ದಾವಣಗೆರೆ:
ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ಪಡೆಯಲು, ವಾಲ್ಮೀಕಿ ನಾಯಕ ಸಮಾಜ ಸಂಘಟಿತ ಹೋರಾಟ ನಡೆಸಬೇಕೆಂದು ಮುಖಂಡರು ಕರೆ ನೀಡಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸರ್ಕಾರ ನೀಡುತ್ತಿರುವ ಮೀಸಲಾತಿ ಹಾಗೂ ಅನ್ಯ ಸಮಾಜವನ್ನು ಪ.ಪಂಗಡದ ಪಟ್ಟಿಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನಕ್ಕೆ ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಚರ್ಚಿಸಲು ಮೇ 21ರಂದು ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಸ್ವಾಮೀಜಿ ಸಭೆ ಕರೆದಿರುವ ಪ್ರಯುಕ್ತ ಮಂಗಳವಾರ ನಗರದ ಪಿಜೆ ಬಡಾವಣೆಯ ನಾಯಕ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ನಾಯಕ ಸಂಘದ ಅಧ್ಯಕ್ಷ ಎಂ.ಬಿ.ಹಾಲಪ್ಪನವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಮುಖಂಡರು, ಶೇ.7.5ರಷ್ಟು ಮೀಸಲಾತಿ ಪಡೆಯಲು ಸಂಘಟಿತ ಹೋರಾಟ ನಡೆಸುವುದು ಅನಿವಾರ್ಯ ಎಂದರು.
ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡ ರಾಮಚಂದ್ರಪ್ಪ ಹದಡಿ, ನಮ್ಮ ಸಮಾಜ ಎಲ್ಲಾ ಸಮಾಜಗಳಿಗಿಂತಲೂ ಉದ್ಯೋಗ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದರೂ ಸಹ ರಾಜ್ಯ ಸರ್ಕಾರ ಕೇವಲ ಶೇ.3 ರಷ್ಟು ಮಾತ್ರ ಮೀಸಲಾತಿ ನೀಡುತ್ತಿದೆ. ಇದು ನಾವು ನಾಯಕ ಜಾತಿಯಲ್ಲಿ ಹುಟ್ಟಿರುವುದಕ್ಕೆ ಶಾಪವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಕಳ್ಳತನ ಮಾಡುತ್ತಿಲ್ಲ, ನಮ್ಮ ಸಂವಿಧಾನಯುತ ಹಾಗೂ ಕಾನೂನು ಬದ್ಧ ಹಕ್ಕು ಕೇಳುತ್ತಿದ್ದೇವೆ. ನಮಗೆ ಮನೆ, ಹೊಲ ಬೇಡ. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ನಮಗೆ ಶೇ.7.5ರಷ್ಟು ಮೀಸಲಾತಿ ನೀಡಲಿ. ಆಗ ನಮ್ಮ ಸಮಾಜದ ಮಕ್ಕಳು ಶಿಕ್ಷಣ ಪಡೆದು, ಉನ್ನತ ಹುದ್ದೆ ಅಳಂಕರಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ. ಆದ್ದರಿಂದ ಈ ಬೇಡಿಕೆಗಾಗಿ ಸಂಘಟಿತ ಹೋರಾಟ ರೂಪಿಸಬೇಕೆಂದು ಕರೆ ನೀಡಿದರು.
ದಾವಣಗೆರೆ ನಾಯಕ ಸಮಾಜ ಸಂಘದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಕರಿಲಕ್ಕೆನಹಳ್ಳಿ ಮಾತನಾಡಿ, ನಾಯಕ ಸಮುದಾಯದ ಮುಖಂಡರು ಶೇ. 7.5 ಮೀಸಲಾತಿ ಪಡೆದುಕೊಳ್ಳಲು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ. ಈಗಾಗಲೇ ಪ್ರಬಲವಾಗಿ ಬೆಳೆದಿರುವ ನಮ್ಮ ಸೋದರ ಸಮಾಜ ಪರಿಶಿಷ್ಟ ಪಂಗಡದಲ್ಲಿ ಸೇರಿಕೊಂಡು ನಮ್ಮ ಪಾಲಿನ ಮೀಸಲಾತಿ ಕಬಳಿಸುವ ಹುನ್ನಾರ ನಡೆಸಿದೆ. ಇದು ನಮ್ಮ ಸಂವಿಧಾನಬದ್ಧ ಹಕ್ಕು. ಇದನ್ನು ಪಡೆದುಕೊಂಡು ಆಸ್ತಿತ್ವ ಉಳಿಸಿಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಉಪನ್ಯಾಸಕ ಓಬಳೇಶ್ ಮಾತನಾಡಿ, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಒಟ್ಟು 55 ಉಪ ಪಂಗಡಗಳಿವೆ. ಆದರೂ, ಶೇ. 3 ಮೀಸಲಾತಿ ಮಾತ್ರ ಇದೆ. ಹೀಗಾಗಿ ನಮ್ಮ ಮಕ್ಕಳು ಉದ್ಯೋಗಾವಕಾಶ ಪಡೆಯಬೇಕಾದರೆ, ಶೈಕ್ಷಣಿಕವಾಗಿ ಸಾಮಾನ್ಯ ವರ್ಗಕ್ಕಿಂತ ಹೆಚ್ಚಿನ ಅಂಕ ಪಡೆಯಬೇಕಾಗಿದೆ. ಆದ್ದದರಿಂದ ರಾಜ್ಯ ಕಾನೂನು ತಿದ್ದುಪಡಿ ಮಾಡಿ ತಮಿಳುನಾಡು, ಆಂಧ್ರ ಪ್ರದೇಶದಂತೆ ಮೀಸಲು ಪ್ರಮಾಣ ಹೆಚ್ಚಸಿಸಬೇಕೆಂದು ಹೇಳಿದರು.
ರಾಜಕೀಯ ಪಕ್ಷಗಳಿಂದ ಸಮಾಜ ಒಡೆದು ಹೋಗುತ್ತಿದೆ. ಸಮುದಾಯದ ಜನರು ಯಾವುದೇ ಪಕ್ಷಗಳಲ್ಲಿರಲಿ ಸೌಲಭ್ಯಕ್ಕಾಗಿ ಜಾಗೃತರಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಹಳ್ಳಿಗಳಲ್ಲಿ ಕರಪತ್ರ ವಿತರಿಸಿ ಜಾಗೃತಿ ಮೂಡಿಸಬೇಕೆಂದು ಕಿವಿಮಾತು ಹೇಳಿದರು.
ಮುಖಂಡ ಅಂಜಿನಪ್ಪ ಪ್ರಾಸ್ತಾವಿಕ ಮಾತನಾಡಿ, ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರಿಡಬೇಕು. ಕಪಿಎಸ್ಸಿಯಲ್ಲಿ ನಾಯಕ ಸಮಾಜದೊಬ್ಬರಿಗೆ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ನಾಯಕ ಸಮಾಜದ ಅಧ್ಯಕ್ಷ ಎಂ.ಬಿ.ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎ.ಮುರುಗೇಂದ್ರಪ್ಪ ದೊಡ್ಡಮನೆ, ಗೌರವ ಕಾರ್ಯದರ್ಶಿ ಜಿ.ಎನ್.ಸತೀಶ್ ಶ್ಯಾಗಲೆ, ಉಪಾಧ್ಯಕ್ಷ ಎನ್.ಡಿ.ಮುರಿಗೆಪ್ಪ, ಖಜಾಂಚಿ ಪಿ.ಒ.ಹೇಮಣ್ಣ ಅಣ್ಣಾಪುರ, ಕಾನೂನು ಸಲಹೆಗಾರ ಎಲ್.ಒ.ಮಂಜಪ್ಪ ಕಂದಗಲ್ಲು, ಮುಖಂಡ ಕಾಯಕಯೋಗಿ ಮಂಜಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.