ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷಿದ್ಧ

ಚಿತ್ರದುರ್ಗ

        ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ರ ಮತ ಎಣಿಕೆ ಕಾರ್ಯವು ಮೇ 23 ರಂದು ಬೆಳಿಗ್ಗೆ 8 ಗಂಟೆಯಿಂದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ನಡೆಯಲಿದೆ. ಮತ ಎಣಿಕಾ ಕೇಂದ್ರದೊಳಗೆ ಮೊಬೈಲ್ ಅನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ನಿಯಮಗಳನ್ನು ಅಭ್ಯರ್ಥಿಗಳು ಹಾಗೂ ಏಜೆಂಟರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದರು.

      ಲೋಕಸಭಾ ಚುನಾವಣೆಯ ಮತ ಎಣಿಕೆ ಮಾರ್ಗಸೂಚಿಗಳ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಮಾಹಿತಿ ನೀಡಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಮತ ಎಣಿಕೆಯ ದಿನವಾದ ಮೇ 23 ರಂದು ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಚುನಾವಣಾ ಏಜೆಂಟರುಗಳು ಅನುಸರಿಸಬೇಕಾದ ನಿಯಮಗಳ ಕುರಿತು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಅದರನ್ವಯ ಅಭ್ಯರ್ಥಿಗಳು ಅಥವಾ ಏಜೆಂಟರು ಮೊಬೈಲ್ ಫೋನ್, ಪೇಜರ್, ಎಲೆಕ್ಟ್ರಾನಿಕ್ ಗ್ಲಾಡ್‍ಗೇಟ್ಸ್‍ಗಳು, ಕ್ಯಾಲ್ಕುಲೇಟರ್ಸ್, ಸಿಗರೇಟ್, ಬೀಡಿ, ಬೆಂಕಿ ಪೊಟ್ಟಣ ಹಾಗೂ ಲೈಟರ್ಸ್‍ಗಳು, ನೀರಿನ ಬಾಟಲ್ಸ್‍ಗಳು, ಛತ್ರಿ, ಯಾವುದೇ ಹರಿತವಾದ ಆಯುಧಗಳು, ಸ್ಪೋಟಕ ವಸ್ತುಗಳು, ಸಿಡಿಮದ್ದುಗಳು, ಬೆಂಕಿ ಹತ್ತುವ ಪದಾರ್ಥಗಳು ಮತ್ತು ಇಂಕ್ ಪೆನ್ ಇವುಗಳನ್ನು ಮತ ಎಣಿಕೆ ಕೇಂದ್ರದೊಳಗೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು

     ಏಜೆಂಟರುಗಳು ನೇಮಕಗೊಂಡಿರುವ ವಿಧಾನಸಭಾ ಸೆಗ್ಮೆಂಟ್ ಕೊಠಡಿ ಬಿಟ್ಟು ಬೇರೆ ಕೊಠಡಿಗಳಿಗೆ ಓಡಾಡುವುದು, ಏರಿದ ಧ್ವನಿಯಲ್ಲಿ ಮಾತನಾಡುವುದು, ಅನಗತ್ಯವಾಗಿ ಏಜೆಂಟರ ನಡುವೆ ಮಾತನಾಡಿ ಚರ್ಚಿಸುವಂತಿಲ್ಲ. ಮತ ಎಣಿಕೆ ನಂತರ ಪ್ರತಿ ವಿಧಾನಸಭಾ ಸೆಗ್ಮೆಂಟ್‍ನ 5 ಮತಗಟ್ಟೆಗಳ ವಿ.ವಿ.ಪ್ಯಾಟ್‍ಗಳನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡಿ ಮತ ಎಣಿಕೆ ಮಾಡಲಾಗುವುದು.

     ಈ ನಿಯಮ ಹಾಗೂ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಪ್ರಕರಣ 128 ರ ಪ್ರಕಾರ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಮತ ಎಣಿಕೆ ಕಾರ್ಯವನ್ನು ಸುಗಮ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳಲು ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಕೋರಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ.ಅರುಣ್ ಮಾತನಾಡಿ ಮೊಬೈಲ್ ಫೋನ್‍ಗಳನ್ನು ಮತ ಎಣಿಕಾ ಕೇಂದ್ರದೊಳಗೆ ಸಂಪೂರ್ಣ ನಿಷೇಧಿಸಿದೆ. ಮತ ಎಣಿಕೆ ಕೇಂದ್ರದ ಬಳಿ ಎಲ್ಲರೂ ಶಾಂತಿ ಪಾಲನೆ ಮಾಡಬೇಕು. ಮತ ಎಣಿಕೆ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗೆದ್ದ ಅಭ್ಯರ್ಥಿ ಮೆರವಣಿಗೆ, ವಿಜಯೋತ್ಸವ ರ್ಯಾಲಿ ಮಾಡುವುದು ಹಾಗೂ ಪಟಾಕಿ ಹೊಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

       ಸಾರ್ವಜನಿಕರ ಅನುಕೂಲಕ್ಕಾಗಿ ಮತ ಎಣಿಕೆ ಕೇಂದ್ರದ ಕಾಲೇಜು ಮೈದಾನದಲ್ಲಿ ಪ್ರತಿ ಸುತ್ತಿನ ಮತ ಎಣಿಕೆಯ ವಿವರವನ್ನು ಧ್ವನಿವರ್ಧಕದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link