ಕರ್ಕಶ ಧ್ವನಿ ಹೊರಡಿಸುತ್ತಿದ್ದ ಬೈಕ್‍ಗಳ ಸೈಲೆನ್ಸರ್ ನಾಶ

ದಾವಣಗೆರೆ:

   ಕರ್ಕಶ ಶಬ್ಧದೊಂದಿಗೆ, ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿದ್ದ ಬುಲೆಟ್ ಸೇರಿದಂತೆ ವಿವಿಧ ಕಂಪೆನಿಗಳ 25ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದು, ಅವುಗಳ ಸೈಲನ್ಸರ್‍ಗಳನ್ನು ಜೆಸಿಬಿ ಯಂತ್ರದಿಂದ ನಾಶಪಡಿಸುವ ಜಂಟಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರದಿಂದ ಆರಂಭಿಸಿದ್ದಾರೆ.

    ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ಭಾರೀ ಸದ್ದಿನೊಂದಿಗೆ ಕರ್ಕಶ ಶಬ್ಧ ಹೊರಡಿಸುತ್ತಾ, ಶಬ್ಧ ಮಾಲಿನ್ಯ ಮಾಡುವುದರ ಜೊತೆಗೆ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ದೂದು ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾಯಲ್ ಎನ್‍ಫೀಲ್ಡ್ ಬುಲೆಟ್ ಸೇರಿದಂತೆ ಇತರೆ ಕಂಪೆನಿಗಳ ಬೈಕ್‍ಗಳ ದ್ವಿಚಕ್ರ ವಾಹನಗಳ ಸೈಲೆನ್ಸರ್‍ಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

    ನಗರದ ಎವಿಕೆ ಕಾಲೇಜು ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಜಯದೇವ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಡಾ.ಮೋದಿ ವೃತ್ತ ಸೇರಿದಂತೆ ಸಂಚಾರಿ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ರಾಯಲ್ ಎನ್‍ಫೀಲ್ಡ್ ಬುಲೆಟ್ ಸೇರಿದಂತೆ ವಿವಿಧ ಕಂಪೆನಿಗಳ ಸುಮಾರು 25ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದು, ಬಡಾವಣೆ ಪೊಲೀಸ್ ಠಾಣೆ ಆವರಣಕ್ಕೆ ತಂದು, ಮೆಕ್ಯಾನಿಕ್‍ಗಳನ್ನು ಕರೆಯಿಸಿ, ಬೈಕ್‍ಗಳ ಸೈಲೆನ್ಸರ್‍ಗಳನ್ನು ಗಾಡಿಯಿಂದ ಬಿಚ್ಚಿಸಿ, ಜೆಸಿಬಿ ಯಂತ್ರದಿಂದ ಸಾಲು ಸಾಲಾಗಿ ಜೋಡಿ ನಾಶಪಡಿಸಲಾಯಿತು.

     ಆಸ್ಪತ್ರೆ, ಶಾಲಾ-ಕಾಲೇಜು, ಮನೆಗಳ ಸುತ್ತಮುತ್ತ ಇಂತಹ ಬುಲೆಟ್, ಬೈಕ್‍ಗಳಿಂದ ಕರ್ಕಶ ಶಬ್ಧದ ಹಿನ್ನೆಲೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಟ ಆರ್.ಚೇತನ್ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಆರ್‍ಟಿಓ ಅಧಿಕಾರಿಗಳ ತಂಡ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಿದ್ದು, ಇದು ನಿರಂತರವಾಗಿ ಮುಂದುವರಿಯಲಿದ್ದು, ಮಂಗಳವಾರದಿಂದ ಈ ಕಾರ್ಯಾಚರಣೆಯನ್ನು ಜಿಲ್ಲಾದ್ಯಂತ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

     ಕಾರ್ಯಾಚರಣೆ ಆರಂಭಿಸಿದ ಮೊದಲ ದಿನವೇ ಬುಲೆಟ್ ಸೇರಿದಂತೆ 25ಕ್ಕೂ ಹೆಚ್ಚು ದ್ವಿಚಕ್ರ ವಾಹನ ವಶಕ್ಕೆ ಪಡೆದು, ಅವುಗಳ ಕರ್ಕಶ ಸದ್ದಿನ ಸೈಲೆನ್ಸರ್ ತೆಗೆಸಿದ್ದೇವೆ. ಕಂಪನಿಯಿಂದ ಬಂದ ಮೂಲ ಸೈಲೆನ್ಸರ್ ತಂದು ಅಳವಡಿಸುವಂತೆ ಅವುಗಳ ಮಾಲೀಕರಿಗೂ ಸೂಚಿಸಿದ್ದೇವೆ. ಅಲ್ಲದೇ, ವಾಹನ ವಿಮಾ ಮಾಡಿಸದೇ ಇರುವುದು, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಮಾಡಿಸದೇ ಇರುವುದು, ಕರ್ಕಶ ಸದ್ದು ಮಾಡಿದ್ದು, ಆರ್‍ಟಿಓ ನಿಯಮಾನುಸಾರ ಗಾಡಿ ಇಲ್ಲದ ಪ್ರಕರಣ ಹೀಗೆ ನಾನಾ ಕೇಸ್‍ಗಳನ್ನೂ ದಾಖಲಿಸಿ, ಬೈಕ್ ಮಾಲೀಕರಿಗೆ ದಂಡ ವಿಧಿಸಲಾಗಿದೆ ಎಂದು ಡಿಎಸ್ಪಿ ಎಸ್.ಎನ್.ನಾಗರಾಜ ತಿಳಿಸಿದ್ದಾರೆ.

      ಗಾಡಿ ವಶಕ್ಕೆ ಪಡೆಯುವ ಅವಧಿಯಲ್ಲಿ ವಿಮೆ ಮಾಡಿಸದೇ ಇರುವುದು, ಥರ್ಡ್ ಪಾರ್ಟಿ ವಿಮೆ ಮಾಡಿಸದಿರುವುದು, ನಂಬರ್ ಪ್ಲೇಟ್ ಹೀಗೆ ನಾನಾ ಕೇಸ್ ಮಾಡಲಾಗುತ್ತಿದೆ. ವಶಕ್ಕೆ ಪಡೆದ ಬೈಕ್‍ಗಳ ಮಾಲೀಕರು ವಾಹನ ವಿಮಾ, ಮೂರನೇ ವ್ಯಕ್ತಿ ವಿಮೆ ಮಾಡಿಸಿಕೊಂಡು ಬಂದ ನಂತರವೇ ಗಾಡಿ ಮರಳಿಸುತ್ತೇವೆ. ಇದು ಬರೀ ಕರ್ಕಶ ಸದ್ದು ಮಾಡುವ ವಾಹನಗಳಷ್ಟೇ ಅಲ್ಲ ಎಲ್ಲಾ ವಾಹನಗಳಿಗೂ ಅನ್ವಯಿಸಲಿದೆ . ಇದರ ಜೊತೆಗೆ ಅತಿ ವೇಗ, ಅಜಾಗರೂಕತೆ ವಾಹನ ಚಾಲನೆ, ಅಪ್ರಾಪ್ತರ ಕೈಗೆ ವಾಹನ ನೀಡಿದವರ ವಿರುದ್ಧವೂ ಇನ್ನೂ ಮುಂದೆ ಕ್ರಮ ಕೈಗೊಳ್ಳುತ್ತೇವೆಂದು ಎಚ್ಚರಿಸಿದರು.

      ವೃತ್ತ ನಿರೀಕ್ಷಕ ಆನಂದ್, ಆರ್‍ಟಿಓ ಇನ್ಸಪೆಕ್ಟರ್ ಮಹಮ್ಮದ್ ಖಾಲಿದ್, ಸಂಚಾರ ಠಾಣೆಯ ಅಂಜಿನಪ್ಪ, ಹನುಮಂತಪ್ಪ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ