ಮಾನವ ಜನ್ಮಕ್ಕಿಂತ ಮಾನವೀಯತೆಯೇ ದೊಡ್ಡದು

ಚಿತ್ರದುರ್ಗ

    ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು. ಆ ಮಾನವೀಯ ಗುಣವನ್ನು ಅಳವಡಿಸಿಕೊಂಡು ಕಾಯಕ ಮಾಡಿದರೆ ಜೀವನದಲ್ಲಿ ಅತ್ಯುನ್ನತ ಎತ್ತರಕ್ಕೆ ಬೆಳೆಯುತ್ತೀರಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ನಗರದ ಎಸ್‍ಜೆಎಂಐಟಿ ಕ್ಯಾಂಪಸ್‍ನ ಬಿಚ್ಚುಗತ್ತಿ ಭರಮಣ್ಣ ನಾಯಕ ಸಭಾ ಭವನದಲ್ಲಿ ಆಯೋಜಿಸಿದ್ದ ಎಸ್.ಜೆ.ಎಂ. ನರ್ಸಿಂಗ್ ವಿಜ್ಞಾನ ಕಾಲೇಜಿನ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು

      ಕರುಣೆ ತುಂಬಿದ ಹೃದಯದಿಂದ ವಿನಯ ತುಂಬಿದ ಕೈಗಳಿಂದ ಅತ್ಯಂತ ಪ್ರೀತಿಯಿಂದ ರೋಗಿಗಳ ಸೇವೆಯನ್ನು ನೀವು ಮಾಡಬೇಕು. ಈ ಮೂಲಕ ಬಸವಣ್ಣನವರ ದಯೆಯೇ ಧರ್ಮದ ಮೂಲವಯ್ಯ ಎಂಬ ಮಾತನ್ನು ಅಳವಡಿಸಿಕೊಳ್ಳಬೇಕು. ಹೀಗೆ ನೀವು ಕಾರ್ಯ ನಿರ್ವಹಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ನೀವೂ ಮಹಾನ್ ವ್ಯಕ್ತಿಗಳಾಗಲಿದ್ದೀರಿ. ಬದುಕನ್ನು ಸಾರ್ಥಕಗೊಳಿಸಿಕೊಳ್ಳಲಿದ್ದೀರಿ. ರೋಗಿಗಳನ್ನು ನೋಡುವಾಗ ನೀವು ಕರುಣೆಯಿಂದ ಅವರನ್ನು ಗಮನಿಸಬೇಕು.

      ನಿಮ್ಮ ಸೇವೆಯನ್ನು ನೀಡಬೇಕು ಎಂದರು.ಹಾಗೆಯೇ ನಿಮ್ಮ ಕಾರ್ಯದಲ್ಲಿ ಸದಾ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಿ. ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ. ಅದಕ್ಕಾಗಿ ನೀವು ಸ್ವಯಂ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ನೀವು ವಿನಮ್ರತೆಯಿಂದ ಕೆಲಸ ಮಾಡಲು ಸಾಧ್ಯ. ಈ ಗುಣಗಳಿಂದಾಗಿಯೇ ಬಸವಣ್ಣ, ಗಾಂಧೀಜಿ, ಮದರ್ ತೆರೇಸಾ, ಅಂಬೇಡ್ಕರ್ ಇನ್ನು ಮುಂತಾದವರು ಮಹನೀಯರೆನಿಸಿದ್ದಾರೆ.

      ಹಾಗೆಯೇ ನಿಮ್ಮ ಕಾರ್ಯದಲ್ಲಿ ನಿಮಗೆ ಬದ್ಧತೆಯಿರಬೇಕು. ಬದ್ಧತೆಯಿಂದ ಏಕಾಗ್ರತೆಯಿಂದ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ನಿಮ್ಮ ಜ್ಞಾನವನ್ನು ಸದಾ ಹೆಚ್ಚಿಸಿಕೊಳ್ಳಿ ಎಂದು ನೆರೆದಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶರಣರು ಹೇಳಿದರು.ಮೊದಮೊದಲು ಧಾರ್ಮಿಕ ಕ್ಷೇತ್ರಗಳಿಗೆ ಗಮನ ನೀಡಿದ ಶ್ರೀಮಠವು ಇಂದು ಆಸ್ಪತ್ರೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಿ ಮಾನವ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಮಾನವೀಯ ಮೌಲ್ಯಯುತವಾದ ಮಹೋನ್ನತ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದು ಶರಣರು ನುಡಿದರು.

       ಮುಖ್ಯಅತಿಥಿಗಳಾಗಿ ಆಗಮಿಸಿದ್ದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್. ಸಚ್ಚಿದಾನಂದ ಅವರು ಮಾತನಾಡುತ್ತ, 25 ವರ್ಷಗಳಿಂದ ನರ್ಸಿಂಗ್ ಕಾಲೇಜನ್ನು ನಡೆಸಿಕೊಂಡು ಬರುವುದೆಂದರೆ ಸುಲಭದ ಕಾರ್ಯವಲ್ಲ. ಸಾಕಷ್ಟು ಪರಿಶ್ರಮ, ಆಸಕ್ತಿ ಮತ್ತು ತಾಳ್ಮೆ ಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಎಸ್.ಜೆ.ಎಂ. ನರ್ಸಿಂಗ್ ಕಾಲೇಜು ನಿಜವಾಗಿಯೂ ಯಶಸ್ವಿಯಾಗಿದೆ ಎಂದರು

       ನಾವೆಲ್ಲ ಸಮಾಜ ಜೀವಿಗಳು. ಹಾಗಾಗಿ ನಾವು ಮಾಡುವ ಕಾರ್ಯವು ಸಮಾಜಮುಖಿಯಾಗಿರಬೇಕು. ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗಲೇ ನಾವು ಕಲಿತ ವಿದ್ಯೆಗೆ ಬೆಲೆ ಬರುವುದು. ನಮ್ಮ ಕಲಿಕೆ ಸಾರ್ಥಕವಾಗುವುದು. ಶುಶ್ರೂಷಕರು ಅತ್ಯಂತ ಮೌಲ್ಯಯುತವಾದ ಸೇವೆಯನ್ನು ಇಡೀ ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ನೀಡುತ್ತಿದ್ದಾರೆ. ಹಾಗಾಗಿ ವೈದ್ಯರ ಪಾತ್ರದಷ್ಟೇ ಶುಶ್ರೂಷಕರ ಪಾತ್ರವೂ ಮುಖ್ಯವಾಗಿರುತ್ತದೆ.

       ಇಂದು ಉತ್ತಮ ಶುಶ್ರೂಷಕರಿಗೆ ಪ್ರಪಂಚದಾದ್ಯಂತ ಬಹಳಷ್ಟು ಬೇಡಿಕೆಯಿದೆ. ಹಾಗಾಗಿ ನಿಮ್ಮ ಕಲಿಕೆಯನ್ನು ನೀವು ಶಿಸ್ತುಬದ್ಧವಾಗಿ ನಡೆಸಿ ಯಶಸ್ವಿಯಾಗಿ ಎಂದು ಹೇಳುತ್ತಾ, ಕಾಲೇಜಿನ ಎಲ್ಲರಿಗೂ ಶುಭಾಷಯಗಳನ್ನು ಕೋರಿದರು.ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಶ್ರೀಮತಿ ಶಿವಮ್ಮ ಬಿ., ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಡಿಪ್ಲೋಮಾ ಇನ್ ನರ್ಸಿಂಗ್ ಎಕ್ಸಾಮಿನೇಷನ್ ಬೋರ್ಡ್ ಬೆಂಗಳೂರು, ಸೋಮಶೇಖರಯ್ಯ ಕಲ್ಮಠ್, ಸೆನೆಟ್ ಸದಸ್ಯರು, ಆರ್‍ಜಿಯುಹೆಚ್‍ಎಸ್‍ಸಿ., ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ನಿರ್ದೇಶಕರಾದ ಪಟೇಲ್ ಶಿವಕುಮಾರ್, ಶ್ರೀಮತಿ ರುದ್ರಾಣಿ ಗಂಗಾಧರ್, ಎಲ್.ಬಿ. ರಾಜಶೇಖರ್, ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸವಿತಾ ಎಸ್.ವಿ. ಹಾಗು ಈ ಹಿಂದಿನ ಪ್ರಾಂಶುಪಾಲರಾದ ಶ್ರೀಮತಿ ಸುಶೀಲ ಜ್ಯೋತಿ ವೇದಿಕೆಯಲ್ಲಿದ್ದರು.
ಕು| ಸ್ನೇಹಾಳ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಪನ್ಯಾಸಕ ಬಸವರಾಜ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link