ಚನ್ನಗಿರಿ:
ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಹೀಗೆಯೆ ಮಳೆಯ ಕೊರತೆ ಮುಂದುವರೆದರೆ , ತೋಟಗಾರಿಕೆ ಬೆಳೆಯಿಂದ ರೈತರು ವಿಮುಖವಾಗುವ ಸಾಧ್ಯತೆ ಇದೆ ಎಂದು ಚನ್ನಗಿರಿ ಸಹಾಯಕ ಕೃಷಿ ಅಧಿಕಾರಿ ಡಾ|| ಶಿವಕುಮಾರ್ ಮಲ್ಲಾಡದ್ ಸೂಚ್ಯವಾಗಿ ಎಚ್ಚರಿಸಿದರು.
ಪಟ್ಟಣದ ತಾಲೂಕು ಪಂಚಾಯತ್‍ನ ರಾಜೀವ್ ಗಾಂಧಿ ಸಭಾಂಗಣದಲ್ಲಿ “ಆತ್ಮ” ಯೋಜನೆಯಡಿಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕೃಷಿ ಪರಿಕರಗಳ ಮಾರಾಟಗಾರರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವರ್ಷದಿಂದ, ವರ್ಷಕ್ಕೆ ಮಳೆ ಕೊರತೆ ಮುಂದುವರೆದರೆ, ರೈತರು ತೋಟಗಾರಿಕೆ ಬೆಳೆಯಿಂದ ದೂರ ಉಳಿದು, ಮುಂದಿನ ದಿನಗಳಲ್ಲಿ ಏಕದಳ ಮತ್ತು ದ್ವಿದಳ ಧಾನ್ಯಗಳ ಕಡೆ ಮುಖಮಾಡುವ ಪರಿಸ್ಥಿತಿ ಬರಬಹುದು ಎಂದರು.
ಮಳೆ ಪ್ರಮಾಣಕ್ಕೆ ಅನುಗುಣವಾಗಿ ಮುಂಗಾರು ಮತ್ತು ಹಿಂಗಾರಿನಲ್ಲಿ ರೈತರಿಗೆ ಪೂರಕವಾದ ಮಾಹಿತಿಗಳನ್ನು ತಿಳಿಸುವ ಜವಾಬ್ದಾರಿಯು ಕೃಷಿ ಪರಿಕರ ಮಾರಾಟಗಾರರ ಮೇಲಿದೆ. ಉತ್ಪಾದಕ ಮತ್ತು ಕೃಷಿ ಅಧಿಕಾರಿಗಳ ಮಧ್ಯ ರೈತರಿಗೆ ನಂಬಿಕೆಯ ಋಷಿಗಳಾಗಿ ನೀವುಗಳು ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಕೃಷಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕೃಷಿಪರಿಕರಗಳನ್ನು ಮಾರಾಟ ಮಾಡುವವರು, ಯಾವ್ಯಾವ ನಿಯಮ ನಿಬಂಧನೆಗಳನ್ನು ಪಾಲಿಸಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸಿ, ಪಿ.ಒ.ಎಸ್ ಯಂತ್ರದ ಬಳಕೆ, ಡಿಪ್ಲೋಮಾ ಪ್ರಮಣಪತ್ರ, ಸರ್ಟಿಫೈಡ್ ಬೀಜದ ಮಾರಾಟ ಗುಣಮಟ್ಟದ ಬಿತ್ತನೆ ಬೀಜದ ಬಗ್ಗೆ, ಧನಾತ್ಮಕ ಗೊಬ್ಬರಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಪ್ರತಿಯೊಬ್ಬ ಮಾರಾಟ ಗಾರರು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ, ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಬೇಕೆಂದು ಸಲಹೆ ನೀಡಿದರು.
ತಾಲೂಕು ಕೃಷಿ ಪರಿಕರ ಮಾರಟಗಾರರ ಸಂಘದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಕೆ.ಸಿರಾಜ್ ಅಹಮ್ಮದ್, ಲೋಹಿತಾಶ್ವ, ವಿಜಯ್, ಬಸವೇಶ್ ಪಾಟೀಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಚಿ ಅಧಿಕಾರಿ ನಂದಾ ಉಪಸ್ಥಿತರಿದ್ದರು. ಮಿಥುನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮ್ಮದ್ ರಫಿ ಸ್ವಾಗತಿಸಿದರು. ಕೇಶವ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ