ಹುಳಿಯಾರು:
ಬೆಂಕಿ ಆಕಸ್ಮಿಕದಿಂದ 10 ಸಾವಿರ ತೆಂಗಿನ ಮಟ್ಟೆ ಭಸ್ಮವಾದ ಘಟನೆ ಹುಳಿಯಾರು ಸಮೀಪದ ಜೋಡಿ ತಿಮ್ಲಾಪುರ ಗೇಟ್ ಬಳಿ ಜರುಗಿದೆ.ಹೊಸದುರ್ಗದಿಂದ ತಮಿಳುನಾಡಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ. ತಮಿಳುನಾಡಿನ ಕಾಯರ್ ಫ್ಯಾಕ್ಟರಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿರುವಾಗ ಇದಕ್ಕಿದ್ದ ಹಾಗೆ ಮಟ್ಟೆಗಳು ಹೊತ್ತಿ ಉರಿಯುತ್ತಿದ್ದವು.
ಹಿಂಭಾಗದಿಂದ ಬರುತ್ತಿದ್ದ ವಾಹನದವರು ಇದನ್ನು ಗಮನಿಸಿ ಲಾರಿ ಚಾಲಕನಿಗೆ ತಿಳಿಸಿದ್ದಾರೆ.ತಕ್ಷಣ ಚಲಿಸುತ್ತಿದ್ದ ಲಾರಿ ನಿಲ್ಲಿಸಿ ಬಂದು ನೋಡಲಾಗಿ ತೆಂಗಿನ ಮಟ್ಟಗೆ ಬೆಂಕಿ ತಗುಲಿ ಹೊತ್ತು ಉರಿಯುತ್ತಿತ್ತು. ತಕ್ಷಣ ಹೊತ್ತಿ ಉರಿಯುತ್ತಿದ್ದ ಹಿಂಭಾಗದ ಮಟ್ಟೆಗಳನ್ನು ರಸ್ತೆಯಲ್ಲಿ ಸುರಿದಿದ್ದಾರೆ. ಆದರೆ ಮಟ್ಟೆ ಲೋಡಿನ ಮಧ್ಯಭಾಗದಲ್ಲೂ ಬೆಂಕಿ ತಗುಲಿ ಹೊತ್ತು ಉರಿಯುತ್ತಿದ್ದು ಬೆಂಕಿ ನಂದಿಸುವುದು ಅಸಾಧ್ಯ ಎನ್ನುವಂತ್ತಾಗಿತ್ತು.
ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದು ಸಮೀಪದ ಕೊಳವೆಬಾವಿಯುಳ್ಳ ಜಮೀನಿನ ಬಳಿ ಲಾರಿ ಹೊಡೆಸಿ ಜಮೀನು ಮಾಲೀಕರ ಮನವೊಲಿಸಿ ಕೊಳವೆಬಾವಿಯ ನೀರು ಬಿಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆಗೆ ಸರಿಸುಮಾರು 10 ಸಾವಿರದಷ್ಟು ತೆಂಗಿನ ಮಟ್ಟೆಗಳು ಸುಟ್ಟು ಭಸ್ಮವಾಗಿದ್ದವು.