ಸಾಲ ಭಾದೆ ತಾಳಲಾರದೆ ರೈತನ ಆತ್ಮಹತ್ಯೆ: ಶಾಸಕರಿಂದ ಕುಟುಂಬಕ್ಕೆ ಸಾಂತ್ವನ

ಹೊನ್ನಾಳಿ:

     ಸಾಲ ಬಾಧೆ ತಾಳಲಾರದೆ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.

      ಎಚ್. ಹಾಲೇಶಪ್ಪ(53) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ರೈತ ಹಾಲೇಶಪ್ಪ ಖಾಸಗಿಯಾಗಿ 6 ಲಕ್ಷ ರೂ. ಹಾಗೂ ವಿವಿಧ ಸಹಕಾರ ಸಂಘಗಳಲ್ಲಿ 60 ಸಾವಿರ ರೂ.ಗಳಷ್ಟು ಸಾಲ ಮಾಡಿದ್ದರು. ಸಾಲ ತೀರಿಸಲಾಗದೇ ನೇಣಿಗೆ ಕೊರಳೊಡ್ಡಿರುವುದಾಗಿ ಎಂದು ತಿಳಿದುಬಂದಿದೆ. ಮೃತ ರೈತನಿಗೆ ಪತ್ನಿ, 2 ಗಂಡು, 3 ಹೆಣ್ಣುಮಕ್ಕಳಿದ್ದಾರೆ.

       ಮೃತ ರೈತ ಹಾಲೇಶಪ್ಪ ಮತ್ತು ಆತನ ಸಹೋದರನ ನಡುವೆ ಒಟ್ಟು 2.3 ಎಕರೆ ಜಮೀನು ಇದ್ದು, ಬೆಳೆ ನಷ್ಟ ಮತ್ತು ಕೊಳವೆ ಬಾವಿಯಲ್ಲಿ ನೀರು ಲಭ್ಯವಾಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.ರೈತನ ಸಾವಿನ ಸುದ್ದಿ ತಿಳಿದ ತಕ್ಷಣ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾತ್ವನ ಹೇಳಿದರು. ಆತ್ಮಹತ್ಯೆಗಳಂತಹ ಕೃತ್ಯಕ್ಕೆ ರೈತರು ಕೈ ಹಾಕಬಾರದು. ಇದರಿಂದ ಮೃತರ ಕುಟುಂಬದವರಿಗೆ ತೀವ್ರವಾದ ತೊಂದರೆಯಾಗುತ್ತದೆ ಎಂದು ತಿಳಿಸಿದರು.

      ಮೃತನ ಕುಟುಂಬಕ್ಕೆ ಸರಕಾರದಿಂದ ಬರುವ ಪರಿಹಾರದ ಮೊತ್ತವನ್ನು ಆದಷ್ಟು ಬೇಗನೇ ತರಿಸಿ ವಿತರಿಸುವ ಕೆಲಸ ಮಾಡಲಾಗುವುದು. ಮೃತ ರೈತನ ಮಕ್ಕಳ ಶಿಕ್ಷಣಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

      ಸರಕಾರ ರೈತರ ಸಾಲ ಮನ್ನಾ ನಾಟಕವಾಡುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಜನ-ಜಾನುವಾರಗಳಿಗೆ ಕುಡಿಯಲು ನೀರಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ರಾಜ್ಯಾದ್ಯಂತ ಸಂಚರಿಸಿ ಸೂಕ್ತ ಕ್ರಮ ಜರುಗಿಸುವ ಕಾರ್ಯ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಮೃತ ಕುಟುಂಬಕ್ಕೆ ಅವರು ಸ್ಥಳದಲ್ಲಿಯೇ 5 ಸಾವಿರ ರೂ. ಧನಸಹಾಯ ನೀಡಿದರು. ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link