ಬೆಂಗಳೂರು
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮರಳಿ ಅಧಿಕಾರಕ್ಕೆ ಬಂದರೆ ಸ್ವಯಂಬಲದ ಮೇಲೆ ಸರ್ಕಾರ ರಚಿಸುವ ಸಲುವಾಗಿ ಮೈತ್ರಿಕೂಟದ ಪಾಳೆಯದ ಮೇಲೆ ಸಣ್ಣ ಮಟ್ಟದ ಸರ್ಜಿಕಲ್ ಸ್ಟ್ರೈಕ್ ನಡೆಸಲು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಸಜ್ಜಾಗಿದ್ದಾರೆ.ಎನ್‍ಡಿಎ ಅಧಿಕಾರಕ್ಕೆ ಬಂದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದಲ್ಲಿ ಅಸಮಾಧಾನ ಭುಗಿಲೇಳಲಿದ್ದು ಇದರ ಪರಿಣಾಮವಾಗಿ ಸರ್ಕಾರ ಉರುಳುವುದು ಬಹುತೇಕ ನಿಶ್ಚಿತ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.
ಈ ಹಿನ್ನೆಲೆಯಲ್ಲಿಯೇ ತಮಗಿರುವ ಸಧ್ಯದ ಬಲ ಮತ್ತು ಉಪಚುನಾವಣೆಯ ನಂತರ ದಕ್ಕಲಿರುವ ಬಲದ ಆಧಾರದ ಮೇಲೆ ಸಣ್ಣ ಮಟ್ಟದ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಅಧಿಕಾರ ಹಿಡಿಯಬೇಕು ಎಂಬುದು ಅವರ ಲೆಕ್ಕಾಚಾರ.ಇವತ್ತಿನ ಸ್ಥಿತಿಯಲ್ಲಿ ಬಿಜೆಪಿಗೆ ನೂರಾ ನಾಲ್ಕು ಮಂದಿ ಶಾಸಕರ ಬಲವಿದ್ದು,ಮೈತ್ರಿಕೂಟ ಸರ್ಕಾರ ಉರುಳಿದರೆ ಶಂಕರ್ ಸೇರಿದಂತೆ ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡುತ್ತಾರೆ.
ಉಳಿದಂತೆ ಬಹುಜನಸಮಾಜ ಪಕ್ಷದ ವತಿಯಿಂದ ಗೆದ್ದು ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮತ್ತು ಜೆಡಿಎಸ್ ಪಕ್ಷದವರು ಮಮತಾ ಬ್ಯಾನರ್ಜಿ ಅವರನ್ನು ಓಲೈಸಲು ಶುರು ಮಾಡಿದ ಕಾರಣದಿಂದ ಅಸಮಾಧಾನಗೊಂಡ ಬಿಎಸ್‍ಪಿ ನಾಯಕಿ ಮಾಯಾವತಿಯವರ ಸೂಚನೆಯ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹೇಶ್ ಕೂಡಾ ತಮ್ಮ ಜತೆ ಬರುತ್ತಾರೆ.ಅಲ್ಲಿಗೆ ರಾಜ್ಯ ಬಿಜೆಪಿಯ ಬಲ ನೂರಾ ಏಳಕ್ಕೇರುತ್ತದೆ.ಈ ಮಧ್ಯೆ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿಯ ಗೆಲುವು ಬಹುತೇಕ ನಿಶ್ಚಿತ.ಹೀಗಾಗಿ ಪಕ್ಷದ ಬಲ ನೂರಾ ಒಂಭತ್ತಕ್ಕೇರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ಬೇಕಿರುವುದು ಕೇವಲ ನಾಲ್ಕು ಶಾಸಕರ ಬಲ ಮಾತ್ರ.ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಬಿಜೆಪಿಗೆ ಬರಲು ಬೇರೆ ಪಕ್ಷಗಳ ಶಾಸಕರಿಗೆ ಸಾಧ್ಯವಿಲ್ಲದ ಕಾರಣದಿಂದಾಗಿ ಅವರು ರಾಜೀನಾಮೆ ನೀಡಿಯೇ ಬರಬೇಕಾಗುತ್ತದೆ.
ಆದರೆ ತಕ್ಷಣದ ಸ್ಥಿತಿಯಲ್ಲಿ ರಮೇಶ್ ಜಾರಕಿಹೊಳಿ,ನಾಗೇಂದ್ರ,ಬಿ.ಸಿ.ಪಾಟೀಲ್ ಸೇರಿದಂತೆ ಏಳು ಮಂದಿ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ತಯಾರಾಗಿದ್ದು ಕೇಂದ್ರದಲ್ಲಿ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಹಿಂಜರಿಕೆಯಿಲ್ಲದೆ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸಲು ಸಜ್ಜಾಗುತ್ತಾರೆ.
ಅಲ್ಲಿಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕಿರುವ ಬಹುಮತ ಕುಸಿದು ಹೋಗಿ ಅದು ಪತನವಾಗುತ್ತದೆ.ಆಗ ಅಧಿಕಾರ ಹಿಡಿಯುವ ಬಿಜೆಪಿ ತನಗಿರುವ ಬಲದಿಂದ ರಾಜೀನಾಮೆ ನೀಡಿ ಬರುವ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಬಹುದು ಎಂಬುದು ಯಡಿಯೂರಪ್ಪ ಲೆಕ್ಕಾಚಾರ.