಾದನೆಯ ಒಟ್ಟಾರೆ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ಸಹಾಯ ಮಾಡುತ್ತೇವೆ ಎಂದು ಆ ಕಂಪನಿ ಘೋಷಿಸಿದೆ. ಈ ವಿಮಾನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಭಾರತದ 60 ವಾಯುನೆಲೆಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಲಾಕ್‌ಹೀಡ್‌ನ ವ್ಯೂಹಾತ್ಮಕ ಹಾಗೂ ಉದ್ಯಮ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ವಿವೇಕ್ ಲಾಲ್ ತಿಳಿಸಿದ್ದಾರೆ.
1.26 ಲಕ್ಷ ಕೋಟಿ ರು. ವೆಚ್ಚದಲ್ಲಿ 114 ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ಮಾಹಿತಿ ಅಥವಾ ಆರಂಭಿಕ ಟೆಂಡರ್ ಅನ್ನು ಭಾರತೀಯ ವಾಯುಪಡೆ ಕೇಳಿತ್ತು. ವಿಶ್ವದ ಅತಿದೊಡ್ಡ ರಕ್ಷಣಾ ಖರೀದಿ ಪ್ರಕ್ರಿಯೆಗಳಲ್ಲಿ ಇದೂ ಒಂದು ಎಂದು ಬಿಂಬಿತವಾಗಿದೆ. ಅದಕ್ಕೆ ಲಾಕ್‌ಹೀಡ್‌ನಿಂದ ಈ ರೀತಿಯ ಪ್ರತಿಕ್ರಿಯೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ