ಶಾಲೆ ಆರಂಭಕ್ಕೂ ಮುನ್ನ ಪಠ್ಯ ಪುಸ್ತಕ ವಿತರಣೆ

ಚಿತ್ರದುರ್ಗ:

     ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಶಾಲೆ ಆರಂಭಕ್ಕೂ ಮುನ್ನವೇ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸುವ ಕಾರ್ಯ ಭರದಿಂದ ಸಾಗಿದೆ.

     ತಾಲ್ಲೂಕುವಾರು ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ಅದಕ್ಕಾಗಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಪಠ್ಯ ಪುಸ್ತಕ, ಸಮವಸ್ತ್ರ ವಿತರಣಾ ಕಾರ್ಯ ಶಾಲೆ ಪ್ರಾರಂಭಕ್ಕೂ ಒಂದು ವಾರ ಮುಂಚಿತವಾಗಿ ಆರಂಭವಾಗಿದೆ.

   `ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಲು ಕ್ರಮಕೈಗೊಳ್ಳಲಾಗಿದ್ದು, ಈಗಾಗಲೇ ಇಲಾಖೆಯಿಂದ ಶೇ 76.10ರಷ್ಟು ಪೂರೈಕೆಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆಂಥೋಣಿ ಮಾಹಿತಿ ನೀಡಿದರು.

` ಜಿಲ್ಲೆಯಿಂದ 16,96,939 ಪಠ್ಯ ಪುಸ್ತಕಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು. 12,91,441 ಪಠ್ಯ ಪುಸ್ತಕ ಪೂರೈಕೆಯಾಗಿದೆ. ಇನ್ನೂ 4,05,498 ಪಠ್ಯಪುಸ್ತಕಗಳು ಬರಬೇಕು’ ಎಂದು ಹೇಳಿದ್ದಾರೆ.

` ಉಚಿತ ಸಮವಸ್ತ್ರ ವಿತರಣೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 1, 2ನೇ ತರಗತಿಯ 31,594 ವಿದ್ಯಾರ್ಥಿಗಳಿಗೆ, 3 ಮತ್ತು 4ನೇ ತರಗತಿಯ 36,795 ವಿದ್ಯಾರ್ಥಿಗಳಿಗೆ, 5ರಿಂದ 7ನೇ ತರಗತಿಯ 53,692 ವಿದ್ಯಾರ್ಥಿಗಳಿಗೆ ಹಾಗೂ 8ರಿಂದ 10ನೇ ತರಗತಿಯ ಬಾಲಕರಿಗೆ 12,397 ಸಮವಸ್ತ್ರ ಬಂದಿವೆ. ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಮಾತ್ರ ಬಂದಿಲ್ಲ. ಒಂದು ವಾರದೊಳಗೆ ಸರಬರಾಜಾಗುವ ನಿರೀಕ್ಷೆ ಇದೆ. ಜಿಲ್ಲೆಯಾದ್ಯಂತ ಒಟ್ಟು 1,35,336 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

` ಇಲಾಖೆಯಿಂದ ಟ್ರಕ್‍ಗಳನ್ನು ಬಾಡಿಗೆ ಆಧಾರದಲ್ಲಿ ನಿಗದಿ ಮಾಡಿಕೊಂಡಿದ್ದು, ಪ್ರತಿ ದಿನ ಒಂದು ವಲಯಕ್ಕೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕ ಪಡೆಯುವುದಿಲ್ಲ. ಅನುದಾನ ರಹಿತ ಶಾಲೆಗಳಲ್ಲಿ ಮಾತ್ರ ಪಡೆಯಲಾಗುವುದು’ ಎಂದರು.

`ಕನ್ನಡ, ಆಂಗ್ಲ, ಉರ್ದು ಮತ್ತು ಸಂಸ್ಕೃತ ಮಾಧ್ಯಮ ಶಾಲೆಗಳಿಗೆ ವಿತರಣಾ ಪ್ರಕ್ರಿಯೆ ನಡೆಯುತ್ತಿದೆ. ಸ್ವತಃ ನಾನೇ ಭೇಟಿ ನೀಡಿ ವಿವಿಧೆಡೆ ಪರಿಶೀಲನೆ ನಡೆಸುತ್ತಿದ್ದೇನೆ’ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಅನುದಾನ ರಹಿತ 374 ಶಾಲೆಗಳಿದ್ದು, 1ರಿಂದ 10ನೇ ತರಗತಿಯವರೆಗೆ 68,538 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 39,003 ಬಾಲಕರು, 29,535 ಬಾಲಕಿಯರು ಇದ್ದು, ಅವರೆಲ್ಲರಿಗೆ ಸರ್ಕಾರದಿಂದ ಮಾರಾಟ ಪಠ್ಯ ಪುಸ್ತಕಗಳನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಡಿಡಿಪಿಐ ತಿಳಿಸಿದ್ದಾರೆ.

   ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ 5,592 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 2,373 ಬಾಲಕರು, 3,219 ಬಾಲಕಿಯರು ಇದ್ದು, ಈ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಾರಾಟ ಪಠ್ಯ ಪುಸ್ತಕಗಳನ್ನು ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link