ಹುಳಿಯಾರು:
ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಕುಡಿಯುವ ನೀರಿನ ಜೊತೆ ಕೊಳಚೆ ನೀರು ಪ್ರೀಯಾಗಿ ಕೊಡುತ್ತಿದ್ದಾರೆ! ಛೀ. ಏನ್ದ್ರಿ ಇದು ಅಸಹ್ಯ ಸುದ್ದಿ ಎನ್ನುತ್ತಿದ್ದೀರಾ? ಆದರೆ ಇಲ್ಲಿನ ಪಂಚಾಯ್ತಿಗೆ ಇದು ಅಸಹ್ಯ ಅಲ್ಲವೇ ಅಲ್ಲ. ಅಸಹ್ಯ ಎನ್ನಿಸಿದಿದ್ದರೆ ಪೈಪ್ ಹೊಡೆದು ವಾರವಾದರೂ ದುರಸ್ತಿ ಮಾಡದೆ ನಿರ್ಲಕ್ಷ್ಯಿಸುತ್ತಿರಲಿಲ್ಲ.
ಹೌದು, ದಸೂಡಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ರೈಸಿಗೆ ಲೈನ್ ಚರಂಡಿ ಒಳಗೆ ಹೋಗಿದೆ. ಇದು ಮಾರುತಿ ಬಡಾವಣೆಯ ಹೈಸ್ಕೂಲ್ ರಸ್ತೆಯ ಅರಳಿ ಮರದ ಬಳಿ ಹೊಡೆದಿದೆ. ಪರಿಣಾಮ ಚರಂಡಿಯ ಕೊಳಚೆ ನೀರು ಪೈಪ್ ಮೂಲಕ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದು ದುರ್ನಾತ ಬೀರುತ್ತಿರುವ, ಕಲುಷಿತ ನೀರು ನೋಡಿ ಜನ ಗ್ರಾಪಂಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ರೈಸಿಗೆ ಲೈನ್ ಮೂಲಕವೇ ಗ್ರಾಮದ ಮನೆಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಸಿಸ್ಟನ್‍ಗಳಿಗೂ ನೀರು ಕೊಡಲಾಗುತ್ತಿದೆ. ಹಾಗಾಗಿ ಗ್ರಾಮದ ಪ್ರತಿಯೊಬ್ಬರ ಮನೆಗೂ ಈ ಕಲುಷಿತ ನೀರು ಸರಬರಾಜು ಆಗುತ್ತಿದ್ದು ಚರಂಡಿ ನೀರು ಬರುತ್ತಿರುವ ಬಗ್ಗೆ ಅರಿವಿಲ್ಲದವರು ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಕೂಡ ಕಾಡುತ್ತಿದೆ.
ಅಲ್ಲದೆ ಗ್ರಾಮದಲ್ಲಿ ಈಗಾಗಲೇ ಎರಡ್ಮೂರು ಕೊಳವೆಬಾವಿಗಳು ಬತ್ತಿಹೋಗಿದೆ. ಬಿಸಿಲ ಝಳ ಹೆಚ್ಚಿದ್ದು ನೀರಿನ ಬೇಡಿಕೆ ಹೆಚ್ಚಾಗಿದೆ. ಮಳೆಯಾಗದೆ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆ ಸಹ ಇದಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಿತ್ಯ ಹೊಡೆದಿರುವ ಪೈಪ್‍ನಲ್ಲಿ ನೀರು ವ್ಯರ್ಥವಾಗಿ ಚರಂಡಿಯಲ್ಲಿ ಹರಿಯುತ್ತಿದೆ.
ಆದರೆ ಗ್ರಾಪಂನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಚುನಾವಣೆಯ ಸಬೂನು ಹೇಳಿ ದುರಸ್ತಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ. ಮೇಲಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ಹೊಡೆದಿರುವ ಪೈಪ್ ದುರಸ್ತಿ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ