ಚಳ್ಳಕೆರೆ
ಕಳೆದ ವಾರವಷ್ಟೇ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಸೇದೇವರಹಟ್ಟಿಯಲ್ಲಿ ನಿತ್ರಾಣದಿಂದ ದೇವರ ಎತ್ತು ಸಾವಿಗೀಡಾಗಿದ್ದು, ಎಚ್ಚೆತ್ತ ಜಿಲ್ಲಾಡಳಿತ ತಾಲ್ಲೂಕಿನಾದ್ಯಂತ ಒಟ್ಟು ಏಳು ಗೋಶಾಲೆಗಳನ್ನು ಪ್ರಾರಂಭಿಸಿ ಪ್ರತಿನಿತ್ಯ ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ ಎಂದು ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ತಿಳಿಸಿದರು.
ಅವರು, ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ ಭೀಕರ ಬರಗಾಲದ ದುಸ್ಥಿತಿ ಇದ್ದು, ಇತ್ತೀಚಿನ ದಿನಗಳಲ್ಲಿ ಜಾನುವಾರುಗಳು ಸಹ ಮೇವಿನ ಸಂಕಷ್ಟವನ್ನು ಎದುರಿಸುತ್ತಿದ್ದು, ಅವುಗಳ ಸಂರಕ್ಷಣೆ ಮಾಡುವ ದೃಷ್ಠಿಯಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರಸ್ತುತ ತಾಲ್ಲೂಕಿನಾದ್ಯಂತ ಏಳು ಕಡೆ ಗೋಶಾಲೆಗಳನ್ನು ಪ್ರಾರಂಭಿಸಿದ್ದು, ಗೋಶಾಲೆಗಳಲ್ಲಿರುವ ಎಲ್ಲಾ ಜಾನುವಾರುಗಳಿಗೂ ಮೇವು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ಧಾರೆ.
ಪ್ರತಿನಿತ್ಯ ಅಂದಾಜು 8 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಎಲ್ಲಾ ಗೋಶಾಲೆಗಳಲ್ಲಿ ಆಶ್ರಯ ಪಡೆದಿದ್ದು, ಪ್ರತಿನಿತ್ಯ ಸರಾಸರಿ 10 ಟನ್ ಮೇವನ್ನು ಜಾನುವಾರುಗಳಿಗೆ ನೀಡಲಾಗುತ್ತಿದೆ. ತಾಲ್ಲೂಕಿನ ದೊಡ್ಡ ಉಳ್ಳಾರ್ತಿ, ಸಾಣೀಕೆರೆ, ನಾಗಗೊಂಡನಹಳ್ಳಿ, ಎ.ಜಿ.ರಸ್ತೆ, ಹಿರೇಹಳ್ಳಿ, ಮಲ್ಲೂರಹಳ್ಳಿ ಮತ್ತು ಚೌಳೂರು ಗೋಶಾಲೆ ಈಗಾಗಲೇ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಒಟ್ಟು 8 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಗೋಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಮೇವಿನ ಜೊತೆಗೆ ನೀರನ್ನು ಸಹ ಸರಬರಾಜು ಮಾಡುತ್ತಿದ್ದು, ಪಶುವೈದ್ಯ ಅಧಿಕಾರಿಗಳು ಗೋಶಾಲೆಗೆ ಭೇಟಿ ನೀಡಿ ಜಾನುವಾರುಗಳ ಆರೋಗ್ಯ ತಪಾಸಣೆಯೂ ಸಹ ನಡೆಸಲಾಗುತ್ತಿದ್ದು, ಎಲ್ಲಾ ಜಾನುವಾರುಗಳು ಆರೋಗ್ಯದಿಂದ ಇವೆ ಎಂದು ತಿಳಿಸಿದ್ಧಾರೆ.
ಈ ಸಂದರ್ಭದಲ್ಲಿ ಜಾನುವಾರುಗಳ ಮಾಲೀಕರಿಗೆ ಮನವಿ ಮಾಡಿರುವ ಅವರು, ದಯಮಾಡಿ ಜಾನುವಾರುಗಳಿಗೆ ಅಗತ್ಯವಿರುವಷ್ಟು ಮೇವನ್ನು ನೀಡಿ, ಯಾವುದೇ ಕಾರಣಕ್ಕೂ ಮೇವನ್ನು ಎಲ್ಲಂದರಲ್ಲೇ ಎಸೆಯದೇ ಜೋಪಾನವಾಗಿ ಜಾನುವಾರುಗಳು ತಿನ್ನುವ ರೀತಿಯಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ನೀವು ಎಲ್ಲಿಯೂ ದಂಡವಾಗದಂತೆ ಎಚ್ಚರಿಕೆ ವಹಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ನಿಗದಿತ ಪ್ರಮಾಣದಲ್ಲಿ ಮಾತ್ರ ಮೇವು ನೀಡಲು ಸ್ಪಷ್ಟ ಸೂಚನೆ ನೀಡಿದ್ದು, ಸೂಚನೆಯನ್ನು ಎಲ್ಲರೂ ಸಹ ಕಡ್ಡಾಯವಾಗಿ ಪಾಲಿಸಬೇಕಿದೆ. ಮೇವನ್ನು ಪಡೆದು ಅದು ಸದುಪಯೋಗ ಮಾಡಿಕೊಳ್ಳುವತ್ತ ಹೆಚ್ಚು ಗಮನ ನೀಡಬೇಕು. ಸರ್ಕಾರ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಗೋಶಾಲೆ ನಿರ್ವಹಣೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ಧಾರೆ.
ಸಂಚಾರಿ ಮೇವು ವಿತರಣೆಗೆ ಆದ್ಯತೆ :-
ಈಗಾಗಲೇ ಏಳು ಕಡೆ ಗೋಶಾಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನೇಕ ಗ್ರಾಮಗಳ ರೈತರು ತಮ್ಮ ಗ್ರಾಮದಲ್ಲೇ ಗೋಶಾಲೆ ನಿರ್ಮಿಸುವಂತೆ ಒತ್ತಾಯ ಹೇರುತ್ತಿದ್ಧಾರೆ. ಅನೇಕ ಕಡೆಗಳಲ್ಲಿ ಗೋಶಾಲೆ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಂಚಾರಿ ಮೇವು ಬ್ಯಾಂಕ್ ಪ್ರಾರಂಭಿಸಿ ಅಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮೇವನ್ನು ವಿತರಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಿದ್ದು, ಗೋಶಾಲೆಗಳು ಇಲ್ಲದ ಕಡೆ ಸಂಚಾರಿ ಮೇವು ಬ್ಯಾಂಕ್‍ನ ಮೂಲಕ ರೈತರು ಮೇವು ಪಡೆಯುವಂತೆ ಅವರು ಸಲಹೆ ಮಾಡಿದ್ಧಾರೆ.
ಮಿತ ನೀರು ಬಳಕೆಗೆ ಅದ್ಯತೆ ನೀಡಿ :-
ತಾಲ್ಲೂಕಿನ ಏಳು ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಕಡೆಗಳಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಿದ್ದು, ಅಲ್ಲಿ ಜಾನುವಾರುಗಳಿಗೆ ನೀರನ್ನು ಕುಡಿಯಲು ವ್ಯವಸ್ಥೆ ಮಾಡಲಾಗಿದೆ. ನೀರು ಸಹ ಅಮೂಲ್ಯವಾಗಿದ್ದು, ಎಲ್ಲೆಡೆ ನೀರಿನ ಹಾಹಾಕಾರ ಇರುವ ಸಂದರ್ಭದಲ್ಲೇ ಜಾನುವಾರುಗಳ ನೀರಿನ ಬವಣೆಯನ್ನು ಸಹ ನಿಯಂತ್ರಿಸಲು ಹೆಚ್ಚಿನ ಅದ್ಯತೆ ನೀಡಲಾಗಿದೆ. ಇಲ್ಲಿಯೂ ಸಹ ರೈತರು ತಮ್ಮ ಜಾನುವಾರುಗಳಿಗೆ ನೀರು ಕುಡಿಸಿವ ಸಂದರ್ಭದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕಲ್ಲದೆ, ನೀರನ್ನು ಅಪವ್ಯಯ ಮಾಡದಂತೆ ಜಾಗೃತೆ ವಹಿಸಬೇಕೆಂದು ಅವರು ಮನವಿ ಮಾಡಿದ್ಧಾರೆ.