ಧೂಳು ಹಿಡಿಯುತ್ತಿರುವ ಕಾಮಗಾರಿಗಳು ..!!!

ತುಮಕೂರು

ವಿಶೇಷ ವರದಿ:ರಾಕೇಶ್.ವಿ.

      ತುಮಕೂರನ್ನು ಸ್ಮಾರ್ಟ್‍ಸಿಟಿಯಾಗಿಸುವ ದೃಷ್ಠಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಗರದಾದ್ಯಂತ ನಡೆಯುತ್ತಿವೆ. ಜೊತೆಗೆ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದಲೂ ನಗರದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಾದರೂ ಕೆಲ ಕಾಮಗಾರಿಗಳಿಂದ ಕೆಲವೊಂದು ಸಮಸ್ಯೆಗಳು ಉಂಟಾಗುತ್ತಿದ್ದು, ನಗರದ ಜನತೆ ಧೂಳಿನ ನಡುವೆ ವಾಹನ ಚಾಲನೆ ಮಾಡಬೇಕಾಗುತ್ತಿರುವುದು ದುರ್ದೈವವೇ ಸರಿ.

     ನಗರದ ಬನಶಂಕರಿ, ಮೆಳೆಕೋಟೆ, ಚಿಕ್ಕಪೇಟೆ, ಮರಳೂರು ದಿಣ್ಣೆ, ಗಾಂಧಿನಗರ, ಕೋತಿತೋಪು, ಜಯನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿವಿಧ ಸ್ಮಾರ್ಟ್ ಸಿಟಿ ಕಾಮಗಾರಿಗಳ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಕಾಮಗಾರಿ ಪೂರ್ಣಗೊಂಡ ನಂತರ, ರಸ್ತೆಯನ್ನು ಸರಿಯಾಗಿ ಮುಚ್ಚದೆ ಹೋಗುತ್ತಿರುವುದರಿಂದ ಆ ರಸ್ತೆಗಳು ಸಂಪೂರ್ಣವಾಗಿ ಧೂಳುಮಯವಾಗಿವೆ. ಇದರಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ.

ರಸ್ತೆ ಅಗೆಯಲು ಕಾಮಗಾರಿ ನೆಪ

     ಮಹಾನಗರ ಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ಈಗಾಗಲೇ ಸ್ಮಾರ್ಟ್‍ಸಿಟಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರ ಜೊತೆಗೆ ಗ್ಯಾಸ್ ಪೈಪ್‍ಲೈನ್, ಯುಜಿಡಿ, ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯೂ ಒಂದಾಗಿದೆ. ಹೀಗೆ ವಿವಿಧ ಪ್ರದೇಶದಗಳಲ್ಲಿ ಒಂದಲ್ಲಾ ಒಂದು ಕಾಮಗಾರಿಗಳ ನೆಪದಲ್ಲಿ ರಸ್ತೆಗಳನ್ನು ಅಗೆಯಲಾಗುತ್ತಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮುಚ್ಚುತ್ತಿಲ್ಲ ಎಂಬುದು ಸ್ಥಳೀಯರ ಆರೋಪಗಳಾಗಿವೆ.

      ತುಮಕೂರಿನ ಬಹುತೇಕ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಲಾಗಿದೆ. ಅಂತೆಯೇ ತುಮಕೂರು ನಗರದಲ್ಲಿಯೂ ನೀರಿಗೆ ಹಾಹಾಕಾರ ಉಂಟಾಗಿದೆ. ಬೇಸಿಗೆ ಕಾಲ ಮುಗಿಯುತ್ತಾ ಬಂದರೂ ಬಿಸಿಲಿನ ಪರಿಣಾಮ ಮಾತ್ರ ಕಡಿಮೆಯಾಗುತ್ತಿಲ್ಲ. ಬಿಸಿಲಿನ ಬೇಗೆಗೆ ಜನ ಜಾನುವಾರುಗಳು ತತ್ತರಿಸಿವೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದರೂ ಜನರಿಗೆ ಕುಡಿಯುವ ನೀರು ಮಾತ್ರ ಸಿಗುತ್ತಿಲ್ಲ. ಆದರೆ ಜನರಿಗೆ ಉಚಿತವಾಗಿ, ಕಾಣಿಕೆಗಳಾಗಿ ರೋಗಗಳು ದೊರೆಯುತ್ತಿವೆ. ರಸ್ತೆಯ ಅಗೆತದಿಂದ ಹೊರಬರುವ ಧೂಳಿನಿಂದ ಜನರಿಗೆ ಕಾಯಿಲೆಗಳು ದೊರೆಯುತ್ತಿರುವುದು ಶೋಚನೀಯವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ

     ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಗಾರ್ಡನ್‍ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಪ್ರಾರಂಭ ಮಾಡಲಾದ ಒಳಚರಂಡಿ ಕಾಮಗಾರಿಯೂ ಇನ್ನೂ ನಡೆಯುತ್ತಲೇ ಇದ್ದು, ಮೂರು ತಿಂಗಳಿಂದ ಈ ರಸ್ತೆಯು ಬಂದ್ ಮಾಡಲಾಗಿತ್ತು. ಇದರಿಂದ ಜನರಿಗೆ ಓಡಾಡಲು ತೀವ್ರ ಸಮಸ್ಯೆ ಉಂಟಾಗಿತ್ತು. ಇತ್ತೀಚೆಗೆ ಆ ರಸ್ತೆಯಲ್ಲಿ ಹಾಕಲಾಗಿದ್ದ ಮಣ್ಣಿನ ಗುಡ್ಡೆಯನ್ನು ಸಡಿಲ ಮಾಡಿ ದ್ವಿಚಕ್ರವಾಹನಗಳು, ಆಟೋರಿಕ್ಷಾಗಳು ಓಡಾಡುತ್ತಿವೆ ಬಿಟ್ಟರೆ ಬಸ್‍ಗಳ ಸಂಚಾರಕ್ಕೆ ಇನ್ನೂ ಅನುಕೂಲ ಮಾಡಲಾಗಿಲ್ಲ.

ಹೆಚ್ಚಿನ ಆಳ ತೋಡಲಾದ ಹಳ್ಳ

       ಕಾಮಗಾರಿ ನೆಪದಲ್ಲಿ ಯುಜಿಡಿ ಪೈಪ್ ಹಾಕುವ ನೆಪದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬೃಹತ್ತಾದ ಗುಂಡಿಯನ್ನು ತೆಗೆದು ಅದರ ಮಣ್ಣನ್ನು ಅಲ್ಲಿಯೇ ಗುಡ್ಡೆಯನ್ನಾಗಿ ಮಾಡಿದ್ದಾರೆ. ಇಲ್ಲಿ ತೆಗೆದ ಗುಂಡಿಯಲ್ಲಿ ಚರಂಡಿ ನೀರು ನಿಂತುಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಈ ಗುಂಡಿಯ ಪಕ್ಕದಲ್ಲೇ ದ್ವಿಚಕ್ರ ವಾಹನಗಳು ಓಡಾಡುತ್ತಿದ್ದು, ಸ್ವಲ್ಪ ಯಾಮಾರಿದರೂ ಯಮಲೋಕಕ್ಕೆ ಪ್ರಯಾಣ ನಿಶ್ಚಿತ. ಗುಂಡಿಯ ಆಳ 10 ಅಡಿಗೂ ಹೆಚ್ಚಾಗಿದ್ದು, ಅದರಲ್ಲಿ ಕೊಳಚೆ ನೀರು ತುಂಬಿಕೊಂಡಿರುವುದು ಅಪಾಯಕ್ಕೆ ದಾರಿಯಾಗಿದೆ.
ಕಲ್ಲುಬಂಡೆಗಳಿಂದ ಕಾಮಗಾರಿ ವಿಳಂಭ

       ಒಳಚರಂಡಿ ಕಾಮಗಾರಿ ಮಾಡುವ ದೃಷ್ಠಿಯಿಂದ ಈ ಭಾಗದಲ್ಲಿ ಹಳ್ಳ ತೋಡಲಾಗಿದ್ದು, ಇಲ್ಲಿನ ರಸ್ತೆಯ ಕೆಳಭಾಗದಲ್ಲಿ ಬೃಹತ್ತಾದ ಕಲ್ಲು ಬಂಡೆಗಳು ಇರುವುದರಿಂದ ಆ ಕಲ್ಲು ಬಂಡೆಗಳನ್ನು ಹೊಡೆದು ನಂತರ ಯುಜಿಡಿ ಚೇಂಬರ್ ನಿರ್ಮಾಣ ಮಾಡಬೇಕಾಗಿತ್ತು. ಈಗ ರಸ್ತೆಯನ್ನು ನಿಲ್ಲಿಸಲು ಆಗುವುದಿಲ್ಲ ಎಂಬ ಕಾರಣದಿಂದ ಪೈಪುಗಳನ್ನು ತಳ್ಳುವ ಮಷಿನ್ ಮೂಲಕ ಪೈಪ್‍ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಈ ಕಾಮಗಾರಿ ವಿಳಂಭವಾಗಿದೆ ಎನ್ನುತ್ತಾರೆ ಅಲ್ಲಿ ಕೆಲಸ ಮಾಡುವ ಕೂಲಿಕಾರರು.

ವಾರ್ಡ್‍ಗಳಲ್ಲೂ ಇದೇ ಸಮಸ್ಯೆ

      ಕೇವಲ ಜಿಲ್ಲಾಧಿಕಾರಿ ಕಚೇರಿ ರಸ್ತೆ ಮಾತ್ರವಲ್ಲದೆ ನಗರದ ಅನೇಕ ಬಡಾವಣೆಗಳಲ್ಲೂ ಇದೇ ದೃಶ್ಯಗಳು ಕಂಡುಬರುತ್ತಿವೆ. ಪ್ರತೀ ವಾರ್ಡ್‍ಗಳಲ್ಲೂ, ಬಡಾವಣೆಗಳಲ್ಲೂ ಇರುವ ರಸ್ತೆಗಳನ್ನು ಅಗೆದು ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಒಮ್ಮೆ ಗ್ಯಾಸ್ ಲೈನ್ ಕಾಮಗಾರಿ ಎಂದು ಅಗೆದರೆ, ಇನ್ನೊಮ್ಮೆ 24 ಗಂಟೆಗಳ ನೀರು ಸರಬರಾಜು ಕಾಮಗಾರಿ ಎಂದು ಇನ್ನೊಮ್ಮೆ ಹೀಗೆ ವಿವಿಧ ಕಾರಣಗಳಿಂದ ರಸ್ತೆಗಳನ್ನು ಅಗೆಯಲಾಗುತ್ತಿದೆ. ಆದರೆ ಅದನ್ನು ಪೂರ್ಣಗೊಳಿಸಲು ಮಾತ್ರ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸಣ್ಣ ಕಾಮಗಾರಿಗಳನ್ನು ಪೂರ್ಣ ಮಾಡಲು ತಿಂಗಳುಗಟ್ಟಲೆ ಸಮಯ ತೆಗೆದುಕೊಂಡರೆ ಬೃಹತ್ ಮಟ್ಟದ ಕಾಮಗಾರಿಗಳನ್ನು ಮುಗಿಸಲು ಇನ್ನೆಷ್ಟು ವರ್ಷಗಳ ಸಮಯ ತೆಗೆದುಕೊಳ್ಳುತ್ತಾರೋ ಎಂಬುದು ಸಾರ್ವಜನಿಕರಲ್ಲಿ ಮೂಡಿದ ಪ್ರಶ್ನೆಗಳಾಗಿವೆ.

ತಿರುವು ಪಡೆಯಲಾಗದ ಬೃಹತ್ ವಾಹನಗಳು

      ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿನ ರಸ್ತೆಯಲ್ಲಿ ಬರುವ ಬೃಹತ್ ವಾಹನಗಳು ಟೌನ್‍ಹಾಲ್ ವೃತ್ತದ ಕಡೆಗೆ ಬರಲು ಅನುಕೂಲವಾಗಲೆಂದು ರಸ್ತೆಯ ವಿಭಜಕವನ್ನು ಹೊಡೆದು ದಾರಿ ಮಾಡಲಾಗಿದೆ. ವಿಭಜಕವನ್ನು ಹೊಡೆದಿದ್ದರಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಇದು ಒಂದು ಸಮಸ್ಯೆಯಾದರೆ ಇರುವ ಸಣ್ಣ ದಾರಿಯಿಂದ ಲಾರಿಗಳು, ಬಸ್‍ಗಳು ನಗರದ ಒಳಭಾಗಕ್ಕೆ ಬರುವಾಗ ಅಲ್ಲಿ ತಿರುವು ಪಡೆದುಕೊಳ್ಳಲು ಆಗದೆ ನಿತ್ಯ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ.


      ತುಮಕೂರು ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಆಗುತ್ತಿದೆ. ದಿನನಿತ್ಯ ಕಾಮಗಾರಿ ಹೆಸರಿನಲ್ಲಿ ರಸ್ತೆಗಳನ್ನು ಅಗೆಯುತ್ತಿದ್ದಾರೆ ಹೊರತು ಯಾವ ಕಾಮಗಾರಿ ಮಾಡಲಾಗುತ್ತಿದೆ. ಎಷ್ಡು ದಿನಗಳಲ್ಲಿ ಅದು ಪೂರ್ಣವಾಗುತ್ತದೆ ಎಂಬುದು ತಿಳಿಯುತ್ತಿಲ್ಲ. ಅಲ್ಲಲ್ಲಿ ಸ್ಮಾರ್ಟ್ ಸಿಟಿಯ ಕೆಲವೊಂದು ರಸ್ತೆಗಳ ಕಾಮಗಾರಿ ಬಗ್ಗೆ ನಾಮಫಲಕಗಳನ್ನು ಹಾಕಿದ್ದಾರೆ ಹೊರತು ಉಳಿದ ಕಡೆಗಳಲ್ಲಿ ಯಾವುದೇ ಮಾಹಿತಿ ಇಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಡೆಸುತ್ತಿರುವ ರಸ್ತೆ ಕಾಮಗಾರಿಗಳಿಂದ ನಿತ್ಯ ಸಾವಿರಾರು ವಾಹನ ಚಾಲಕರು ಧೂಳಿನಲ್ಲಿ ಮೂಗು ಮುಚ್ಚಿಕೊಂಡು ವಾಹನ ಚಾಲನೆ ಮಾಡುವಂತಾಗಿದೆ.

ನವೀನ್‍ಕುಮಾರ್, ದ್ವಿಚಕ್ರ ವಾಹನ ಸವಾರ.


      ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದುದರಿಂದ ಯಾವುದೇ ವಾರ್ಡ್‍ಗಳ ವೀಕ್ಷಣೆ ಮಾಡಲಾಗಿಲ್ಲ. ಇದೀಗ ಲೋಕಸಭಾ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಗಿದಿದೆ. ಜೂ.3ರ ಸೋಮವಾರದಿಂದ ಉಪಮೇಯರ್ ಹಾಗೂ ವಾರ್ಡ್‍ನ ಸದಸ್ಯರೊಂದಿಗೆ ಪ್ರತೀ ವಾರ್ಡ್ ವಾರ್ಡ್‍ಗೆ ಭೇಟಿ ನೀಡಿ, ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಯಾವ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂಬುದರ ಜೊತೆಗೆ ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಆಯುಕ್ತರ ಗಮನಕ್ಕೆ ತಂದು ಸಮಸ್ಯೆಗಳ ಇತ್ಯರ್ಥ ಮಾಡುತ್ತೇವೆ.

ಲಲಿತಾರವೀಶ್, ಪಾಲಿಕೆ ಮೇಯರ್


      ಮಹಾನಗರ ಪಾಲಿಕೆ ಹಾಗೂ ವಾಟರ್ ಬೋರ್ಡ್ ವತಿಯಿಂದ ಅಮೃತ್ ಯೋಜನೆಯಡಿಯಲ್ಲಿ ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ಯುಜಿಡಿ ಕಾಮಗಾರಿ ಮಾಡಲಾಗುತ್ತಿದೆ. ಎನ್‍ಇಪಿಎಸ್ ಪೊಲೀಸ್ ಠಾಣೆ, ಹೊರಪೇಟೆಯ ಹಳೆ ಕೆಇಬಿ ಕಚೇರಿ, ಗುಬ್ಬಿ ರಿಂಗ್ ರಸ್ತೆ, ಅಮಾನಿಕೆರೆಯ ರಸ್ತೆಯಲ್ಲಿ 6 ಮೀಟರ್ ಆಳದಲ್ಲಿ ಕಬ್ಬಿಣದ ಯುಜಿಡಿ ಪೈಪ್ ಅಳವಡಿಸುವ ಕಾಮಗಾರಿ ಮಾಡಲಾಗುತ್ತಿದೆ. ಟ್ರೆಂಚ್‍ಲೆಸ್ ಟೆಕ್ನಾಲಜಿ ಮೂಲಕ ಪೈಪ್‍ಗಳನ್ನು ಅಳವಡಿಸಲಾಗುತ್ತದೆ. ಪೈಪ್ ಆಗಮನಕ್ಕಾಗಿ ಕಾಯುತ್ತಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪುರ್ಣಗೊಳ್ಳಲ್ಲಿದೆ. ಅದೇ ರೀತಿ ಎರಡ್ಮೂರು ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ರಸ್ತೆ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಲಾಗುವುದು.

ಮುದ್ದುರಾಜಣ್ಣ, ಕಾರ್ಯಪಾಲಕ ಅಭಿಯಂತರರು,


ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link