ಹಿರಿಯೂರು :
ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಸರಳ ಬಹುಮತ ಬಂದಿದ್ದು, ಬಿಜೆಪಿಪಕ್ಷ ತೀವ್ರ ಮುಖಭಂಗ ಅನುಭವಿಸಿದೆ. ಆದರೆ ಈ ಚುನಾವಣೆಯಲ್ಲಿ ಪಕ್ಷೇತರ ಪ್ರಾಬಲ್ಯ ಎಂದಿನಂತೆ ಮುಂದುವರೆದಿದೆ.
ಇದೇ ಮೇ29ರಂದು ಹಿರಿಯೂರು ನಗರಸಭೆಗೆ ನಡೆದ ಚುನಾವಣೆಯಲ್ಲಿ 31 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ವಿವಿಧ ಪಕ್ಷಗಳ ಉಮೇದುವಾರರ ಪೈಕಿ 13ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ, ಜೆಡಿಎಸ್ 3ರಲ್ಲಿ ಖಾತೆ ತೆರೆದಿದೆ. ಇನ್ನುಳಿದ 9 ವಾರ್ಡ್‍ಗಳು ಪಕ್ಷೇತರರ ಪಾಲಾದರೆ. ಖುದ್ದು ಹಾಲಿ ಶಾಸಕರ ನೇತೃತ್ವದಲ್ಲಿ ಮತಬೇಟೆ ನಡೆದರೂ ಬಿಜೆಪಿ ಕೇವಲ 6 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆ.
ನಗರ ಪ್ರದೇಶ ಬಿಜೆಪಿ ಮತವರ್ಗ ಅಧಿಕವಾಗಿರುತ್ತದೆ ಎಂಬುದು ನಂಬಿಕೆ.ಆದರೆ 2008ರಿಂದ 2018ರವರೆಗೆ ಎರಡು ಬಾರಿ ಹಿರಿಯೂರು ಮತ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸುಧಾಕರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ, ಸಹ ನಗರ ಪ್ರದೇಶದಲ್ಲಿ ಅವರಿಗೆ ಲೀಡ್ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ನಗರಸಭೆ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಮತಗಳಿಸಿ ಗೆಲುವು ಸಾಧಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬಹುತೇಕ ವಾರ್ಡ್‍ಗಳಲ್ಲಿ ಭರ್ಜರಿ ಮತಪ್ರಚಾರ ನಡೆಸಿದ್ದರು. ಆದರೂ ನಿಷ್ಠೆ ಬದಲಿಸದ ಮತದಾರರು ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಕೈ ಹಿಡಿದಿದ್ದಾರೆ.
ಸೋತ ಪ್ರಮುಖರು :
ನಗರಸಭೆಯ ಜಿದ್ದಾಜಿದ್ದಿ ಕಣದಲ್ಲಿ ಕಳೆದ ಅವಧಿಯ ಬಿಜೆಪಿ ಬೆಂಬಲಿತ ನಗರಸಭೆ ಮಾಜಿ ಅಧ್ಯಕ್ಷೆ ಮಂಜುಳ ಕಾಂಗ್ರೆಸ್ ಅಭ್ಯರ್ಥಿ ಎದುರು 2ನೇ ವಾರ್ಡ್‍ನಲ್ಲಿ ಪರಾಭವಗೊಂಡರು. ಮಾಜಿ ಉಪಾಧ್ಯಕ್ಷ ರವಿಚಂದ್ರನಾಯ್ಕ 28ನೇ ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿ ಎದುರು ಸೋಲನಭವಿಸಿದ್ದಾರೆ.
ಶಾಸಕರ ಆಪ್ತ ಮಾಜಿ ಸದಸ್ಯ ಪ್ರೇಮ್‍ಕುಮಾರ್ 18ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಪರಾಭವಗೊಂಡಿದ್ದಾರೆ. 5ನೇ ವಾರ್ಡ್‍ನಲ್ಲಿ ಸ್ಪಧಿರ್ಸಿದ್ದ ಜೆಡಿಎಸ್‍ನ ರಾಜ್ಯ ಮುಖಂಡರಾದ ಬಿ.ಎಚ್.ಮಂಜುನಾಥ್‍ರವರ ಮಗನಾದ ಗುಂಡೇಶ್ 349 ಮತಗಳ ಲೀಡ್ ಪಡೆದು ಗೆದ್ದಿರುವುದು ಈ ಚುನಾವಣೆಯ ವಿಶೇಷವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
