ಬಡ್ತಿ ಮೀಸಲಾತಿ ಜಾರಿ : ಸರ್ಕಾರಿ ನೌಕರರಲ್ಲಿ ಹರ್ಷ

ತುಮಕೂರು
 
      ಕರ್ನಾಟಕ ರಾಜ್ಯ ಬಡ್ತಿ ಮೀಸಲಾತಿ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಲ್ಲಿಗೆ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ 2017ನ್ನು ಜಾರಿಗೊಳಿಸಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ತಿಳಿಸಿದರು.
      ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 9.2.2017ರಲ್ಲಿ ಎಸ್‍ಸಿಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಬಗ್ಗೆ ಬಂದಿದ್ದ ವ್ಯತಿರಿಕ್ತ ತೀರ್ಪಿನಿಂದ 3799 ಮಂದಿ ವಿವಿಧ ಇಲಾಖೆಗಳ ನೌಕರರು ಹಿಂಬಡ್ತಿ ಅನುಭವಿಸಬೇಕಾಯಿತು.
   
       ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆಯನ್ನು ರೂಪಿಸಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿತ್ತು. 2014ರ ಜೂನ್ 18 ರಲ್ಲಿ ರಾಷ್ಟ್ರಪತಿ ಈ ಕಾಯ್ದೆಗೆ ಅಂಕಿತ ಹಾಕಿದ್ದರು. ಆದರೂ ಕೆಲವು ಅಡೆತಡೆಗಳಿಂದಾಗಿ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಅಡ್ಡಿ ಉಂಟಾಗಿತ್ತು. ಬುದ್ದಿಜೀವಿಗಳು, ಹೋರಾಟಗಾರರು ನಿರಂತರ ಹೋರಾಟ ಹಾಗೂ ಜನಪ್ರತಿನಿಧಿಗಳ ಬೆಂಬಲದಿಂದಾಗಿ ಈ ಕಾಯ್ದೆ ಜಾರಿಯಾಗಿದೆ ಎಂದರು. 
     ರಾಜ್ಯದಲ್ಲಿ 85 ಸಾವಿರ ಎಸ್ಸಿ ನೌಕರರು, 20 ಸಾವಿರ ಎಸ್ಟಿ ನೌಕರರು ಸೇರಿ ಒಟ್ಟು 1,05 ಲಕ್ಷ ನೌಕರರಿದ್ದಾರೆ. ಈ ಪೈಕಿ 3299 ಮಂದಿ ನೌಕರರಿಗೆ ಹಿಂಬಡ್ತಿಯಾಗಿತ್ತು. ಹಿಂಬಡ್ತಿಯಾದ ಸಂದರ್ಭದಲ್ಲಿ 13 ಜನ ನೌಕರರು ಆತಂಕಕ್ಕೆ ಒಳಗಾಗಿ ಕೆಲವು ಹೃದಯಘಾತಕ್ಕೆ ಒಳಗಾದರೆ ಇನ್ನು ಕೆಲವು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿದ್ದ ಎಸ್ಸಿ-ಎಸ್ಟಿ ನೌಕರರು ಕಳೆದ 27 ತಿಂಗಳಿನಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಕ್ಕೆ ಇಂದು ಜಯ ಸಿಕ್ಕಿದೆ ಎಂದರು. 
      ಈ ಕಾಯ್ದೆ ಜಾರಿಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಹೆಚ್. ಆಂಜನೇಯ, ಡಾ. ಹೆಚ್.ಸಿ. ಮಹದೇವಪ್ಪ, ಕಾಗೋಡು ತಿಮ್ಮಪ್ಪ, ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. 
     ಸದ್ಯದಲ್ಲೇ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಹೇಳುವ ಸಲುವಾಗಿ ಬೆಂಗಳೂರಿನಲ್ಲಿ ಬೃಹತ್ ಕೃತಜ್ಞತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಈ ಕೃತಜ್ಞತಾ ಸಮಾವೇಶ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷಗಳ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಈ ಸಮಾವೇಶ ನಡೆಸಲಾಗುವುದು ಎಂದರು. 
     ನ್ಯಾ. ಸದಾಶಿವ ಆಯೋಗದ ವೈಜ್ಞಾನಿಕ ಅಂಶಗಳನ್ನು ಪರಿಗಣಿಸಿ ದಲಿತರಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಎಸ್ಸಿ-ಎಸ್ಟಿ ನೌಕರರಿಗೆ ನೀಡಿದಂತೆ ಎಲ್ಲ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೂ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್, ರಾಜ್ಯ ಉಪಾಧ್ಯಕ್ಷ ರಾಜಣ್ಣ, ಶಿವಕುಮಾರ, ಜಿಲ್ಲಾಧ್ಯಕ್ಷ ಡಾ. ವೈ.ಕೆ. ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link