ಚಳ್ಳಕೆರೆ
ಸಮಾಜದ ಪ್ರತಿಯೊಂದು ಸಮುದಾಯವೂ ತಮ್ಮದೇಯಾದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಮುದಾಯದ ಅಭಿವೃದ್ಧಿಯ ಜೊತೆಗೆ ಸಮಾಜವನ್ನು ಸಹ ಉತ್ತಮ ಸ್ಥಿತಿಯತ್ತ ಕೊಂಡೊಯಲು ಸಹಕಾರ ನೀಡುತ್ತವೆ. ಪೂಜ್ಯ ಭಗೀರಥ ಮಹರ್ಷಿಗಳು ಸಹ ಸದಾಕಾಲ ಎಲ್ಲಾ ಸಮುದಾಯಗಳ ಶ್ರೇಯಸ್ಸಿಗಾಗಿ ಶ್ರಮಿಸಿದವರು ಎಂದು ಹೊಸದುರ್ಗ ಭಗೀರಥಪೀಠದ ಪೂಜ್ಯ ಶ್ರೀ ಪುರುಷೋತ್ತಮಾನಂದಸ್ವಾಮೀಜಿ ತಿಳಿಸಿದರು.
ಅವರು ಶುಕ್ರವಾರ ಸಂಜೆ ದುಗ್ಗಾವರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಇಂದು ರಾಜ್ಯದಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಉಪ್ಪಾರ ಸಮಾಜದ ಬಂಧುಗಳು ನೆಲೆಸಿದ್ದು, ಯಾವುದೇ ಕಾರಣಕ್ಕೂ ಸರ್ಕಾರದೊಡನೆ ಸಂಘರ್ಷಕ್ಕೆ ಇಳಿಯದೇ ತಮ್ಮ ಸೌಲಭ್ಯಗಳಿಗಾಗಿ ಮನವಿ ಮಾಡುತ್ತಲೇ ಬಂದಿದ್ಧಾರೆ. ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮುಖಂಡರು ಉತ್ತಮ ಸಾಧನೆಗಳನ್ನು ಮಾಡಿದ್ದರೂ ಅವರು ನಿರೀಕ್ಷೆ ಮಾಡಿದ ಯಾವುದೇ ಸ್ಥಾನಮಾನಗಳು ಇನ್ನೂ ದೊರಕಿಲ್ಲ.
ಇಂದಿನ ವಾಸ್ತವ ಸ್ಥಿತಿಯಲ್ಲಿ ಯಾವುದೇ ಸಮುದಾಯ ಬೆಳೆವಣಿಗೆಯಾಗಬೇಕಾದಲ್ಲಿ ಆ ಸಮುದಾಯದಲ್ಲಿ ರಾಜಕೀಯ ಪ್ರಾತಿನಿತ್ಯದ ಅವಶ್ಯಕತೆ ಇದೆ. ನಮ್ಮಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಸಹ ರಾಜಕೀಯ ಶಕ್ತಿಯನ್ನು ಪಡೆಯುವಲ್ಲಿ ನಮಗೆ ಇಂದೂ ಸಾಧ್ಯವಾಗಿಲ್ಲ. ಅದ್ದರಿಂದ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಈ ಸಮುದಾಯವನ್ನು ಬಲವಾಗಿ ಸಂಘಟಿಸಲು ಎಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ನಾನು ಸಹ ಸದಾಕಾಲ ಸಮುದಾಯದೊಂದಿಗೆ ಬೆರೆತು ಕಾರ್ಯನಿರ್ವಹಿಸುವೆ. ಈ ಸಮುದಾಯ ರಾಜ್ಯದಲ್ಲಿ ಇನ್ನೂ ಶಕ್ತಿಶಾಲಿಯಾಗಿ ಬೆಳೆಯಬೇಕಿದೆ. ನಾವೆಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ನಾವು ನಿರೀಕ್ಷೆ ಮಾಡಿದ ಪ್ರತಿಫಲ ದೊರಕುವುದರಲ್ಲಿ ಅನುಮಾನವಿಲ್ಲ. ಇಂದು ಸಮಾಜದಲ್ಲಿ ಧೈವ ಭಕ್ತಿಯ ಜೊತೆಗೆ ದೇಶ ಭಕ್ತಿಯೂ ಸಹ ಉಜ್ವಲಗೊಳ್ಳುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಶ್ರದ್ದಾ ಭಕ್ತಿಯೊಂದಿಗೆ ದೇಶದ ಒಳಿತಿಗಾಗಿ ಶ್ರಮಿಸುವ ಮನೋಭಾವನೆಯನ್ನು ಹೊಂದಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ತಳಕು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಸಮಾಜದಲ್ಲಿ ಸುಖ, ಶಾಂತಿ ನೆಲೆಸಲು ಸ್ವಾಮೀಜಿಯವರ ದಿವ್ಯದೃಷ್ಠಿಯೇ ಕಾರಣವಾಗಿದೆ.ಪುರುಷೋತ್ತಮಾನಂದ ಸ್ವಾಮೀಜಿ ಸಹ ಜನಪರ ಕಾಳಜಿವುಳ್ಳ ಸ್ವಾಮೀಗಳಾಗಿದ್ದು, ಎಲ್ಲರನ್ನೂ ಗೌರವಿಸುವ ವಿಶೇಷ ಸದ್ಗುಣ ಅವರಲ್ಲಿದೆ ಎಂದರು. ಇಂದಿಗೂ ಸಹ ನಾವು ಎಲ್ಲರೊಂದಿಗೆ ಸಹ ಬಾಳ್ವೆಯನ್ನು ನಡೆಸುತ್ತಿರುವುದು ಇಂತಹ ಸ್ವಾಮೀಜಿಯವರ ಮಾರ್ಗದರ್ಶ ಮೂಲ ಪ್ರೇರಣೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮುದಾಯದ ಮುಖಂಡ ಎಲ್ಐಸಿ ದುಗ್ಗಾವರ ರಂಗಸ್ವಾಮಿ, ನಮ್ಮ ಗ್ರಾಮದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಇಡೀ ಗ್ರಾಮಕ್ಕೆ ಶೋಭೆ ತಂದಿದೆ. ಎಲ್ಲರೂ ಸಹ ಈ ಕಾರ್ಯಕ್ರಮಕ್ಕೆ ಉತ್ತಮ ಸಹಕಾರ ನೀಡಿದ್ದಾರೆ. ಮುಂದಿನ ಕಾರ್ಯತಂತ್ರಗಳ ಕಾರ್ಯನಿರ್ವಹಣೆಯಲ್ಲಿ ನಾವೆಲ್ಲರೂ ಸ್ವಾಮೀಜಿಯವರ ಮಾರ್ಗದರ್ಶನವನ್ನು ಅನುಸರಿಸೋಣವೆಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಎಸ್.ಯಲ್ಲಪ್ಪ ಮಾತನಾಡಿ, ತಾಲ್ಲೂಕಿನ ಉಪ್ಪಾರ ಸಮಾಜದ ಎಲ್ಲಾ ಬಂಧುಗಳಿಗೆ ಇದೊಂದು ಸುದಿನವಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಸ್ವಾಮೀಜಿಯವರ ಕಳಕಳಿಯನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಎಸ್.ನಾಗರಾಜು, ಬೆಂಗಳೂರು ಜಿಲ್ಲಾ ಅಧ್ಯಕ್ಷ ಸುನೀಲ್ ಕುಮಾರ್, ಬಳ್ಳಾರಿ ಜಿಲ್ಲಾಧ್ಯಕ್ಷ ಯರ್ರಿಸ್ವಾಮಿಉಪ್ಪಾರ, ರಾಜ್ಯ ಸಂಚಾಲಕ ಯು.ಹನುಮೇಶ್ಉಪ್ಪಾರ, ಗೌರವಾಧ್ಯಕ್ಷ ಡಿ.ಎಸ್.ಪರಮೇಶ್ವರಪ್ಪ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷೆ ಯಶೋಧಮ್ಮ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮೂರ್ತಿ, ಹಿರಿಯೂರು ಅಧ್ಯಕ್ಷ ನಿಂಗೇಶ್ಉಪ್ಪಾರ, ಕನಕದಾಸ್,ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ತಿಪ್ಪೇಸ್ವಾಮಿ, ರಂಗಪ್ಪ, ನೀಲಮ್ಮ, ಸಿದ್ದಗಂಗಮ್ಮ, ನೀಲಕಂಠಪ್ಪ, ಗೋವಿಂದಪ್ಪ, ಆರ್.ತಿಪ್ಪೇಸ್ವಾಮಿ, ಸುಜಾತ, ರಂಗಸ್ವಾಮಿ, ರವಿ, ವೀರಣ್ಣ, ಕೆಂಚಣ್ಣ ಮುಂತಾದವರು ಉಪಸ್ಥಿತರಿದ್ದರು.