ಮಧುಗಿರಿ
ಬೇಸಿಗೆಯ ತಾಪಮಾನ ಏರುಪೇರಾಗಿ ಮಳೆರಾಯನ ಅಬ್ಬರವೇ ತಾಲ್ಲೂಕಿನಲ್ಲಿ ಇಲ್ಲವಾಗಿ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕ್ಷೀಣಿಸಿರುವುದರಿಂದ ನೀರಿನ ಅಭಾವ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳ ಶೌಚಕ್ಕೂ ನೀರಿನ ಲಭ್ಯತೆಯೇ ಮರೀಚಿಕೆಯಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯು ಈ ಬಾರಿಯ ಬೇಸಿಗೆಯ ಬರಗಾಲಕ್ಕೆ ತುತ್ತಾಗಿ ತಾಲ್ಲೂಕು ಮಟ್ಟದ ಆಸ್ಪತ್ರೆಯೊಂದು ನೀರಿನ ಅಭಾವ ಎದುರಿಸುತ್ತಿದೆ. ಈ ಆಸ್ಪತ್ರೆಗೆ ಪ್ರತಿದಿನ ಸುಮಾರು 1200 ರಿಂದ 1500 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಚಿಕಿತ್ಸೆಗಾಗಿ ಬರುವ ರೋಗಿಗಳು ಕಡ್ಡಾಯವಾಗಿ ತಮ್ಮ ಜೊತೆಯಲ್ಲಿ ಸ್ವತಃ ತಮ್ಮ ಬಾಟಲ್‍ಗಳಲ್ಲಿ ಕುಡಿಯುವ ನೀರನ್ನು ತೆಗೆದುಕೊಂಡು ಬರುತ್ತಾ ಬಳಸಿಕೊಳ್ಳುತ್ತಿರುವುದು ಸಾಮಾನ್ಯವಾದ ದೃಶ್ಯವಾಗಿದೆ.
ಬೃಹತ್ ಕೊಠಡಿಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿನ ಶೌಚಾಲಯಗಳ ಸ್ಥಿತಿ ಬಳಸಿದವರಿಗೆ ಮಾತ್ರ ತಿಳಿದಿದ್ದು, ಶೌಚಕ್ಕೂ ಸಹ ನೀರಿಲ್ಲದಂತಾಗಿದೆ. ಗರ್ಭಿಣಿ ಸ್ರೀಯರು ಆಸ್ಪತ್ರೆಯಲ್ಲಿನ ನೀರಿನ ಅಭಾವದಿಂದಾಗಿ ಬೇರೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿನ ಒಳ ರೋಗಿಗಳ ಪಾಡು ಹೇಳತೀರದಾಗಿದೆ. ರ್ದುವಾಸನೆಯಲ್ಲಿಯೇ ತಮ್ಮ ಮೂಗನ್ನು ಮುಚ್ಚಿಕೊಂಡು ಆಗಾಗ ಉಸಿರಾಡುತ್ತ ಚಿಕಿತ್ಸೆ ಪಡೆದುಕೊಳ್ಳುತ್ತಾ ಆಗಾಗ ಬರುವ ಟ್ಯಾಂಕರ್ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
ಆಸ್ಪತ್ರೆಗೆ ಹೇಮಾವತಿ ನೀರು ಹರಿದು ತಿಂಗಳುಗಳೇ ಕಳೆದಿವೆ. ಸುತ್ತಮುತ್ತ್ತಲ ಬೋರ್ ವೆಲ್‍ಗಳು ಬರಿದಾಗಿವೆ. ಆಸ್ಪತ್ರೆಯಲ್ಲಿ ನೀರು ಇಲ್ಲದೆ ಶುಚಿತ್ವ ವ್ಮರೆಯಾಗಿದೆ. ನೀರಿಲ್ಲದೆ ಒಳ ಮತ್ತು ಹೊರ ರೋಗಿಗಳ ಗೋಳು ಹೆಚ್ಚಾಗಿದೆ. ಪ್ರತಿ ವಾರ ನಡೆಯುವ ಆಪರೇಷನ್‍ಗಳು ಸಹ ನೀರಿಲ್ಲದೆ ಮುಂದಿನ ದಿನಗಳಲ್ಲಿ ವೈದ್ಯರು ಸ್ತಬ್ಧಗೊಳಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನೂ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಪ್ರತಿದಿನ ಕನಿಷ್ಠ 3 ಟ್ಯಾಂಕರ್ ನೀರನ್ನು ಒದಗಿಸಿಕೊಡುವಂತೆ ಮನವಿ ಮಾಡಿದ್ದರೂ, ಸಹ ಟ್ಯಾಂಕರ್ ನೀರನ್ನು ಸರಿಯಾಗಿ ಬಿಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.
ಡಯಾಲಿಸಿಸ್ ಘಟಕಕ್ಕೆ ಗೌರಿಬಿದನೂರು, ಶಿರಾ. ಪಾವಗಡ, ಕೊರಟಗೆರೆ ತಾಲ್ಲೂಕುಗಳ ರೋಗಿಗಳು ಬರುತ್ತ್ತಿದ್ದಾರೆ ಹಾಗೂ ಘಟಕಕ್ಕೆ ಪ್ರತಿ ದಿನ ಕನಿಷ್ಠ ಎರಡು ಟ್ಯಾಂಕರ್ ನೀರಿನ ಅವಶ್ಯಕತೆ ಇದ್ದು, ದಿನೇ ದಿನೇ ನೀರಿನ ಅಭಾವ ತಲೆದೋರುತ್ತಿರುವುದರಿಂದ ನೀರಿಲ್ಲದೆ ಈ ಘಟಕವು ಸಹ ನಿಲ್ಲುವಂತಹ ವಾತವರಣ ಸೃಷ್ಟಿಯಾಗಲಿದೆ.
ಆದಷ್ಟೂ ಬೇಗ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಉಚಿತ ನೀರು ಸರಬರಾಜುದಾರರೆಂದು ಬಿಂಬಿಸಿಕೊಳ್ಳುತ್ತಿರುವ ಮುಖಂಡರು ಎಚ್ಚೆತ್ತುಕೊಂಡು ಆಸ್ಪತ್ರೆಗೂ ಸಹ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟು ರೋಗಿಗಳ ಪಾಲಿಗೆ ಭಗೀರಥರಾಗುತ್ತಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.