ತುಮಕೂರು:
ಪ್ರಸಾದದ ಊಟ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ದುರಾದೃಷ್ಟವಶಾತ್ ಘಟನೆಯಲ್ಲಿ ಒಬ್ಬ ಬಾಲಕ ಮೃತಪಟ್ಟಿರುವ ಘಟನೆ ಪಾವಗಡ ತಾಲೂಕಿನ ನಿಡಗಲ್ಲು ವೀರಭದ್ರ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭದ್ರ ಸ್ವಾಮಿ ದೇವಾಲಯಕ್ಕೆ ಶಿರಾ ಮೂಲದ ಭಕ್ತರು ತೆರಳಿದ್ದರು. ಈ ವೇಳೆ, ಪ್ರಸಾದದ ಊಟ ಸೇವಿಸಿದ ಕೆಲ ಹೊತ್ತಿನಲ್ಲೇ ಹಲವರಿಗೆ ವಾಂತಿ ಭೇದಿ ಆರಂಭವಾಗಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಈ ಘಟನೆಯಲ್ಲಿ ಬಾಲಕ ವೀರಭದ್ರ (11) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಭಕ್ತರು ಅಡುಗೆಗೆ ನೀರಿಲ್ಲದ ಕಾರಣ ತೊಟ್ಟಿಯ ನೀರು ಬಳಸಿ ಅಡುಗೆ ಮಾಡಿದ್ದರು. ಈ ಹಿನ್ನೆಲೆ ತೊಟ್ಟಿ ನೀರಿನಿಂದ ತೊಂದರೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿರಾ ಭಾಗದ ಭಕ್ತರಾದ ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತ, ವಿರೂಪಾಕ್ಷ ಎಂಬುವರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಪಾವಗಡ ತಾಲೂಕಿನ ನಿಡಗಲ್ಲು ವೀರಭದ್ರ ಸ್ವಾಮಿ ದೇವಾಲಯಕ್ಕೆ ಬಂದು ಮಂಗಳವಾರ ವಾಪಾಸು ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದದ ದುರಂತ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದು ರಾಜ್ಯದಲ್ಲಿ ನಡೆದ ಮತ್ತೊಂದು ಪ್ರಸಾದ ದುರಂತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








