ಬಿಜೆಪಿಯಿಂದ ಎಚ್.ಎಸ್.ನಾಗರಾಜ್ ತಂಡ ಉಚ್ಛಾಟನೆ

ದಾವಣಗೆರೆ:

       ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹಿನ್ನಡೆ ತರಬೇಕೆಂಬ ಹುನ್ನಾರದಿಂದ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಎಚ್.ಎಸ್.ನಾಗರಾಜ್ ಮತ್ತು ಅವರ ತಂಡವನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.

       ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಸ್ವಂತ ಹಿತಾಸಕ್ತಿಗಾಗಿ, ಕುಂಟು ನೆಪ ಹೇಳಿಕೊಂಡು, ಸಮಾನ ಮನಸ್ಕರ ವೇದಿಕೆ ಕಟ್ಟಿಕೊಂಡು ನಮ್ಮ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಮತ ಚಲಾಯಿಸುವಂತೆ ಹೇಳಿ, ಕಾರ್ಯಕರ್ತರಲ್ಲಿ ಗೊಂದ ಮೂಡಿಸಿದ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಎಚ್.ಎಸ್.ನಾಗರಾಜ್ ಹಾಗೂ ಅವರ ತಂಡದಲ್ಲಿದ್ದ ಏಳೆಂಟು ಜನರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ವಜಾಗೊಳಿಸಿ, ಅವರೆಲ್ಲರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ. ನಮ್ಮದು ಶಿಸ್ತಿನ ಪಕ್ಷವಾಗಿದ್ದು, ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಕೋಟಾ ನೋಟು ಕೊಟ್ಟಿದ್ರಾ?:

      ಶಾಸಕ ಶಾಮನೂರು ಶಿವಶಂಕರಪ್ಪನವರು ಬಿಜೆಪಿಯವರು ಹಣ ಹಂಚಿ ಗೆಲುವು ಸಾಧಿಸಿದ್ದಾರೆಂದು ಹೇಳಿದ್ದಾರೆ. ನಾನು ಸಹ ಅವರ ವಿರುದ್ಧ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸುದ್ದೇನೆ. ಏಕೆ ಆ ಚುನಾವಣೆಗಳಲ್ಲಿ ಎಸ್ಸೆಸ್ ಕೋಟಾ ನೋಟು ಹಂಚಿ ಗೆದ್ದಿದ್ರಾ? ಎಂದು ಪ್ರಶ್ನಿಸಿದರು.

ಇಲ್ಲಿದ್ದಾರಂತಾ ಹುಡಕಬೇಕು:

      ಇದೇ ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ, ಶಾಶ್ವತವಾಗಿ ಮನೆಗೆ ಹೋಗುತ್ತಾರೆ ಎಂದಿದ್ದರು. ಆದರೆ, ಈಗ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಮೇಲೆ, ಇವತ್ತು ಅವರು (ಶಾಮನೂರು ಶಿವಶಂಕರಪ್ಪ) ಎಲ್ಲಿದ್ದಾರೆಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.

ತೀರ್ಪಿಗೆ ತಲೆ ಬಾಗಿ:

    ನಾವು ಮೊದಲು ಚುನಾವಣೆಯಲ್ಲಿ ಎರಡು ಸ್ಥಾನ ಪಡೆದ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ದೋ ನಂಬರ್ ಪಾರ್ಟಿ ಎಂಬುದಾಗಿ ಹಂಗಿಸುತ್ತಿದ್ದರು. ಆದರೆ, ಇವತ್ತು ನಮ್ಮ ಪಕ್ಷ 303 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್‍ನವರು ಸುಮ್ಮನ್ನೇ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರ ಬದಲು, ಜನಕೊಟ್ಟ ತೀರ್ಪಿಗೆ ತಲೆ ಬಾಗಬೇಕೆಂದು ಸಲಹೆ ನೀಡಿದರು.

       ಚುನಾವಣೆಯಲ್ಲಿ ನಮ್ಮ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿ, ಮತ ಕೇಳಿದಕ್ಕೆ ಕಾಂಗ್ರೆಸ್‍ನವರು ಇಲ್ಲದನ್ನೆಲ್ಲಾ ಮಾತನಾಡಿದರು. ನಮಗೆ ನಮ್ಮ ತಂದೆಯ ಹೆಸರು ಹೇಳಿ ಅಭ್ಯಾಸ ಇದೆಯೇ ಹೊರತು, ಅವರಂತೆ ದುಡ್ಡು ಇರುವವರಿಗೆ ಅಪ್ಪಾಜಿ ಎಂಬುದಾಗಿ ಕರೆಯುವ ಅಭ್ಯಾಸವಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಕುಟುಕಿದರು.

ಹರಕೆಯ ಕುರಿ ಮಾಡಿದ್ರು:

      ಮಂಜಪ್ಪನವರನ್ನು ಹರಕೆಯ ಕುರಿ ಮಾಡುತ್ತಾರೆಂಬುದನ್ನು ನಾನು ಮೊದಲೇ ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧವಾಗಿದ್ದು, ನಿಜಕ್ಕೂ ಕಾಂಗ್ರೆಸ್ ಮುಖಂಡರು ಹೆಚ್.ಬಿ.ಮಂಜಪ್ಪನವರನ್ನು ಚುನಾವಣೆಗೆ ನಿಲ್ಲಿಸಿ ಹರಕೆಯ ಕುರಿ ಮಾಡಿದ್ದಾರೆ. ಅಲ್ಲದೇ, ಈ ಮೂಲಕ ತಮ್ಮನ್ನು ಬಿಟ್ಟು ಬೇರೆರೀತಿಯ ಆಟವಾಡಿದರೇ, ಹೇಗೆ ಹೀನಾಯವಾಗಿ ಸೋಲುತ್ತಾರೆ ಹಾಗೂ ಚನ್ನಯ್ಯ ಒಡೆಯರ್ ಅವರನ್ನು ಹಿಂದೆ ಸೋಲಿಸಿದನ್ನು ಮರೆ ಮಾಚಲು ಕುರುಬ ಸಮುದಾಯದ ಮಂಜಪ್ಪನವರಿಗೆ ಟಿಕೆಟ್ ಕೊಡಿಸಿದ್ದೇವೆ ಎಂಬ ಎರಡು ಸಂದೇಶ ನೀಡುವ ಮೂಲಕ ಎಸ್ಸೆಸ್ ಹಾಗೂ ಎಸ್ಸೆಸ್ಸೆಂ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಒಡೆದಿದ್ದಾರೆಂದು ಆರೋಪಿಸಿದರು.

      ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು, ಎಲ್ಲ ಮೋರ್ಚಾಗಳ ಪದಾಧಿಕಾರಿಗಳು, ಮತದಾರರು ಸತತ ನಾಲ್ಕನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದೇಶ್ವರ್ ಅವರಿಗೆ ಆಶೀರ್ವಧಿಸಿದ್ದು, ಎಲ್ಲರಿಗೂ ಪಕ್ಷ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

      ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಬಿ.ರಮೇಶ್ ನಾಯ್ಕ, ಎನ್.ರಾಜಶೇಖರ್ , ಮುಖಂಡರುಗಳಾದ ಹೆಚ್.ಎಂ.ರುದ್ರಮುನಿಸ್ವಾಮಿ, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ, ಪ್ರಭು ಕಲ್ಬುರ್ಗಿ, ಟಿಂಕರ್ ಮಂಜಣ್ಣ, ಆನಂದರಾವ್ ಸಿಂಧೆ, ಧನುಷ್‍ರೆಡ್ಡಿ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link