ಹರಪನಹಳ್ಳಿ:
ಪುರಸಭಾ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಪಟ್ಟಣದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದ್ದಾರೆ.
ಪಟ್ಟಣದ ಆಚಾರ ಬಡಾವಣೆಯ ನಿವಾಸದಲ್ಲಿ ಶುಕ್ರವಾರ ಪುರಸಭಾ ಚುನಾವಣೆ ವಿಜೇತ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ಗಳನ್ನು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, `ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದ್ದು, ಈ ಯಶಸ್ಸು ಹರಪನಹಳ್ಳಿ ನಗರದ ಅಭಿವೃದ್ಧಿಗೆ ಮೀಸಲಿಡಬೇಕು’ ಎಂದು ನೂತನ ಸದಸ್ಯರಿಗೆ ತಿಳಿಸಿದರು.
ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿದ್ದು, ನಮ್ಮಲ್ಲಿ ಆಂತರಿಕ ಭಿನ್ನಾಭಿಪ್ರಾಯವಿತ್ತು, ನನ್ನ ನಾಯಕತ್ವಕ್ಕೆ ಹಿನ್ನಡೆಯಾಗಬೇಕು ಎಂದು ಷಡ್ಯಂತರ ನಡೆದಿತ್ತು. ಅದನ್ನು ಮೀರಿ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ನಮ್ಮ ಆಕ್ಷೇಪವಿಲ್ಲ. ಆದರೆ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಕೆಲಸ ಮಾಡಿದರೆ ಪಕ್ಷ ಸಹಿಸೋಲ್ಲ. ಪಕ್ಷ ಸಂಘಟಿಸಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾಗಿದೆ’ ಎಂದರು.
`ಇಲ್ಲಿಯ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಬೇಕು, ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳಬೇಕು, ಮೂಲಭೂತ ಸೌಕರ್ಯ ಸಿಗಬೇಕು. ಆದ್ದರಿಂದ ಜಿಲ್ಲಾಧಿಕಾರಿಯವರನ್ನು ಇಲ್ಲಿಗೆ ಕರೆಯಿಸಿ ಪುರಸಭೆಯಲ್ಲಿ ನಾನೇ ಒಂದು ಸಭೆ ನಡೆಸುತ್ತೇನೆ’ ಎಂದು ಹೇಳಿದರು.
ಸ್ಥಳೀಯ ವಾಲ್ಮೀಕಿ ನಗರದ ಬೈಪಾಸ್ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ $4 ಕೋಟಿ ಅನುದಾನ ಕೇಳಿದ್ದೇನೆ. 100 ಎಕರೆ ಜಮೀನು ಖರೀದಿಸಿ ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆ ಇದೆ. ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಹರಪನಹಳ್ಳಿ ಪಟ್ಟಣದಲ್ಲಿ ಒಂದು ತಿಂಗಳೊಳಗೆ ಬೃಹತ್ ಸಮಾವೇಶ ಆಯೋಜಿಸುವ ಉದ್ದೇಶವಿದೆ. ಈಚೆಗೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋದ ಹಿರಿಯರನ್ನು ಮರಳಿ ಕರೆ ತರುತ್ತೇವೆ’ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್, ಪುರಸಭಾ ಮಾಜಿ ಅಧ್ಯಕ್ಷ ಎಂ.ರಾಜಶೇಖರ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ಆಲದಹಳ್ಳಿ ಷಣ್ಮುಖಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಕಟ್ಟಿ ಆನಂದಪ್ಪ, ಶಶಿಧರ ಪೂಜಾರ, ಪಿ.ಎಲ್ .ಪೋಮ್ಯನಾಯ್ಕ, ಜಾವೇದ್ ಹಾಗೂ ನೂತನ ಪುರಸಭೆ ಸದಸ್ಯರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ