ಬೆಂಗಳೂರು
ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನ ಏನಾದರಾಗಲಿ.ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಸಚಿವರಿಗೆ ಹೇಳಿದ ಮಾತು ಇಂದಿನಿಂದಲೇ ಜಾರಿಗೆ ಬಂದಿದೆ.
ಕಳೆದ ಕೆಲ ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ವಿಧಾನಸೌಧ ಹಾಗೂ ವಿಕಾಸಸೌಧದ ತಮ್ಮ ಕಛೇರಿಗಳಿಗಿಂದು ಜೆಡಿಎಸ್‍ನ ಬಹುತೇಕ ಸಚಿವರು ಹಾಜರಾದರಲ್ಲದೆ,ಇಲಾಖೆಯ ಕೆಲಸ ಕಾರ್ಯಗಳ ಮೇಲೆ ಸಂಪೂರ್ಣ ಗಮನ ಹರಿಸಿದರು.ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾರಣದಿಂದ ಬಿಜಿಯಾಗಿದ್ದ ಸಚಿವರು ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮಂಕಾಗಿದ್ದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ,ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲು ಅನುಭವಿಸಿದ್ದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಉಭಯ ಪಕ್ಷಗಳ ಬಹುತೇಕ ಸಚಿವರು ವಿಧಾನಸೌಧ ಹಾಗೂ ವಿಕಾಸಸೌಧದ ತಮ್ಮ ಕಛೇರಿಗೆ ಬರುವುದನ್ನು ಕಡಿಮೆ ಮಾಡಿದ್ದರು.
ಆದರೆ ಇದನ್ನು ಗಮನಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಜಡ್ಡುಗಟ್ಟಿದ್ದ ತಮ್ಮ ಆಡಳಿತ ಯಂತ್ರಕ್ಕೆ ಚುರುಕು ನೀಡಲು ತೀರ್ಮಾನ ಮಾಡಿದ್ದಲ್ಲದೆ ಪಕ್ಷದ ಸಚಿವರಿಗೆ ಸೂಚನೆ ನೀಡಿ:ಇನ್ನು ಮುಂದೆ ಕಡ್ಡಾಯವಾಗಿ ವಾರಕ್ಕೆ ಮೂರ್ನಾಲ್ಕು ದಿನ ವಿಧಾನಸೌಧ ಹಾಗೂ ವಿಕಾಸಸೌಧದ ನಿಮ್ಮ ಕಛೇರಿಯಲ್ಲಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ.
ಸರ್ಕಾರದ ಕತೆಯನ್ನು ನಾವು ಹಾಗೂ ಕಾಂಗ್ರೆಸ್ ನಾಯಕರು ನೋಡಿಕೊಳ್ಳುತ್ರೇವೆ.ನಿಮ್ಮ ಪಾಡಿಗೆ ನೀವು ಇಲಾಖೆಯ ಕೆಲಸ ಮಾಡಿ.ಆ ಮೂಲಕ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಎಂದು ಸೂಚಿಸಿದ್ದಾರೆ .ಕುಮಾರಸ್ವಾಮಿಯವರ ಈ ಸೂಚನೆಯ ಹಿನ್ನೆಲೆಯಲ್ಲಿ ಅವರ ಸಂಪುಟದಲ್ಲಿರುವ ಬಹುತೇಕ ಜೆಡಿಎಸ್ ಸಚಿವರು ವಿಧಾನಸೌಧ ಹಾಗೂ ವಿಕಾಸಸೌಧದ ತಮ್ಮ ಕಛೇರಿಗಳಿಗಿಂದು ಆಗಮಿಸಿದ್ದಲ್ಲದೆ ಹಿರಿಯ ಅಧಿಕಾರಿಗಳ ಜತೆ ಮಹತ್ವದ ಚರ್ಚೆ ನಡೆಸಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ , ಸಣ್ಣ ನೀರಾವರಿ ಸಚಿವ ಪುಟ್ಟರಾಜು ಸೇರಿದಂತೆ ಹಲ ಸಚಿವರು ತಮ್ಮ ಕಛೇರಿಗಳಿಗೆ ಹಾಜರಾಗಿದ್ದರಾದರೂ ಮಾಧ್ಯಮದವರೊಂದಿಗೆ ಮಾತನಾಡಲು ಮಾತ್ರ ನಿರಾಕರಿಸಿದರು.