ತುಮಕೂರು
ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ತುಮಕೂರು ನಗರದ ಶಿಕ್ಷಣ, ರಸ್ತೆ. ಕುಡಿಯುವ ನೀರು, ಚರಂಡಿ ವಿಷಯಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಈ ನಿಟ್ಟಿನಲ್ಲಿ ಅಮಾನಿಕೆರೆ ಹಾಗೂ ಪಿ ಎನ್ ಆರ್ ಪಾಳ್ಯ ಕೆರೆ ತುಂಬಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ 56.5 ಕೋಟಿ ರೂ ಹಣ ಬಂದಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಬಂದಿಲ್ಲ ಎಂದಾದರೆ ದೊಡ್ಡ ಕಷ್ಟ ನಿವಾರಣೆಯಾಗುತ್ತಿರಲಿಲ್ಲ. ಇಂದು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸರಕಾರಿ ಶಾಲೆ ಅಭಿವೃದ್ಧಿ ಹೊಂದುತ್ತಿವೆ. ರಸ್ತೆಗಳು ಅಭಿವೃದ್ಧಯಾಗುತ್ತಿವೆ. ಇದರಲ್ಲಿ ಕೇಂದ್ರಸರ್ಕಾರದೊಂದಿಗೆ ರಾಜ್ಯ ಸರಕಾರದ ಸಹಭಾಗಿತ್ವವೂ ಇದೆ ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಅವರ ಆಡಳಿತ ಕಾಲದಲ್ಲಿಯೇ 24/7 ಕುಡಿಯುವ ನೀರಿನ ಯೋಜನೆಗೆ 196 ಕೋಟಿ ತರಲಾಗಿತ್ತು. ಇದೀಗ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಮಾನಿಕೆರೆಗೆ ನೀರು ಹರಿಸುವ ಯೋಜನೆಗೆ 56.5 ಕೋಟಿ ರೂ ಹಣ ಬಂದಿದೆ. ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಹಾಗಾಗಿ ಜಿಲ್ಲಾ ಉಪಮುಖ್ಯಮಂತ್ರಿಗಳು ಕೂಡಲೇ ಆಗಿರುವ ಟೆಂಡರ್ನ್ನು ಕೂಡಲೇ ಕೆಲಸ ಪ್ರಾರಂಭ ಮಾಡಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಬುಗಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರು ಹರಿಸಲು 31ಕೋಟಿ ಅನುದಾನ ಇದೆ. ಪಿಎನ್ಆರ್ ಪಾಳ್ಯ ಕೆರೆಗೆ ನೀರು ಹರಿಸಲು 25.5 ಕೋಟಿ ರೂ. ಅನುದಾನ ಇದೆ. ಇದರಿಂದ ಮುಂದಿನ ತಿಂಗಳಲ್ಲಿ ಮಳೆ ಬರುವುದರೊಳಗೆ ಅಮಾನಿಕೆರೆಯ ಅಭಿವೃದ್ಧಿ ಮಾಡಬೇಕು. ಕಳೆದ ವರ್ಷ ಬುಗುಡನಹಳ್ಳಿಕೆರೆಯ ಹೂಳೆತ್ತುವ ಯೋಜನೆಗೆ ಚುನಾವಣಾ ನೀತಿ ಸಂಹಿತೆ ಅಡ್ಡ ಬಂದಿತ್ತು. ನಂತರ ಹೂಳೆತ್ತುವ ಕಾರ್ಯ ಮಾಡಲು ಮುಂದಾದಾಗ ಮಳೆ ಬಂದು ನೀರು ತುಂಬಿಕೊಂಡಿತ್ತು. ಹಾಗಾಗಿ ಅದಕ್ಕೆ ಅಂದು ಅಡ್ಡಿ ಪಡಿಸಲಾಗಿತ್ತು. ಇದೀಗ ಕುಡಿಯುವ ನೀರು ಕಡಿಮೆಯಾಗಿದ್ದು, ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.
ಬುಗುಡನಹಳ್ಳಿ ಕೆರೆಗೆ ಜಾಕ್ವೆಲ್ ಹಾಕುವ ಮೂಲಕ ಅಲ್ಲಿಂದ ನೀರನ್ನು ಅಮಾನಿಕೆರೆಗೆ ಪೈಪ್ಗಳ ಮೂಲಕ ಪಂಪ್ ಮಾಡಲಾಗುತ್ತದೆ. ಇಲ್ಲಿಂದ ಪಿಎನ್ಆರ್ ಪಾಳ್ಯ ಕೆರೆಗೆ ನೀರು ತುಂಬಿಸುವುದರಿಂದ ನಗರಕ್ಕೆ ಸಂಪೂರ್ಣವಾಗಿ ನೀರು ಸರಬರಾಜು ಮಾಡಬಹುದು ಎಂದರಲ್ಲದೆ, ಮೈದಾಳ ಕೆರೆಯಿಂದ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವಶ್ಯಕತೆಗೆ ತಕ್ಕಂತೆ ನೀರು ಲಭ್ಯವಿದ್ದು ಮಿತವಾಗಿ ಬಳಸಿಕೊಳ್ಳಬೇಕಿದೆ.
ಬಸವಾಪಟ್ಟಣದ ಬಳಿ 8 ಗುಂಟೆ ಜಾಗವಿದ್ದು, ಹಳೆಯ ಕಾಲದ ಸಂಫ್ ಇದೆ. ಅದನ್ನು ಅಭಿವೃದ್ಧಿ ಪಡಿಸಿಕೊಂಡಲ್ಲಿ ನಿತ್ಯ 70 ಲಕ್ಷ ಲೀ ನೀರನ್ನು ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಪಾಲಿಕೆಯಿಂದ ಮೋಟಾರ್ಅನ್ನು ಅಳವಡಿಸಲಾಗಿದ್ದು, ಈ ಸಂಪ್ನ ಅಭಿವೃದ್ಧಿ ಬಗ್ಗೆ ಆಯುಕ್ತರ ಬಳಿ ಚರ್ಚೆ ಮಾಡಲಾಗಿದೆ. ಮರಳೂರು ಕೆರೆ 65 ಎಂಟಿಎಫ್ ಸಿ ನೀರು ಸಂಗ್ರಹದ ಸಾಮಥ್ರ್ಯವಿದ್ದು ಅದರಲ್ಲಿ ಊಳು ತೆಗೆಸಿ ನೀರು ಸಂಗ್ರಹಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಅಮೃತ್ ಸ್ಕೀಂ ನಲ್ಲಿ ರಾಜಕಾಲುವೆ, ಕುಡಿಯುವ ನೀರು ಯೋಜನೆಗೆ ಬಳಸಬಹುದು. ನೆದೆಗುದಿಗೆ ಬಿದ್ದ ಯೋಜನೆ ಕೈಗೆತ್ತಿಕೊಳ್ಳಬೇಕು.
23.ಟಿಎಂಸಿ ನೀರು ಬಂದಿಲ್ಲ
ತುಮಕೂರಿನ ಹೇಮಾವತಿ ನಾಲೆ ಸಾಮಥ್ರ್ಯ ಪ್ರಮಾಣದ ಪ್ರಕಾರ 23 ಟಿಎಂಸಿ ಹರಿಯಲು ಸಾಧ್ಯವಿಲ್ಲ ಎನ್ನುವುದು ತಿಳಿಯುತ್ತದೆ. ಸರಕಾರವೇ ನಮಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ಇತ್ತೀಚೆಗೆ ನಡೆದ ಸಭೆಯಲ್ಲಿ ಸಚಿವರು ಸಂಪೂರ್ಣವಾಗಿ ನೀರನ್ನು ಹರಿಸಿದ್ದೇವೆ ಎಂಬುದಾಗಿ ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುಡ್ಸೆ ದೇಶಭಕ್ತ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದುದರ ಬಗ್ಗೆ ಮಾತನಾಡಿದ ಅವರು ಗೂಡ್ಸೆ ಬಗ್ಗೆ ಆತ ಹೇಳಿದ್ದು ತಪ್ಪು, ಅವರಿಗೆ ನೋಟೀಸ ನೀಡುತ್ತೇವೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಬಾವಿಕಟ್ಟೆ ನಾಗಣ್ಣ, ಹನುಮಂತರಾಯಪ್ಪ, ಅಣೆತೋಟ ಶ್ರೀನಿವಾಸ್, ಸಾದರನಳ್ಳಿ ವಿಜಯ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
